ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಸುಭಾಶ್ಚಂದ್ರ ವಾಗ್ಲೆ ಮತ್ತು ನವೀನ್.ಕೆ ಇನ್ನ ಆಯ್ಕೆ

Spread the love

ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಸುಭಾಶ್ಚಂದ್ರ ವಾಗ್ಲೆ ಮತ್ತು ನವೀನ್.ಕೆ ಇನ್ನ ಆಯ್ಕೆ

ಉಡುಪಿ: ತನ್ನ 25 ರ ಹರೆಯದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸ್ತಿ ಪಡೆದ ದಿ.ರಾಜೇಶ ಶಿಬಾಜೆ ಹೆಸರಿನಲ್ಲಿ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಘಟಕವು ನೀಡುವ ಪ್ರತಿಷ್ಠಿತ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಉಡುಪಿಯ ಹಿರಿಯ ಪತ್ರಕರ್ತ ಕನ್ನಡ ಪ್ರಭ ವರದಿಗಾರ ಸುಭಾಶ್ಚಂದ್ರ ಎಸ್.ವಾಗ್ಲೆ  ಮತ್ತು ಮುಂಬಯಿಯ ಕರ್ನಾಟಕ ಮಲ್ಲದಲ್ಲಿ 25 ವರ್ಷಗಳಿಂದ ಕ್ರೀಡಾ ಅಂಕಣವನ್ನು ಬರೆಯುತ್ತಿರುವ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಾರ ನವೀನ್.ಕೆ, ಇನ್ನ ಅವರು ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

ಸುಭಾಶ್ಚಂದ್ರ ಎಸ್. ವಾಗ್ಳೆ

1996ರಲ್ಲಿ ಪುತ್ತೂರಿನ ಜನ ಈ ದಿನ ಪತ್ರಿಕೆಯಲ್ಲಿ ಛಾಯಾಚಿತ್ರಗ್ರಾಹಕರಾಗಿ ವೃತ್ತಿ ಆರಂಭ. ,1998ರಲ್ಲಿ ಸುಪ್ರಭಾತ ಛಾನೆಲ್, 1999ರಲ್ಲಿ ಕಾವೇರಿ ಛಾನೆಲ್, 2000ರಲ್ಲಿ ಉಡುಪಿ ದರ್ಶನ ಕೇಬಲ್ ಛಾನೆಲ್, 2002ರಲ್ಲಿ ಕನ್ನಡಪ್ರಭದ ಮಣಿಪಾಲ ವರದಿಗಾರ, 2003ರಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಸೇವೆ ಆರಂಭಿಸಿ ಅದೇ ಪತ್ರಿಕೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಛಾಯಾಗ್ರಹಣ ಅವರ ಪ್ರೀತಿಯ ಕ್ಷೇತ್ರ, ಸಾಹಿತ್ಯಾಸಕ್ತರು.

ಉಡುಪಿ ಜಿಲ್ಲೆಯ ಸಂವೇದನಾಶೀಲ ಪತ್ರಕರ್ತರಲ್ಲಿ ಸುಭಾಶ್ಚಂದ್ರ ಎಸ್. ವಾಗ್ಳೆ ಕೂಡಾ ಒಬ್ಬರು. ಕಳೆದ ಎರಡು ದಶಕದಿಂದ ಕಾರ್ಯನಿರತ ಪತ್ರಕರ್ತರಾಗಿ ಕರ್ತವ್ಯದ ಜೊತೆಗೆ ಸಾಮಾಜಿಕ ಕಾಳಜಿಯನ್ನೂ ತಮ್ಮ ವರದಿಗಳ ಮೂಲಕ ದಾಖಲಿಸುತ್ತಾ ಬಂದಿದ್ದಾರೆ. ನಗರ ಕೇಂದ್ರಿತ ವರದಿಗಾರಿಕೆಯ ಭರಾಟೆಯಲ್ಲೂ ಗ್ರಾಮೀಣ ಸತ್ವದ ಬರಹಗಳಿಗೆ ಆದ್ಯತೆ ಕೊಟ್ಟವರು ವಾಗ್ಳೆ.

