ಲಕ್ಷದೀಪೋತ್ಸವದಲ್ಲಿ ಕಾಡುಸಂರಕ್ಷಣೆಯ ವಿನೂತನ ಮಾದರಿ

Spread the love

ಲಕ್ಷದೀಪೋತ್ಸವದಲ್ಲಿ ಕಾಡುಸಂರಕ್ಷಣೆಯ ವಿನೂತನ ಮಾದರಿ

ಕಾಡಿನ ಕುರಿತು ನಿಮಗೆಷ್ಟು ಗೊತ್ತು? ಕಾಡು ಸಂರಕ್ಷಿಸಿ, ಉಳಿಸಲು ಅರಣ್ಯ ಇಲಾಖೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ನೀವು ತಿಳಿದಿರುವುದೆಷ್ಟು? ಮುಂದಿನ ಪೀಳಿಗೆಗೆ ಕಾಡು ಸಂರಕ್ಷಣೆಯ ಅರಿವು ಮೂಡಿಸುವ ವಿಧಾನಗಳು ಯಾವುವು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನೀವು ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಆಗಮಿಸಬೇಕು. ಇಲ್ಲಿಗೆ ಭೇಟಿ ನೀಡಿದರೆ ಈ ಪ್ರಶ್ನೆಗಳಿಗೆ ಉತ್ತರ ದೊರೆಯುವುದಷ್ಟೇ ಅಲ್ಲ, ಪರಿಸರದ ಪ್ರಜ್ಞೆಯೂ ನಿಮ್ಮೊಳಗೆ ಬೆರೆತುಬಿಡುತ್ತದೆ.

laksha-deepa-dharmastala

ಕರ್ನಾಟಕ ಅರಣ್ಯ ಇಲಾಖೆ’ಯು ಧರ್ಮಸ್ಥಳದ ಎಸ್‍ಡಿಎಂ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿರುವ ಕಾಡು ಸಂರಕ್ಷಣಾ ಮಾದರಿಯ ವಿಸ್ತøತ ಪ್ರಾತ್ಯಕ್ಷಿಕೆ ಅರಣ್ಯ ಸಂರಕ್ಷಣೆಯ ಸಂದೇಶ ಸಾರುತ್ತಿದೆ. ಅಳಿವಿನಂಚಿಗೆ ಪರಿಸರವನ್ನು ದೂಡುವುದು ಅಪಾಯಕಾರಿ ಎಂಬ ಎಚ್ಚರವನ್ನು ಕಟ್ಟಿಕೊಡುತ್ತಿದೆ.

ಅರಣ್ಯ ಸಂರಕ್ಷಣೆಗೆ ಸ್ಥಳೀಯ ಗ್ರಾಮಸ್ಥರನ್ನೊಳಗೊಂಡು ರಚಿಸಲಾಗುವ ಗ್ರಾಮ ಅರಣ್ಯ ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳು, ಕೃಷಿ ಚಟುವಟಿಕೆಯೊಂದಿಗೆ ಕಾಡನ್ನು ಬೆಳೆಸುವ ಉದ್ದೇಶದೊಂದಿಗೆ ರೂಪಿತವಾದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಕರ್ನಾಟಕದಾದ್ಯಂತ ಗುರುತಿಸಲಾಗಿರುವ ಔಷಧಿ ಸಸ್ಯಗಳ ಸಂರಕ್ಷಣಾ ವಲಯದಡಿ ದಕ್ಷಿಣ ಮತ್ತು ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಕಂಡುಬರುವ ಆರೋಗ್ಯ ಚಿಕಿತ್ಸೆಯಲ್ಲಿ ಬಳಸುವ ಔಷಧೀಯ ಸಸ್ಯಗಳ ಜತೆಗೆ ತೋಟದ ಅಂಚು ಅಥವಾ ಗಡಿಯಲ್ಲಿ ಬೆಳೆಯುವ ಔಷಧಿ ಸಸ್ಯಗಳ ವಿವರ, ಜಲ ಸಂರಕ್ಷಣೆಇತ್ಯಾದಿ ಮಾಹಿತಿಯನ್ನೊದಗಿಸಿವ ಪ್ಲೆಕ್ಸ್‍ಗಳಿವೆ.

