ರಾಷ್ಟ್ರಪತಿಗಳನ್ನು ಸ್ವಾಗತಿಸಲು ಕಸದ ರಾಶಿಯೊಂದಿಗೆ ಸಜ್ಜಾದ ಉಡುಪಿ ನಗರಸಭೆ!

Spread the love

ರಾಷ್ಟ್ರಪತಿಗಳನ್ನು ಸ್ವಾಗತಿಸಲು ಕಸದ ರಾಶಿಯೊಂದಿಗೆ ಸಜ್ಜಾದ ಉಡುಪಿ ನಗರಸಭೆ!

ಉಡುಪಿ: ಸ್ವಚ್ಚತೆಗಾಗಿ ರಾಷ್ಟ್ರ ರಾಜ್ಯ ಪ್ರಶಸ್ತಿಗಳನ್ನು ಪಡೆದ ರಾಜ್ಯದ ಪ್ರತಿಷ್ಟಿತ ಉಡುಪಿ ನಗರಸಭೆ ರಾಶಿ ರಾಶಿ ಕಸದ ರಾಶಿಯೊಂದಿಗೆ ದೇಶದ ಘನವೆತ್ತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಸ್ವಾಗತಿಸಲು ಸರ್ವ ಸನ್ನದ್ದವಾಗಿದೆ.

ದೇಶದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ರಾಷ್ಟ್ರಪತಿಯಾದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಉಡುಪಿಯ ಕೃಷ್ಣ ಮಠ ಹಾಗೂ ಕೊಲ್ಲೂರು ಮುಕಾಂಬಿಕ ದೇವಸ್ಥಾನಗಳಿಗೆ ಜೂನ್ 18 ರಂದು ಭಾನುವಾರ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯವರ ಭೇಟಿಗೆ ಕೇವಲ 2 ದಿನಗಳು ಮಾತ್ರ ಬಾಕಿ ಇದ್ದು ರಾಷ್ಟ್ರಪತಿಗಳು ಹಾದು ಹೋಗುವ ಮಾರ್ಗದ ಪಕ್ಕದಲ್ಲಿಯೇ ರಾಷ್ಟ್ರಪತಿಗಳನ್ನು ಸ್ವಾಗತಿಸಲು ರಾಶಿ ರಾಶಿ ಕಸದ ತ್ಯಾಜ್ಯ ಸಜ್ಜಾಗಿ ನಿಂತಿದೆ. ಅಷ್ಟೊಂದು ಕಸದ ರಾಶಿಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿದ ಕುರಿತು ಈಗಾಗಲೇ ಮಾಧ್ಯಮಗಳು ಸುದ್ದಿ ಮಾಡಿದರೂ ಕೂಡ ನಗರಸಭೆ ದಿವ್ಯ ಮೌನವಹಿಸಿ ತನಗೆ ಸಂಬಂಧವೇ ಇಲ್ಲದಂತೆ ಸುಮ್ಮನೆ ಕುಳಿತಿರುವುದು ವಿಪರ್ಯಾಸ.

ದೇಶದ ರಾಷ್ಟ್ರಪತಿಗಳು ಭಾನುವಾರ ಬೆಳಿಗ್ಗೆ 10.25 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಸೇನಾ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡಿಗೆ ಆಗಮಿಸಿಲಿದ್ದಾರೆ. ಅವರ ಆಗಮನಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ಸಜ್ಜುಗೊಳ್ಳುತ್ತಿದ್ದು ಪಿಡಬ್ಲೂಡಿ ಇಲಾಖೆ ಇದರ ನೇತೃತ್ವವನ್ನು ವಹಿಸಿಕೊಂಡಿದೆ. ಆದಿ ಉಡುಪಿಯಿಂದ ನೇರವಾಗಿ ರಸ್ತೆಯ ಮೂಲಕ ಸರಕಾರಿ ಗೆಸ್ಟ್ ಹೌಸಿಗೆ ತೆರಳಲಿದ್ದಾರೆ. ಅವರ ಹಾದು ಹೋಗುವ ಆದಿ ಉಡುಪಿ – ಕೃಷ್ಣ ಮಠ ರಸ್ತೆಯ ರೀಪೇರಿ ಕೆಲಸ ನಡೆಯುತ್ತಿದ್ದು ಕರಾವಳಿ ಬೈಪಾಸ್ ಬಳಿ ಅಂಡರ್ ಪಾಸ್ ರಸ್ತೆಯನ್ನು ತುರ್ತಾಗಿ ನಿರ್ಮಿಸುವ ಕೆಲಸ ನವಯುಗ ಕಂಪೆನಿ ನಡೆಸುತ್ತಿದೆ.