21 ವರ್ಷಗಳ ಕಾಲ ಹೊಸತನದ ಹುಡುಕಾಟದಲ್ಲಿ ಕೆಲವೊಂದು ದಾಖಲಾರ್ಹ ವರದಿಗಳನ್ನು ಇವರು ಕನ್ನಡಪ್ರಭ ಪತ್ರಿಕೆಯ ಮೂಲಕ ಬೆಳಕಿಗೆ ತಂದಿದ್ದಾರೆ. ಅವುಗಳಲ್ಲಿ ಕೆಲವನ್ನು ಉಲ್ಲೇಖಿಸುವುದಾದರೆ.

– ಆದಿಉಡುಪಿಯಲ್ಲಿ ಗೋಸಾಗಾಟದ ಆರೋಪಿಗಳ ಮೇಲೆ ಕೆಲ ಸಂಘಟನೆಗಳು ನಡೆಸಿದ ಹಲ್ಲೆ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು ವಾಗ್ಳೆ ಅವರ ಲೇಖನಿಯಿಂದ ಅನ್ನೋದು ಉಲ್ಲೇಖನೀಯ. ಇದೇನೂ ಇರಾಕಾ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಬೆತ್ತಲೆ ಪ್ರಕರಣದ ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿತ್ತು. ಈ ಪ್ರಕರಣ ಮುಂದೆ ಚಳುವಳಿ, ಹೋರಾಟದ ಸ್ವರೂಪ ಪಡೆದು ರಾಜ್ಯ ಮಟ್ಟದಲ್ಲಿ ಸೈದ್ದಾಂತಿಕ ಚರ್ಚೆಗಳನ್ನು ಹುಟ್ಟುಹಾಕಿತ್ತು.

  – ಅಷ್ಟಮಠಗಳ ರಥಬೀದಿಯಲ್ಲಿ ಕನಕನ ಕಿಂಡಿಯ ಮೇಲಿನ ಗೋಪುರ ಉರುಳಿದಾಗ, ಉಡುಪಿಯ ಪ್ರಜ್ಞಾವಂತರು ಮಮ್ಮಲ ಮರುಗಿದ್ದರು. ಅಲ್ಲೊಂದು ಭಿನ್ನಧ್ವನಿ ಕೇಳಿಬಂದಾಗ ಅದನ್ನು ತಮ್ಮ ವರದಿಯ ಮೂಲಕ ರಾಜ್ಯದ ಗಮನ ಸೆಳೆದವರು ವಾಗ್ಳೆ. ನಂತರ ಕನಕಗೋಪುರ ವಿವಾದ ಮತ್ತೊಮ್ಮೆ ಸೈದ್ದಾಂತಿಕ ಸಂಘರ್ಷ ಮತ್ತು ಸಾಮರಸ್ಯಕ್ಕೆ ವೇದಿಕೆ ಕಲ್ಪಿಸಿತ್ತು.

-ಪಂಚಾಯತ್ ರಾಜ್ ಸಬಲೀಕರಣ ವಾಗ್ಲೆ ಅವರ ಬರಹಗಳ ಮೂಲ ಆಶಯ. ಪಂಚಾಯತ್ ಕಚೇರಿಗಳಲ್ಲಿ ಕಂಪ್ಯೂಟರ್ ಖರೀಧಿಯಲ್ಲಾದ ಹಗರಣದ ವಾಸನೆಯ ಜಾಡು ಹಿಡಿದು ಪ್ರಕಟಿಸಿದ ತನಿಖಾವರದಿ ವಾಗ್ಳೆ ಅವರಿಗೆ ಅತ್ಯಂತ ಖುಷಿಕೊಟ್ಟ ಸಾಧನೆ. ಅವರ ಈ ವರದಿ ವಿಧಾನಸಭೆಯಲ್ಲಿಯೂ ಧ್ವನಿಸಿ, ಹಗರಣದ ತನಿಖೆಗೆ ಸರ್ಕಾರ ಉನ್ನತ ಸಮಿತಿಯನ್ನೂ ರಚಿಸಬೇಕಾಯಿತು. ಈ  ಹಗರಣ ಬೆಳಕಿಗೆ ಬರಲು ವಾಗ್ಳೆ ಅವರು ಸರಣಿಯಾಗಿ ಬರೆದ ವರದಿಗಳು, ಮುಂದೆ ರಾಜ್ಯದ ಏಳು ಜಿಲ್ಲೆಗಳ ಜಿಪಂ ಸಿಇಒಗಳು ಅಮಾನತಾಗಿದ್ದು ಈ ವರದಿಗಳ ಫಲಶೃತಿಯೆಂದೇ ಹೇಳಬೇಕು.

