ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣವಾಗಲಿ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ 

Spread the love

ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣವಾಗಲಿ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ 

ಮಂಗಳೂರು : ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾರ್ವಾ ಮುಕ್ತ ಪ್ರದೇಶದ ನಿರ್ಮಾಣ ಮಾಡಲು ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು.

ಸೋಮವಾರ ಪುರಭವನದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು ಹಾಗೂ ಪ್ರಾಂಶುಪಾಲರ ಸಭೆಯಲ್ಲಿ ಮಾತಾನಾಡಿದ ಅವರು, ಡೆಂಗ್ಯೂ ಸುಲಭವಾಗಿ ನಿಯಂತ್ರಿಸುವ ರೋಗ, ಏಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಯು ಸ್ವಚ್ಚ ನೀರಿನಲ್ಲಿ ಸಾಮಾನ್ಯವಾಗಿ ಸಂತಾನಾಭಿವೃದ್ದಿ ಮಾಡುತ್ತವೆ. ಮೊಟ್ಟೆ ಇಟ್ಟ ಹದಿನಾಲ್ಕು ದಿನಗಳವರೆಗೆ ಲಾರ್ವಾ ಹಂತದಲ್ಲಿದ್ದು, ಮುಂದಿನ 2 ದಿನಗಳಲ್ಲಿ ಸೊಳ್ಳೆಯಾಗಿ ಪರಿವರ್ತನೆ ಹೊಂದುತ್ತದೆ. ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಮೊದಲು ಈ ಲಾರ್ವಾದ ಬಗ್ಗೆ ಶಾಲಾ ಮುಖ್ಯಸ್ಥರಿಗೆ ಅರಿವು ನೀಡಬೇಕು, ಶಾಲಾ ಮಕ್ಕಳಿಗೆ ಲಾರ್ವಾ ನಿಯಂತ್ರಣದ ಬಗ್ಗೆ ವಿವಿಧ ಸ್ಪರ್ಧೆಗಳನ್ನು, ವೀಡಿಯೋಗಳನ್ನು ಏರ್ಪಡಿಸುವುದು ಈ ಕ್ರಮ ಅನುಸರಿಸಿದಲ್ಲಿ ಮಕ್ಕಳಿಗೆ, ಮಕ್ಕಳಿಂದ ಪೋಷಕರಿಗೆ ತಿಳುವಳಿಕೆ ಮೂಡುತ್ತದೆ ಎಂದು ಹೇಳಿದರು.

ಲಾರ್ವಾದ ಸಂಪೂರ್ಣ ನಾಶ ಹಾಗೂ ಸೊಳ್ಳೆಗಳು ಕಚ್ಚದ ಹಾಗೇ ನೋಡಿಕೊಂಡರೆ ಡೆಂಗ್ಯೂ ಕಾಯಿಲೆಯಿಂದ ದೂರವಿರಬಹುದು. ಮುಂದಿನ ಮೂರು ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು ಸ್ವಯಂ ಜಾಗೃತರಾಗಿ ತಮ್ಮ ಸುತ್ತ ಮುತ್ತ ಲಾರ್ವಾ ಹುಡುಕಾಟ ನಡೆಸಿ ಅದನ್ನು ನಾಶಮಾಡಬೇಕು. ನಚಿತರ ಜಿಲ್ಲಾಡಳಿತ ಈ ಸ್ಥಳಗಳಿಗೆ ಭೇಟಿ ನೀಡಿದಾಗ ಲಾರ್ವಾಗಳ ಅಂಶ ಕಂಡುಬಂದಲ್ಲಿ ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾÀ್ತನಾಡಿ ನೀರಿನ ತೊಟ್ಟಿಗಳು, ಬ್ಯಾರಲ್, ಡ್ರಮ್, ಟಯರ್ ಮಳೆಯ ನೀರು ಸಂಗ್ರಹವಾಗಿರುವ ಪ್ಲಾಸ್ಟಿಕ್ ವಸ್ತುಗಳು ಅಡಕೆ ಹಾಳೆ, ತೆಂಗಿನ ಚಿಪ್ಪುಗಳು ಮತ್ತು ತ್ಯಾಜ್ಯ ವಸ್ತುಗಳು ಏರ್ ಕೂಲರ್ ಹೂವಿನ ಕುಂಡ ಇತ್ಯಾದಿಗಳಲ್ಲಿ ಉತ್ಪತ್ತಿಯಾಗುವ ಹುಳದ ಮಾದರಿಯ ಲಾರ್ವಗಳನ್ನು (ಸೊಳ್ಳೆ ಮರಿಗಳು), ನಾವು ನಾಶಪಡಿಸಿದಲ್ಲಿ, ಮಾತ್ರ ಸೊಳ್ಳೆಗಳ ನಿಯಂತ್ರಣವನ್ನು ಮಾಡಬಹುದಾಗಿರುತ್ತದೆ. ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಸೊಳ್ಳೆ ಉತ್ಪತಿ ತಾಣಗಳಲ್ಲಿ ಲಾರ್ವಗಳನ್ನು ನಾಶ ಮಾಡುವುದು ಹಾಗೂ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು. ಯಾವುದೇ ಜ್ವರ ಬಂದ ತಕ್ಷಣ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.


Spread the love