ಲಾಕ್ಡೌನ್ ವೇಳೆ ಶಾಸಕ ಸುನೀಲ್ ರಿಂದ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಕಿಟ್ ವಿತರಣೆಯಲ್ಲಿ ಬೋಗಸ್ ಪಟ್ಟಿ – ಶುಭಧ ರಾವ್ ಆರೋಪ

Spread the love

ಲಾಕ್ಡೌನ್ ವೇಳೆ ಶಾಸಕ ಸುನೀಲ್ ರಿಂದ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಕಿಟ್ ವಿತರಣೆಯಲ್ಲಿ ಬೋಗಸ್ ಪಟ್ಟಿ – ಶುಭದ ರಾವ್ ಆರೋಪ

ಉಡುಪಿ: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಕಳಕ್ಕೆ 5000 ಸಾವಿರ ಆಹಾರ ಕಿಟ್ಟನ್ನು ವಿತರಿಸಲು ರೂ. 44,95,000/- ಬಿಡುಗಡೆ ಮಾಡಿದ್ದು ಈ ಆಹಾರ ಕಿಟ್ನ್ನು ನ್ಯಾಯಯುತವಾಗಿ ವಿತರಿಸದೆ ಕಾರ್ಕಳ ಶಾಸಕರು ತಮ್ಮದೇ ಸರಕಾರಕ್ಕೆ ಮತ್ತು ಜನತೆಗೆ ದ್ರೋಹ ಬಗೆದಿದ್ದಾರೆ. ಆದ್ದರಿಂದ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕೆಂದು ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಆಗ್ರಹಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಕಾರಿಯಾಗುವಂತೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಇವರು 13 ಆಹಾರ ಪದಾರ್ಥಗಳನ್ನು ಒಳಗೊಂಡು ಒಂದು ಕಿಟ್ಟಿಗೆ ರೂ. 899ರಂತೆ 5000 ಕಿಟ್ಟಿಗೆ ರೂ. 44,95,000/- ಬಿಡುಗಡೆ ಮಾಡಿದೆ. ಕಿಟ್ಟನ್ನು ಪಡೆದ ಫಲಾನುಭವಿಗಳ ವಿವರಗಳನ್ನು ಮಾಹಿತಿ ಹಕ್ಕಿನ ಮೂಲಕ ಪಡೆದು ಪರಿಶೀಲಿಸಿದಾಗ ಇದೊಂದು ಬೊಗಸ್ ಪಟ್ಟಿಯೆಂದೂ ಮತ್ತು ಈ ಬೋಗಸ್ ಪಟ್ಟಿಯ ಮೂಲಕ ಅವ್ಯವಹಾರ ನಡೆಸಿ ಸರಕಾರಕ್ಕೆ ಮತ್ತು ಜನತೆಗೆ ವಂಚಿಸಲಾಗಿದೆ ಎಂದು ಕಂಡು ಬರುತ್ತದೆ. ಪಟ್ಟಿಯಲ್ಲಿ ಕಿಟ್ಟನ್ನು ಪಡೆಯದೆ ಇದ್ದವರು, ಇನ್ನಾವುದೋ ಬೇರೆ ಯೋಜನೆಯ ಫಲಾನುಭವಿಗಳು ಮತ್ತು ಇದಕ್ಕಿಂತಲೂ ಮಿಗಿಲಾಗಿ ಮೃತರಾದವರ ಹೆಸರೂ ಇರುವುದು ಕಂಡು ಬಂದಿದ್ದರಿಂದ ಇದು ಬೋಗಸ್ ಪಟ್ಟಿ ಎನ್ನುವುದಕ್ಕೆ ಬಲವಾದ ಸಾಕ್ಷಿಯಾಗಿದೆ. ಬಡವರ ಹೆಸರಿನಲ್ಲಿ ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಿದ್ದ ಶಾಸಕರು ಆ ಹಣದಲ್ಲಿ ಸುಮಾರು 350 ರೂ.ಗಳ ಸಣ್ಣ ಸಣ್ಣ ಆಹಾರ ಕಿಟ್ಗಳನ್ನು ಚಿನ್ನದ ಕೆಲಸಗಾರರು, ಕ್ಷೌರಿಕರು, ಮಡಿವಾಳರು, ರಿಕ್ಷಾ ಚಾಲಕ ಮಾಲಕರು, ಬಸ್ಸ್ ಸಿಬ್ಬಂದಿಗಳು ಮತ್ತು ಇತರರಿಗೆ ವಿತರಿಸಿದ್ದು ಅವರ ಹೆಸರನ್ನೇ ಕಾರ್ಮಿಕ ಇಲಾಖೆಗೆ ಸುಳ್ಳು ಮಾಹಿತಿ ಕಳುಹಿಸಿ, ಇವರೆಲ್ಲರಿಗೂ ರೂ. 899/-ರ ಇಲಾಖೆಯ ಕಿಟ್ಟನ್ನೇ ನೀಡಲಾಗಿದೆ ಎಂದು ಬಡ ಕಾರ್ಮಿಕರಿಗೆ ಮತ್ತು ಇಲಾಖೆಗೆ ವಂಚಿಸಲಾಗಿದೆ ಎಂದು ಆರೋಪಿಸಿದರು.

