ರೈಲಿನಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣಿಕೆ – ಮೂವರ ಬಂಧನ

Spread the love

ರೈಲಿನಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣಿಕೆ – ಮೂವರ ಬಂಧನ

ಕುಂದಾಪುರ: ರೈಲಿನಲ್ಲಿ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ಭಟ್ಕಳ ಮೂಲದ ಮಹಮದ್ ಇಸ್ಮಾಯಿಲ್, ರಾಹೀಫ್, ಸಯ್ಯದ್ ಉಮ್ಮೆರ್ ಭಟ್ಕಳ್ ಎಂದು ಗುರುತಿಸಲಾಗಿದೆ.

ದಾಖಲೆಗಳಿಲ್ಲದೇ ಎರ್ನಾಕುಲಂ ಕಡೆಯಿಂದ ಅಕ್ರಮವಾಗಿ ರೈಲಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ತಂಡ ಕಾರ್ಯಾಚರಣೆಗಿಳಿದಿದ್ದು ಕುಂದಾಪುರ, ಬೈಂದೂರು, ಭಟ್ಕಳ ರೈಲು ನಿಲ್ದಾಣಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಬೈಂದೂರು ರೈಲು ನಿಲ್ದಾಣದಲ್ಲಿ ಮಹಮದ್ ಇಸ್ಮಾಯಿಲ್ ಭಟ್ಕಳ ಎಂಬಾತನಿಂದ 253 ಗ್ರಾಂ ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಭಟ್ಕಳದಲ್ಲಿ ರಾಹೀಫ್ ಎನ್ನುವಾತನಿಂದ 1.166 ಕೆಜಿ ಚಿನ್ನಾಭರಣ ಮತ್ತು ಸಯ್ಯದ್ ಉಮ್ಮೆರ್ ಎಂಬಾತನಿಂದ 213 ಗ್ರಾಂ ತೂಕದ ಚಿನ್ನ ವಶಪಡಿಸಿಕೊಳ್ಳಲಾಯಿತು. ಬಂಧಿತರಿಂದ ಒಟ್ಟು 61.47 ಲಕ್ಷ ರೂ. ಬೆಲೆಯ 1.633 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಎಎಸ್ಪಿ ನಿಖಿಲ್, ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಬೈಂದೂರು ಸಿಪಿಐ ಸುರೇಶ್ ನಾಯಕ್, ಉಡುಪಿ ಸಿಪಿಐ ಮಂಜುನಾಥ, ಕುಂದಾಪುರ ಎಸ್ಐ ಹರೀಶ್ ಆರ್. ನಾಯ್ಕ್ , ಭಟ್ಕಳ, ಕುಮಟಾ ಪಿಸ್ಐಗಳು, ಪ್ರೊಬೇಶನರಿ ಪಿಎಸ್ಐ ಸುದರ್ಶನ್, ಕುಂದಾಪುರ ಎಎಸ್ಪಿ ತಂಡದ ಮೋಹನ್, ಸಂತೋಷ್ ಕೊರವಡಿ, ಸಂತೋಷ್ ಹೊನ್ನಾಳ, ಮಂಜುನಾಥ, ಕೃಷ್ಣ, ಪ್ರಿನ್ಸ್, ಚಂದ್ರಶೇಖರ, ವಿಜಯ ಕುಮಾರ್, ಸಲೀಂವುಲ್ಲಾ ಕಾರ್ಯಾಚರಣೆ ನಡೆಸಿದ್ದರು.


Spread the love