ರೊಸಾರಿಯೊ ಕೆಥೆಡ್ರಲ್ನಲ್ಲಿ ‘ಭರವಸೆಯ ಜುಬಿಲಿ ವರ್ಷ 2025’ರ ಸಮಾರೋಪ; ಭರವಸೆಯ ಸಾಕ್ಷಿಗಳಾಗಲು ಬಿಷಪ್ ಕರೆ
ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ “ಭರವಸೆಯ ಜುಬಿಲಿ ವರ್ಷ 2025” (Jubilee Year of Hope 2025) ರವಿವಾರ, ಡಿಸೆಂಬರ್ 28 ರಂದು ಮಂಗಳೂರಿನ ಅವರ್ ಲೇಡಿ ಆಫ್ ಹೋಲಿ ರೊಸಾರಿಯೊ ಕೆಥೆಡ್ರಲ್ನಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿತು. ಪವಿತ್ರ ಕುಟುಂಬದ ಹಬ್ಬದಂದೇ ಈ ಸಮಾರೋಪ ವಿಧಿಗಳು ನಡೆದಿದ್ದು ವಿಶೇಷವಾಗಿತ್ತು.
![]()
ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಜುಬಿಲಿ ವರ್ಷದ ಮುಕ್ತಾಯದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಶ್ರೇಷ್ಠಗುರು ಅತೀ ವಂದನೀಯ ಮಾನ್ಸಿಂಜ್ಞೊರ್ ಮೆಕ್ಸಿಮ್ ನೊರೊನ್ಹಾ, ಅತೀ ವಂದನೀಯ ಫಾದರ್ ಡೇನಿಯಲ್ ವೇಗಸ್ OP, ಅತೀ ವಂದನೀಯ ಫಾದರ್ ನವೀನ್ ಪಿಂಟೊ, ಫಾದರ್ ವಲೇರಿಯನ್ ಡಿಸೋಜಾ, ಫಾದರ್ ಸಂತೋಷ್ ರೋಡ್ರಿಗಸ್, ಫಾದರ್ ರುಡಾಲ್ಫ್ ರವಿ ಡಿಸಾ, ಫಾದರ್ ಅನಿಲ್ ಐವನ್ ಫೆರ್ನಾಂಡಿಸ್, ಫಾದರ್ ಜೆ.ಬಿ. ಕ್ರಾಸ್ತಾ, ಫಾದರ್ ವಲೇರಿಯನ್ ಫೆರ್ನಾಂಡಿಸ್ ಮತ್ತು ಫಾದರ್ ಜೇಸನ್ ಲೋಬೋ ಅವರು ಸಹ-ಬಲಿಪೂಜೆ ನೆರವೇರಿಸಿದರು.
![]()
ವಿಶೇಷ ಜುಬಿಲಿ ವಿಧಿವಿಧಾನಗಳು: ಸಮಾರೋಪ ಸಮಾರಂಭದಲ್ಲಿ ಜುಬಿಲಿ ಅಧಿಕೃತ ವಿಧಿಗಳನ್ನು ಪಾಲಿಸಲಾಯಿತು:
ಜುಬಿಲಿ ಶಿಲುಬೆ: ವರ್ಷವಿಡೀ ಬಲಿಪೀಠದ ಬಳಿ ಇರಿಸಲಾಗಿದ್ದ ಅಲಂಕೃತ ಜುಬಿಲಿ ಶಿಲುಬೆಯು ಈ ದಿನದ ಕೇಂದ್ರ ಸಂಕೇತವಾಗಿತ್ತು.
ಸಾರ್ವತ್ರಿಕ ಪ್ರಾರ್ಥನೆ: ಈ ವರ್ಷದ ಆಧ್ಯಾತ್ಮಿಕ ಪಯಣವನ್ನು ನೆನಪಿಸುವ ಮತ್ತು ಚರ್ಚ್ ಹಾಗೂ ಲೋಕದ ಶಾಂತಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಕಾಣಿಕೆ ಅರ್ಪಣೆ: ಜುಬಿಲಿ ವರ್ಷದ ದಾನ-ಧರ್ಮದ ಸಂಕೇತವಾಗಿ ಬಡವರಿಗಾಗಿ ಸಂಗ್ರಹಿಸಿದ ವಿಶೇಷ ಕಾಣಿಕೆಗಳನ್ನು ದಿವ್ಯ ಬಲಿದಾನದ ವೇಳೆ ಅರ್ಪಿಸಲಾಯಿತು.
ಕೃತಜ್ಞತಾ ಗೀತೆ (Te Deum): ಜುಬಿಲಿ ವರ್ಷದಲ್ಲಿ ದೊರೆತ ಕೃಪೆ ಮತ್ತು ಪಾಪಕ್ಷಮೆಗಾಗಿ ಬಿಷಪ್ ಅವರ ನೇತೃತ್ವದಲ್ಲಿ ಇಡೀ ಸಭೆಯು ‘Te Deum’ ಕೃತಜ್ಞತಾ ಗೀತೆಯನ್ನು ಹಾಡಿತು.
![]()
ಬಿಷಪ್ ಅವರ ಸಂದೇಶ: ತಮ್ಮ ಪ್ರವಚನದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, “ಜುಬಿಲಿ ವರ್ಷದ ಆಚರಣೆಗಳು ಇಂದು ಮುಕ್ತಾಯಗೊಳ್ಳಬಹುದು, ಆದರೆ ನಮ್ಮಲ್ಲಿರುವ ಭರವಸೆ ಎಂದಿಗೂ ಬತ್ತಬಾರದು. ನಮ್ಮ ನಂಬಿಕೆಯು ನಮ್ಮನ್ನು ಭರವಸೆಯತ್ತ ಮುನ್ನಡೆಸಬೇಕು,” ಎಂದರು. ಪ್ರತಿ ಕುಟುಂಬವು ಕರುಣೆ, ದಯೆ, ನಮ್ರತೆ ಮತ್ತು ತಾಳ್ಮೆಯ ಗುಣಗಳಿಂದ ಕೂಡಿರಬೇಕು ಎಂದು ಅವರು ಹಿತವಚನ ನೀಡಿದರು.
ಧರ್ಮಕ್ಷೇತ್ರದ ಎಂಟು ಪುಣ್ಯಕ್ಷೇತ್ರಗಳಲ್ಲಿ ಈ ವರ್ಷ ಪಾಪಕ್ಷಮೆಯ ವಿಶೇಷ ಅವಕಾಶವಿತ್ತು. ಈ ವರ್ಷದ ಆಧ್ಯಾತ್ಮಿಕ ಶಕ್ತಿಯೊಂದಿಗೆ ಭಕ್ತರು ತಮ್ಮ ದೈನಂದಿನ ಜೀವನದಲ್ಲಿ ಇತರರಿಗೆ ಭರವಸೆ ನೀಡುವ ಸಾಕ್ಷಿಗಳಾಗಬೇಕು ಎಂದು ಅವರು ಕರೆ ನೀಡಿದರು. ಮಂಗಳ ಜ್ಯೋತಿ ನಿರ್ದೇಶಕ ಫಾದರ್ ರೋಹಿತ್ ಡಿಕೋಸ್ಟಾ ಬಲಿಪೂಜೆಯ ಕಾರ್ಯಾಕ್ರಮವನ್ನು ನಿರ್ವಹಿಸಿದರು.