ಆಹಾರ ಕಿಟ್ ವಿತರಿಸಲು ಕರೆಯಲಾಗಿದ್ದ ಕೋಟೇಷನ್ ಕೂಡ ನಕಲಿ ಮತ್ತು ಬೋಗಸ್ ಎಂದು ದಾಖಲೆಯಿಂದ ತಿಳಿದು ಬರುತ್ತದೆ. ಪಕ್ಷದ ಪದಾಧಿಕಾರಿಗಳಿಂದಲೇ ಕೋಟೇಷನ್ ಹಾಕಿಸಿ ಅವರನ್ನು ಬಲಿಪಶು ಮಾಡುವ ಮೂಲಕ ಸರಕಾರದ ಹಣವನ್ನು ಬಡವರ ಹೆಸರಿನಲ್ಲಿ ಲೂಟಿ ಮಾಡಲಾಗಿದೆ.

ಕಿಟ್ ವಿತರಿಸಿದ ಏಜೆನ್ಸಿಯವರ ಬ್ಯಾಂಕ್ ಖಾತೆಗೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ಹಣ ಪಾವತಿಯಾಗಿದ್ದು ಆ ಏಜೆನ್ಸಿಯ ಅದೇ ಖಾತೆಯಿಂದ ಪಕ್ಷದ ಪದಾಧಿಕಾರಿಯವರ ಬ್ಯಾಂಕ್ ಖಾತೆಗಳಿಗೆ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿರುವುದು ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿಯಾಗಿರುವುದು ಕಂಡು ಬರುತ್ತದೆ.

ಕೊರೊನಾ ವೈರಸ್ ಹಬ್ಬುತ್ತಿದ್ದ ಸಂದರ್ಭದಲ್ಲಿ ಬಡಜನರು ಕೆಲಸವಿಲ್ಲದೇ ಕಂಗಾಲಾಗಿದ್ದರು, ಇಂತಹ ಸಂದರ್ಭದಲ್ಲಿ ಬಡವರ ಹಸಿವು ನೀಗಿಸಲು ಸರಕಾರ ಅಥವಾ ಇಲಾಖೆ ಬಿಡುಗಡೆಗೊಳಿಸಿದ ಆಹಾರ ಕಿಟ್ಗಳನ್ನು ಅವರಿಗೆ ವಿತರಿಸುವುದು ಶಾಸಕರಾದವರ ಜವಾಬ್ದಾರಿಯಾಗಿರುತ್ತದೆ. ಆದರೆ ನಮ್ಮ ಶಾಸಕರು ಬಡವರ ಹೆಸರಿನಲ್ಲಿ ವಂಚಿಸಿರುವುದು ಇಡೀ ರಾಜ್ಯ ತಲೆತಗ್ಗಿಸುವಂತಾಗಿದೆ. ನಂಬಿಕೆಯಿಟ್ಟು ಆರಿಸಿ ಕಳಿಸಿದ ಮತದಾರರ ಅನ್ನ ಕಿತ್ತುಕೊಳ್ಳುವ ಕೆಲಸ ಮಾಡಿರುವುದು ನಿಜಕ್ಕೂ ದುರಂತ. ಈ ಫಲಾನುಭವಿಗಳ ಪಟ್ಟಿ ಬೋಗಸ್ ಅಲ್ಲವೆಂದು ಸಾಬೀತು ಪಡಿಸುವಂತೆ ಮಾನ್ಯ ಶಾಸಕರಲ್ಲಿ ಕಾರ್ಕಳ ಜನತೆಯ ಪರವಾಗಿ ಸವಾಲು ಹಾಕಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸುತ್ತೇನೆ. ಅಸಾಧ್ಯವಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದರು

ಆಹಾರ ಕಿಟ್ ವಿತರಿಸಲು ಕಾರ್ಮಿಕ ಇಲಾಖೆ ಇಷ್ಟು ದೊಡ್ಡ ಮೊತ್ತ ಬಿಡುಗಡೆ ಮಾಡಿದ್ದರೂ ಅದನ್ನು ಬಹಿರಂಗಪಡಿಸದೆ ಮುಚ್ಚಿಟ್ಟದ್ದು ಯಾಕೆ ? ಸರಕಾರಕ್ಕೆ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಮೃತರು ಮತ್ತು ಕಿಟ್ಟನ್ನು ಪಡೆಯದೇ ಇದ್ದವರ ಹೆಸರು ಬರಲು ಕಾರಣ ಏನು? ಆಹಾರ ಕಿಟ್ ವಿತರಿಸಿದ ಏಜೆನ್ಸಿಯ ಬ್ಯಾಂಕ್ ಖಾತೆಯಿಂದ ಪಕ್ಷದ ಪದಾಧಿಕಾರಿಗಳ ಖಾತೆಗೆ ಹಣ ವರ್ಗಾವಣೆಯಾಗಲು ಕಾರಣವೇನು? ಎಂದು ಶುಭದ ರಾವ್ ಕಾರ್ಕಳ ಶಾಸಕರನ್ನು ಪ್ರಶ್ನಿಸಿದ್ದಾರೆ.


Spread the love