  ಛಾಯಾಗ್ರಹಣದಲ್ಲೂ ಆಸಕ್ತಿಯ ಮಾತ್ರವಲ್ಲ ಪಾಂಡಿತ್ಯ ಪಡೆದವರು ವಾಗ್ಳೆ. ಆರಂಭದ ದಿನಗಳಲ್ಲಿ ಬೆಂಗಳೂರಿನಲ್ಲಿ ಫೆÇಟೋಗ್ರಫಿ ಮಾಡಿ, ಆ ಮೂಲಕವೇ ಪತ್ರಿಕೋದ್ಯಮಕ್ಕೆ ಬಂದವರು ಇವರು.

   ತುಳು ಇವರ ಆಸಕ್ತಿಯ ಕ್ಷೇತ್ರ. ತುಳು ಭಾಷೆಯಲ್ಲಿ ಅಧಿಕಾರಯುತವಾಗಿ ಬರೆಯಬಲ್ಲವರು. ಒಂದಿಷ್ಟು ಕವಿತೆ, ಒಂದಿಷ್ಟು ಹರಟೆ ಇವರ ತುಳು ಬರಹಗಳ ವೈಶಿಷ್ಟ್ಯ.

  ಸಾಹಿತ್ಯದ ಓದು, ನಾಟಕ ವೀಕ್ಷಣೆ – ವಿಮರ್ಶೆ ಇವರ ಸಾಂಸ್ಕೃತಿಕ ಆಸಕ್ತಿಗಳು. ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯ. ಕೃಷಿಯ ಬಗ್ಗೆ ಅತೀವ ಆಸಕ್ತಿಯಿದ್ದು ಅದು ಅವರ ವರದಿಗಾರಿಕೆಯಲ್ಲೂ ಪ್ರತಿಫಲಿಸುತ್ತಿದೆ.

  `ಜನ ಈದಿನ’ ಪತ್ರಿಕೆಯೊಂದಿಗೆ ಆರಂಭವಾದ ಇವರ ಪತ್ರಿಕೋದ್ಯಮದ ಪಯಣ ಮುಂದೆ ಕಾವೇರಿ, ಉಡುಪಿ ದರ್ಶನ ಮುಂತಾದ ಟಿವಿ ವಾಹಿನಿಗಳಲ್ಲೂ ಕೆಲಸ ಮಾಡಲು ಅವಕಾಶವಾಯಿತು. ಕನ್ನಡ ಡಿಂಡಿಮ ಪಾಕ್ಷಿಕದಲ್ಲೂ ಹವ್ಯಾಸಿಯಾಗಿ ಲೇಖನಗಳನ್ನು ಬರೆದ ಸುಭಾಶ್ಚಂದ್ರ ವಾಗ್ಲೆ ಕಳೆದ 13 ವರ್ಷಗಳಿಂದ ಕನ್ನಡಪ್ರಭ ದೈನಿಕದಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

  ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಶಾಲೆಯಲ್ಲಿ ಆರಂಭಿಕ ಓದು, ನಂತರ ಮಣಿಪಾಲ ಎಂಐಟಿಯಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಪಡೆದವರಾಗಿದ್ದಾರೆ. ಪತ್ನಿ, ಪುತ್ರಿ ತಂದೆ ತಾಯಿಯ ಜೊತೆಗೆ ಆತ್ರಾಡಿಯಲ್ಲಿ ವಾಸವಿದ್ದಾರೆ.