ತುಳಸಿ, ಕೆಂಪು ಹೊನ್ನಗೊನೆ, ತುಂಬೆ, ಹಿಪ್ಪಲಿ, ಟಿಂಚರಗಿಡ, ಆಡುಸೋಗೆ, ಬನ್ನಿ, ಕಾಡು ಪುದಿನ, ನಾಗದಾಳಿ, ಚಕ್ರಮುನಿ, ಶಂಖಪುಷ್ವ, ನಿತ್ಯಪುಷ್ವ, ಲಾವಂಚ, ಮಂಗರಬಳ್ಳಿ, ಮೆಹಂದಿ, ಅರಳಿ, ನೆಲಬೇವು, ಲೋಳೆಸರ ಮೊದಲಾದ ಔಷಧೀಯ ಸಸ್ಯಗಳನ್ನು ತಂದು ಇರಿಸಲಾಗಿದೆ. ಗುಹೆ, ಪ್ರಾಣಿಗಳ ಕೂಗು, ಋಷಿ ಕುಟೀರ, ನೇತ್ರಾವತಿ ನದಿ ಉಗಮ ಸ್ಥಾನವಾದ ಸಹ್ಯಾದ್ರಿ ಪರ್ವತ, ನವಗ್ರಹ ವನ ಮೊದಲಾದ ಮಾದರಿಗಳನ್ನು ನಿರ್ಮಿಸಲಾಗಿದೆ. ಗುಹೆಯ ಮೂಲಕ ತೆರಳುವಾಗ ಧ್ವನಿವರ್ದಕದ ಮೂಲಕ ಪ್ರಾಣಿಗಳ ಕೂಗಿನ ಧ್ವನಿ ಕೇಳಿ ಬರುತ್ತಿರುತ್ತದೆ.

`ಕಾಡಿನ ಸೊಬಗು ನಾಡಿನ ಮೆರಗು’, `ಮಗುವಿಗೊಂದು ಮರ ಶಾಲೆಗೊಂದು ವನ’, `ಅರಣ್ಯ ಬೆಳೆದರೆ ಸಂಪತ್ತು’, `ಅರಣ್ಯ ಬರಿದಾದರೆ ಆಪತ್ತು’, `ವನ್ಯ ಜೀವಿಗಳ ರಕ್ಷಿಸಿ, ಜೀವ ಸಂಕುಲ ಉಳಿಸಿ’, `ವನ್ಯ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ’ `ಮರಗಳಾದರೆ ಚಿರಾಯು; ನಾವಾಗುವೆವು ದೀರ್ಘಾಯು’ ಎಂಬ ಘೋಷಣಾ ಫಲಕಗಳು ಸಂರಕ್ಷಣಾ ಮಾದರಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಬನ, ದೇವರಕಾಡು ಪದ್ಧತಿಗಳಿವೆ. ಆ ಕಾರಣಕ್ಕಾಗಿಯೇ ಅರಣ್ಯ ಸಂರಕ್ಷಣೆಯಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ವೀಕ್ಷಣಾ ಗೋಪುರಗಳಿರುತ್ತವೆ. ಕಾಡಿಗೆ ಬೆಂಕಿ ಬಿದ್ದಾಗ ವೀಕ್ಷಣಾ ಗೋಪುರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ತಿಳಿಯುತ್ತದೆ. ಇದರಿಂದ ತುರ್ತಾಗಿ ಬೆಂಕಿ ನಂದಿಸಲು ಸಾಧ್ಯವಾಗುತ್ತದೆ ಎಂದು ಮಾದರಿಗಳನ್ನು ತೋರಿಸುತ್ತ ಅರಣ್ಯ ಸಂರಕ್ಷಕ ಸಿಬ್ಬಂದಿ ಆನಂದ್ ವಿವರಿಸಿದರು.

ರಮಾನಾಥ ರೈ ಅವರು ಅರಣ್ಯ ಸಚಿವರಾದ ನಂತರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ವಸ್ತು ಪ್ರದರ್ಶನ ಮುಗಿಯುವವರೆಗೆ ಅರಣ್ಯ ಮಾದರಿ ಇರುತ್ತದೆ. ಕಾಡಿನ ಕುರಿತು ಆಸಕ್ತಿ ಮೂಡಿಸಿ ಕಾಡು ಸಂರಕ್ಷಿಸುವಂತೆ ಪ್ರೋತ್ಸಾಹಿಸುವುದರ ಜತೆಗೆ ಅರಣ್ಯ ಇಲಾಖೆಯ ಯೋಜನೆಗಳ ಕುರಿತು ಜನರಲ್ಲಿ ಒಂದಿಷ್ಟು ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಆನಂದ್ ಅಭಿಪ್ರಾಯಪಟ್ಟರು.

ಚಿತ್ರ ವರದಿ: ಯತಿರಾಜ್ ಬ್ಯಾಲಹಳ್ಳಿ


Spread the love