ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದೇಶದಲ್ಲೇ ಪ್ರಥಮ ಎನ್ನುವಂತಹ ನೂತನ ಜೀವವಿಮೆ ಸುರಕ್ಷೆ – ಶಾಸಕ ಕಾಮತ್

Spread the love

ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದೇಶದಲ್ಲೇ ಪ್ರಥಮ ಎನ್ನುವಂತಹ ನೂತನ ಜೀವವಿಮೆ ಸುರಕ್ಷೆ – ಶಾಸಕ ಕಾಮತ್

ಮಂಗಳೂರು: ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ ಮಾಲಕರಿಗೆ ಬೆಂಬಲ ನೀಡುವ ಯೋಜನೆಯೊಂದನ್ನು ಒಡಿಯೂರು ಶ್ರೀಗಳ 60ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಜಾರಿ ಮಾಡಲು ಉದ್ದೇಶಿಸಲಾಗಿದೆ. ತನ್ನ ಹಾಗೂ ತರ್ಜನಿ ಇನ್ಸೂರೆನ್ಸ್ ಎಂಡ್ ಕ್ಲೈಮ್ಸ್ ಸಹಕಾರರೊಂದಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹರ್ದ ಸಹಕಾರಿ ಯೋಜನೆಯನ್ನು ವಿನ್ಯಾಸಗೊಳಿಸಿದೆ. ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ ಮಾಲಕರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಂಗಳೂರು ದ. ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಅವರು ಇಲ್ಲಿನ ಡೊಂಗರಕೇರಿ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ವಿನೂತನ ವಾಹನ ವಿಮಾ ಯೋಜನೆಯ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ ಮಾಲಕ ಕಷ್ಟ ಕಾರ್ಪಣ್ಯಗಳನ್ನು ಅರಿತು ಒಡಿಯೂರು ಶ್ರೀಗಳು ಯೋಜನೆಯ ಜಾರಿಗೆ ಅನುವುಮಾಡಿಕೊಟ್ಟಿದ್ದಾರೆ ಎಂದು ನುಡಿದ ಶಾಶಕರು, ಇದರಡಿಯಲ್ಲಿ ವಾರ್ಷಿಕ ಪ್ರೀಮಿಯಂಗೆ ರಿಯಾಯಿತಿ ಲಭಿಸಲಿದೆ. ಬೋನೆಟ್ ಟು ಬೋನೆಟ್ ಜೀವವಿಮಾ ಕವರೇಜನ್ನು ಯೋಜನೆ ಹೊಂದಲಿದೆ. ನಗರದ ಆಯ್ದ ಗ್ಯಾರೇಜ್’ಗಳಲ್ಲಿ ಕ್ಯಾಶ್’ಲೆಸ್ ರಿಪೇರಿ ಸೌಲಭ್ಯ ಇರುತ್ತದೆ ಎಂದು ವಿವರಿಸಿದರು.

ಅಪಘಾತ ಸಂದರ್ಭಗಳಲ್ಲಿ ಚಾಲಕ ಮೃತಪಟ್ಟರೆ ಅವಲಂಬಿತರಿಗೆ ರೂ.15 ಲಕ್ಷ ಪರಿಹಾರ ಇರುತ್ತದೆ. ಇದು ಹಾವು ಕಡಿತ, ನೀರಿನಲ್ಲಿ ಬಿದ್ದು ಸಾವು, ಅಪಘಾತ ಮತ್ತು ಇತರ ಯಾವುದೇ ರೀತಿ ಆಕಸ್ಮಿಕಗಳಿಂದ ಮೃತರಾಗುವ ಚಾಲಕ ಮಾಲಕರಿಗೆ ಅನ್ವಯಿಸುತ್ತದೆ. ವಾರ್ಷಿಕ ಪ್ರೀಮಿಯಂ ಪಾವತಿಸಲು ಹಣದ ಅಡಚಣೆಯಾದರೆ ಸಾಮಾನ್ಯ ಬಡ್ಡಿ ದರದಲ್ಲಿ ಸೌಹಾರ್ದ ಸಹಕಾರಿಯಿಂದ ಗರಿಷ್ಟ ರೂ. 10,000 ಸಾಲ ಸೌಲಭ್ಯ ಒದಗಿಸುವುದು ಯೋಜನೆಯ ವಿಶೇಷತೆಯಾಗಿದೆ ಎಂದು ವೇದವ್ಯಾಸ್ ಕಾಮತ್ ವಿವರಿಸಿದರು.

