ಲಕ್ಷದೀಪೋತ್ಸವ : ಸದಭಿರುಚಿಯ ವೈವಿಧ್ಯಮಯ ವಸ್ತು ಪ್ರದರ್ಶನ

Spread the love

ಲಕ್ಷದೀಪೋತ್ಸವ : ಸದಭಿರುಚಿಯ ವೈವಿಧ್ಯಮಯ ವಸ್ತು ಪ್ರದರ್ಶನ

ಬೆಳಕು ಚೆಲ್ಲುವ ದೀಪಗಳ ಸಾಲು, ಕಣ್ಸೆಳೆಯುವ ವಿದ್ಯುದಾಲಂಕಾರ, ಭಕ್ತಸಮೂಹದ ಭಕ್ತಿಭಾವ ಪರವಶತೆ. ಅವರೊಳಗೆ ಸದಭಿರುಚಿ ನೆಲೆಗೊಳಿಸಿದ ಕಂಗೊಳಿಸುವ ವಸ್ತು-ವೈವಿಧ್ಯ. ಜೊತೆಗೆ ವಿವಿಧ ತಿನಿಸುಗಳು.

exhibition-4

ಕಾರ್ತಿಕ ಮಾಸದ ಲಕ್ಷದೀಪೋತ್ಸವ ಅಂಗವಾಗಿ ಶ್ರೀ ಕೇತ್ರ ಧರ್ಮಸ್ಥಳದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ವಸ್ತು ಪ್ರದರ್ಶನದ ಚಿತ್ರಣವಿದು. ಗುರುವಾರ ಸಂಜೆ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಅಂಗಳದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಜಾಯಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅವರಿಂದ ಚಾಲನೆ ಕಂಡ ಈ ವಸ್ತು ಪ್ರದರ್ಶನ ಹಲವರ ಗಮನ ಸೆಳೆಯಿತು. ಯಂತ್ರೋಪಕರಣಗಳು, ಬೀಜೋತ್ಪನ್ನಗಳು, ಹಾಗೂ ಬಟ್ಟೆ, ಪುಸ್ತಕ, ಮನರಂಜನೆಯ ಆಟಿಕೆಗಳು, ಸಸಿತೋಪುಗಳು ಪ್ರದರ್ಶಿತಗೊಂಡು ಆಕರ್ಷಿಸಿದವು.

ಲಕ್ಷದೀಪೋತ್ಸವದ ಅವಧಿಯಲ್ಲಿ ವಸ್ತುಪ್ರದರ್ಶನವಿರಲಿದೆ. ಕೃಷಿ, ರೇಷ್ಮೆ, ಅಂಚೆ, ತೋಟಗಾರಿಕೆ, ಅರಣ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಕೆ.ಎಂ.ಎಫ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯೂ ಇಲ್ಲಿಗೆ ಭೇಟಿ ನೀಡಿದವರಿಗೆ ಲಭ್ಯವಾಗುತ್ತದೆ.

ವಸ್ತು ಪ್ರದರ್ಶನದಲ್ಲಿ ಕೇವಲ ಮನರಂಜನೆ ಹಾಗೂ ಅಹಾರ ಮಳಿಗೆಗಳ ಪ್ರದರ್ಶನ ಮಧ್ಯೆ ಸರ್ಕಾರದ ನಿಯೋಜಿತ ಇಲಾಖೆಗಳಿಂದ ಜನ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಅರಿವಿನ ಭಿತ್ತಿಪತ್ರಗಳನ್ನು ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೌಕರರು ಹಾಗೂ ಸ್ವಯಂ ಗುಂಪುಗಳ ಸದಸ್ಯರು ತಯಾರಿಸಿದ ಉಪ್ಪಿನ ಕಾಯಿ, ಕೇಶ ತೈಲಗಳು ಪ್ರದರ್ಶನಕ್ಕಿದ್ದವು.

ರಾಜ್ಯದ ಎಲ್.ಐ.ಸಿ, ಕರ್ನಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‍ಗಳ ಮಳಿಗೆಗಳೂ ಇದ್ದವು. ಬ್ಯಾಂಕ್ ಖಾತೆ, ಠೇವಣಿ ಬಗೆಗಿನ ಪೂರಕ ಮಾಹಿತಿ ನೀಡಲಾಯಿತು.