ರಾಷ್ಟ್ರಪತಿಗಳು ಹಾದು ಹೋಗುವ ಕರಾವಳಿ ಬೈಪಾಸ್ ಬಳಿ ಅಂಡರ್ ಪಾಸ್ ರಸ್ತೆಯ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಬದಿಯಲ್ಲೇ ರಾಶಿ ರಾಶಿ ಎಳನೀರಿನ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸದ ತುಂಬಿ ತುಳುಕುತ್ತದೆ. ಈ ಕುರಿತು ಮ್ಯಾಂಗಲೋರಿಯನ್ ಡಾಟ್ ಕಾಂ ಸವಿಸ್ತಾರ ಸುದ್ದಿಯನ್ನು ಜೂನ್ 10 ರಂದು ಪ್ರಕಟಿಸಿತ್ತು. ಸುದ್ದಿಯನ್ನು ಒದಿದ ಹಲವು ನಗರಸಭಾ ಸದಸ್ಯರು ಕೂಡ ಕಸವನ್ನು ತೆಗೆಯುವುದಾಗಿ ಭರವಸೆಯ ಮಾತುಗಳನ್ನಾಡಿದ್ದರು ಆದರೆ ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ನಗರಸಭೆಗೆ ಸ್ವಚ್ಚತಾ ಅಭಿಯಾನಕ್ಕೆ ವಿಶೇಷ ರಾಯಭಾರಿಯನ್ನು ಕೂಡ ನೇಮಿಸಿದ್ದು ಸ್ವಚ್ಚತಾ ಅಭಿಯಾನ ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ. ಅಲ್ಲದೆ ಅಲ್ಲಿರುವ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ನಗರಸಭೆಯ ಆಡಳಿತ ಅಥವಾ ಅಧಿಕಾರಿ ವರ್ಗ ಕೂಡ ಮನಸ್ಸು ಮಾಡಿದಂತಿಲ್ಲ.
ಜಿಲ್ಲೆಗೆ ಪ್ರಥಮ ಬಾರಿಗೆ ರಾಷ್ಟ್ರಪತಿಗಳು ಭೇಟಿ ನೀಡುತ್ತಿದ್ದು ಅವರ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಜ್ಜಾಗಿರುವುದು ಸರಿಯೇ ಆದರೆ ಅವರದ್ದೇ ಕ್ಷೇತ್ರ ವ್ಯಾಪ್ತಿಯಲ್ಲಿ ರಾಷ್ಟ್ರಪತಿಗಳು ಹಾದು ಹೋಗುವ ರಸ್ತೆಯ ಪಕ್ಕದಲ್ಲಿ ಇಷ್ಟೊಂದು ಕಸವನ್ನು ರಾಶಿ ಹಾಕಿರುವುದು ಅವರ ಕಣ್ಣಿಗೆ ಕಾಣದೇ ಇರುವುದು ಕೂಡ ಆಶ್ಚರ್ಯ. ಮುಂದಿನ ಎರಡು ದಿನಗಳ ಅವಧಿಯಲ್ಲಾದರೂ ಈ ಕಸದ ವಿಲೇವಾರಿ ಆಗುತ್ತದೋ ಕಾದು ನೋಡಬೇಕಾಗಿದೆ.


Spread the love

1 Comment

  1. Who is Udupi MLA? Does he have any responsibility or not? If he can take credit for every project and funding, why can’t he come forward and take credit for the mess as well?

Comments are closed.