  ಉಡುಪಿಗೆ ಬರುವ ಹೊಸ ತಲೆಮಾರಿನ ಯುವ ಪತ್ರಕರ್ತರಿಗೆ ಸ್ನೇಹಿತನಂತೆ, ಮಾರ್ಗದರ್ಶಕನಂತೆ ಸಹಕರಿಸುತ್ತಿರುವ ಇವರು ಉಡುಪಿಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ.

ನವೀನ್ ಕೆ.ಇನ್ನ:

ಭಾರತೀಯ ಭಾಷಾ ಪತ್ರಿಕೋದ್ಯಮದಲ್ಲಿಯೇ ದಾಖಲೆಯೆಂಬಂತೆ ಕಳೆದ 25 ವರ್ಷಗಳಿಂದ ಒಂದೇ ಪತ್ರಿಕೆಯಲ್ಲಿ ಪ್ರತಿವಾರ ಕ್ರೀಡಾ ಅಂಕಣ ಬರೆಯುತ್ತಾ ಬಂದವರು. ಯಾಉದೇ ಫಲಾಪೇಕ್ಷೆ ಪಡೆಯದೆ, ಗೌರವ ಧನ ಪಡೆಯದೆ ಈ ಅಂಕಣವನ್ನು ಬರೆಯುತ್ತಿದ್ದಾರೆ.ಕಾರ್ಕಳ ತಾಲೂಕಿನ ಇನ್ನದವರಾದ ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ, ಆದರೂ ಅವರಿಗೆ ತನ್ ನ ಹುಟ್ಟೂರಿನ ಬಗ್ಗೆ ವಿಶೇಷ ಕಾಳಜಿ. ಮುಂಬಯಿಯ ದೈನಿಕ ಕರ್ನಾಟಕ ಮಲ್ಲದ ವರದಿಗಾರರಾಗಿ, ಜಾಹಿರಾತುದಾರರಾಗಿ, ಸ್ವತಃ ಛಾಯಾಗ್ರಾಹಕರಾಗಿ ಮತ್ತು ಸಮಾಜ ಸೇವಕರಾಗಿ ಮುಂಬಯಿಯಲ್ಲಿ ಜನಪ್ರಿಯರಾಗಿದ್ದಾರೆ. ದೈವ, ದೇವರ ಬಗ್ಗೆ ಅಪಾರ ಅಭಿಮಾಣ ಹೊಂದಿರುವ ಅವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಮುಂಬಯಿಯ ದೈವಾರಾಧನೆಯ ಬಗ್ಗೆ ನಡೆದಾಡುವ ವಿಶ್ವಕೋಶವಾಗಿದ್ದಾರೆ.

ದಯಾನಂದ ಪೈ ಕುಂಟಾಡಿ ಅವರಿಂದ ಆರಂಭಿಸಿ ಸತತವಾಗಿ ಈ ಗೌರವವನ್ನು ಮೊದಲು ಯುವ ಪ್ರತಿಭಾ ವೇದಿಕೆ ಮೂಲಕ ಮತ್ತು ಈಗ ಪತ್ರಕರ್ತರ ವೇದಿಕೆ ಮೂಲಕ ಈ ಗೌರವ ನೀಡಲಾಗುತ್ತಿದೆ. ಪಾಲಾಕ್ಷ ಸುವರ್ಣ ಬೆಳ್ತಂಗಡಿ, ಜಾನ್ ಡಿಸೋಜಾ ಕುಂದಾಪುರ, ಸುಕುಮಾರ ಮುನಿಯಾಲ್, ಯು.ಎಸ್.ಶೆಣೈ, ವಿಲಾಸ್ ಕುಮಾರ್ ನಿಟ್ಟೆ, ಧನಂಜಯ ಗುರುಪುರ, ಚಂದ್ರ ಕೆ. ಹೆಮ್ಮಾಡಿ ಮೊದಲಾದವರಿಗೆ ಈ ಹಿಂದೆ ರಾಜೇಶ ಶಿಬಾಜೆ ಮಾಧ್ಯಮ ಗೌರವ ನೀಡಲಾಗಿದೆ.

 


Spread the love