ಸರ್ಕಾರದ ತೋಟಗಾರಿಕೆ, ಕೃಷಿ, ರೇಷ್ಮೆ, ಹಾಗೂ ಅರಣ್ಯ ಇಲಾಖೆಗಳು ಪರಿಸರದ ಸಂರಕ್ಷಣೆಯ ಕ್ರಮಗಳು ಹಾಗೂ ರೈತರಿಗೆ ಬೇಕಾಗುವ ಬೇಸಾಯ, ಬೀಜ ಬಳಕೆ ಹಾಗೂ ಯಂತ್ರಪಕೋರಣಗಳ ಬಳಕೆ, ಹಾಗೂ ವಿಧವಾದ ಕೃಷಿ ಬೆಳೆಗಳ ಬೆಳೆಯುವ ಪದ್ದತಿಯ ಬಗ್ಗೆ ಜಾಗೃತಿ ಅರಿವು ಮೂಡಿಸಿದವು.

ರತ್ನ ಮಾನಸ ವಿದ್ಯಾರ್ಥಿನಿಲಯದಲ್ಲಿ ಬೆಳೆದ ತರಕಾರಿಗಳು, ಸಸಿತೋಪುಗಳ ಜತೆಗೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಜೀವನದ ಸಾಕ್ಷ್ಯಚಿತ್ರ ಪ್ರದರ್ಶನವೂ ನೋಡುಗರ ಗಮನ ಸೆಳೆಯಿತು. ಎಸ್‍ಡಿಎಮ್ ಐಟಿಐ ವೇಣೂರು ವಿದ್ಯಾರ್ಥಿಗಳ ತಯಾರಿಸಿದ ಹಡಗು ಹಾಗೂ ಯಂತ್ರ ಸಂಶೋಧನೆಯನ್ನು ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕ ಮಳಿಗೆಗಳಿಗೂ ಹಲವರು ಭೇಟಿ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೀಣಾಭಿವೃದ್ದಿಯ ಉತ್ಪನ್ನಗಳಿಗೆ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿತು. ಬಟ್ಟೆ, ರುಚಿಕರ ವಸ್ತುಗಳು, ಮನೆಬಳಕೆ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ವಸ್ತು ಪ್ರದರ್ಶನದ ವ್ಯವಸ್ಥಾಪಕರಾದ ಎಂ. ಕೃಷ್ಣಶೆಟ್ಟಿ ತಿಳಿಸಿದರು.

“ಪ್ರತಿ ವರ್ಷವೂ ಲಕ್ಷ್ಯದೀಪೋತ್ಸವಕ್ಕೆ ನಾವು ಬರುತ್ತೇವೆ. ವರ್ಷದಿಂದ ವರ್ಷಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ವಸ್ತುಪ್ರದರ್ಶನದಲ್ಲಿ ವೇಣೂರಿನ ಕಾಲೇಜಿನ ವಿದ್ಯಾರ್ಥಿಗಳು ಯಂತ್ರ ಸಂಶೋಧನೆಯ ಪ್ರಯೋಗ ಇಷ್ಟವಾಯಿತು ಎಂದವರು ಬೆಂಗಳೂರಿನ ಮಧುಸೂಧನ್. ಎಸ್.ಡಿ.ಎಮ್ ಅಂಗಸಂಸ್ಥೆಗಳಾದ ರುಡ್‍ಸೆಟ್, ಸಿರಿ ಗ್ರಾಮೋದ್ಯೋಗ, ರತ್ನ ಮಾನಸ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಧರ್ಮೋತ್ಥಾನ ಟ್ರಸ್ಟ್, ಸಿದ್ದವನ ನರ್ಸರಿ ಸೇರಿದಂತೆ ಶಿಕ್ಷಣ ಸಂಸ್ಥೆಗಳೂ ಭಾಗವಹಿಸಿದ್ದವು

ವರದಿ: ಶಿವಮಲ್ಲಯ್ಯ ಬನ್ನಿಗನೂರು ಚಿತ್ರಗಳು: ಯತಿರಾಜ್ ಬ್ಯಾಲಹಳ್ಳಿ


Spread the love