ಹೊಸ ವಾಹನ ಖರೀದಿಸಿದಾಗಿ ಅಥವಾ ಜೀವವಿಮಾ ಕಂಪೆನಿಯನ್ನು ಬದಲಿಸಿದಾಗ ನೋ ಬೋನಸ್ ಸೌಲಭ್ಯವನ್ನು ವರ್ಗಾಯಿಸಲಾಗುವುದು ಎಂದು ಹೇಳಿದ ಶಾಸಕರು, ಕ್ಲೈಮ್ ಸಂದರ್ಭಗಳು ಬಂದಾಗ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹರ್ದ ಸಹಕರಿಸಲಿದೆ ಎಂದರು.

ಒಡಯೂರು ಶ್ರಿ ವಿವಿಧೋದ್ದೇಶ ಸೌಹರ್ದ ಸಹಕಾರಿ ಅಧ್ಯಕ್ಷ ಎ. ಸುರೇಶ್ ರೈ ಮಾತನಾಡಿ, ವಾಹನ ಅಪಘಾತದಲ್ಲಿ ಮರಣ ಹೊಂದಿದಾಗ ಮಾತ್ರ ಅವಲಂಬಿತರಿಗೆ ಪರಿಹಾರ ನೀಡುವುದು ಸಾಮಾನ್ಯ ಸಂಗತಿ. ಆದರೆ ನಾವು ಅದನ್ನು ಇತರ ಆಕಸ್ಮಿಕ ಮರಣಗಳು ಸಂಭವಿಸಿದ ಸಂದರ್ಭದಲ್ಲೂ ನೀಡಲು ಬದ್ಧರಿದ್ದೇವೆ. ಗಾಯಗೊಂಡು ಜೀವಚ್ಛಯ ಸ್ಥಿತಿಯಲ್ಲಿದ್ದರೂ ಪರಿಹಾರ ನೀಡಲು ಅವಕಾಶವಿದೆ. ಅಪಘಾತದಲ್ಲಿ ಗಾಯಗೊಂಡರೆ ರೂ.50,000 ತನಕ ಮೆಡಿಕ್ಲೈಮ್ ಸೌಲಭ್ಯ ನೀಡಲಾಗುವುದು ಎಂದರು.

ಶ್ರೀಗಳಿಂದ ಪ್ರೇರಿತವಾದ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದ್ದು, ಅಪೂರ್ವವಾಗಿದೆ. ಎಲ್ಲರೂ ಯೋಜನೆಯ ಪ್ರಯೋಜನ ಪಡೆಯಬೇಕು ಎಮದು ಸುರೇಶ್ ರೈ ಹೇಳಿದರು.

ಬಿಜೆಪಿ ಮುಖಂಡ ನಿತಿನ್ ಕುಮಾರ್, ಹಿರಿಯ ಆಟೋರಿಕ್ಷಾ ಚಾಲಕ ಸದಾನಂದ ಉರ್ವಸ್ಟೋರ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹರ್ದ ಸಹಕಾರಿಯ ಎಜಿಎಂ ತಾರಾನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತರ್ಜನಿ ಇನ್ಸೂರೆನ್ಸ್ ಮತ್ತು ಕ್ಲೈಮ್ಸ್’ನ ನಿರ್ದೇಶಕ ಸಂಜಯ ಪ್ರಭು ಸ್ವಾಗತಿಸಿದರು. ಪ್ರಥಮ ಹಂತದಲ್ಲಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕ -ಮಾಲಕ ಸಂಘಗಳ ಮುಖಂಡರಿಗೆ ಮಾಹಿತಿ ಕಾರ್ಯಾಗಾರ ಇದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಚಾಲಕ – ಮಾಲಕರಿಗೆ ಯೋಜನೆಯ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದವರು ಹೇಳಿದರು.


Spread the love