ಲೀಲಾಧರ್ ಬೈಕಂಪಾಡಿಗೆ ಥೈಲ್ಯಾಂಡಿನಲ್ಲಿ ‘ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’

Spread the love

ಲೀಲಾಧರ್ ಬೈಕಂಪಾಡಿಗೆ ಥೈಲ್ಯಾಂಡಿನಲ್ಲಿ ‘ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’

ಮನಾಮ, ಬಹ್ರೈನ್: ನಿರಂತರವಾಗಿ ಗತ ಮೂರು ದಶಕಗಳಿಂದ ಗೈಯುತ್ತಾ ಬಂದ ತನ್ನ ನಾಡು – ನುಡಿ, ಸಾಹಿತ್ಯ – ಸಂಸ್ಕೃತಿ ಸಂಬಂಧಿತ ಪ್ರಶಂಸನೀಯ ಸೇವೆಗಳಿಗಾಗಿ ಹಾಗೂ ಸಮಾಜ – ಸಂಘಟನಾ ಕ್ಷೇತ್ರದ ಮಹತ್ವಪೂರ್ಣ ಕೊಡುಗೆಗಳಿಗಾಗಿ ಬಹ್ರೈನ್ ವಾಸ್ತವ್ಯದ ಅನಿವಾಸಿ ಭಾರತೀಯ, ಖ್ಯಾತ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರು ಇದೀಗ ಅಂತಾರಾಷ್ಟ್ರೀಯ ಅಸ್ತಿತ್ವದ ‘ಗ್ಲೋಬಲ್ ಅಚೀವರ್ಸ್ ಫೌಂಡೇಶನ್’ ಕೊಡಮಾಡುವ ಪ್ರತಿಷ್ಠಿತ ‘ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಬಹರೈನ್ನಲ್ಲಿದ್ದುಕೊಂಡು ಆ ದ್ವೀಪರಾಷ್ಟ್ರ ಸಹಿತವಾಗಿ ಮುಂಬೈ, ಬೆಂಗಳೂರು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಸಂಘಟನೆಗಳಲ್ಲಿ ಪ್ರತ್ಯಕ್ಷ ಯಾ ಪರೋಕ್ಷವಾಗಿ ಸದಾ ಸಕ್ರಿಯರಿರುವ ಇವರು ಕಳೆದ ಎರಡು ದಶಕಗಳಿಂದ ಬಹ್ರೈನ್ನಲ್ಲಿ ನೆಲೆಸಿದ್ದು, ಅಲ್ಲಿನ ಸ್ಥಳೀಯ ಉದ್ಯಮ ಸಮೂಹವೊಂದರ ವಿತ್ತ ಪ್ರಬಂಧಕರಾಗಿ ವೃತ್ತಿನಿರತರಾಗಿದ್ದಾರೆ. ಮಂಗಳೂರು, ಮುಂಬೈ ಮತ್ತು ಬಹ್ರೈನ್ನಲ್ಲಿ ಶಿಕ್ಷಣವನ್ನು ಗೈದಿರುವ ಇವರು ಎಂ.ಕಾಂ. ಮತ್ತು ಎಂ.ಬಿ.ಎ. ಪದವೀಧರರಾಗಿದ್ದು, ಓರ್ವ ಪ್ರಶಸ್ತಿ ವಿಜೇತ ರಂಗನಟನಾಗಿಯೂ, ಹವ್ಯಾಸಿ ಬರೆಹಗಾರನಾಗಿಯೂ, ಸಾಮಾಜಿಕ – ಸಾಂಸ್ಕೃತಿಕ ಸಂಘಟಕನಾಗಿಯೂ, ನಿಸ್ವಾರ್ಥ ಸಮಾಜ ಸೇವಕನಾಗಿಯೂ, ಪ್ರಗತಿಪರ ವಿಚಾರಧಾರೆಯ ವ್ಯಕ್ತಿಯಾಗಿಯೂ ಎಲ್ಲೆಡೆಯಲ್ಲಿ ಗುರುತಿಸಲ್ಪಡುತ್ತಾರೆ.

ಬಹ್ರೈನ್ ಮೂಲದ ವಿವಿಧ ತುಳು – ಕನ್ನಡ ಸಂಘಟನೆಗಳಲ್ಲಿ ನಿರಂತರವಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಾ, ಅತಿ ಶ್ಲಾಘನೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಇವರು, ಸದ್ಯ ಬಹ್ರೈನ್ನಲ್ಲಿರುವ ಅನಿವಾಸಿ ಭಾರತೀಯರ ಮೇರು ಸ್ತರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ‘ಇಂಡಿಯನ್ ಕ್ಲಬ್’ನ ಆಂತರಿಕ ಲೆಕ್ಕಪರಿಶೋಧಕರಾಗಿ ಸೇವಾನಿರತರಾಗಿದ್ದಾರೆ. ತನ್ನ ಸ್ವಸಂಚಾಲಕತ್ವದ ‘ಕಾಂಚನ್ ಪ್ರತಿಷ್ಠಾನ’ದ ಮೂಲಕವೂ ವೈಶಿಷ್ಟ್ಯಪೂರ್ಣ ಕೈಂಕರ್ಯಗಳನ್ನು ಕೈಗೊಳ್ಳುವ ಇವರ ಸೇವೆ ಮತ್ತು ಸಾಧನೆಗಳು ಅತ್ಯಂತ ಗಣನೀಯವಾದುದು.

ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸೆನೆಟರ್ ಕೂಡಾ ಆಗಿರುವ ಲೀಲಾಧರ್ ಬೈಕಂಪಾಡಿಯವರು ಓರ್ವ ಸರಳ – ಸಜ್ಜನಿಕೆಯ, ನೇರ ನಡೆ – ನುಡಿಯ, ಪರೋಪಕಾರಿ ಮನೋಭಾವನೆಯ, ಮೃದು ಮನ – ಮಾತಿನ ಅಪ್ಪಟ ಸ್ನೇಹಜೀವಿ. ಪಾದರಸದಂತೆ ಸದಾ ಕ್ರಿಯಾಶೀಲರಾಗಿರುವ ಇವರು ಸಂಘಟನೆ, ಸೇವೆ ಮತ್ತು ಸಹಕಾರದ ತತ್ವ ತಥಾ ಮನೋಭಾವನೆಯ ಹಿನ್ನೆಲೆಯುಳ್ಳ ಒಂದು ಸುಸಂಸ್ಕೃತ ಮನೆತನದಿಂದ ಬಂದವರಾಗಿರುತ್ತಾರೆ. ಸದಾ ಲವಲವಿಕೆಯಿಂದಿದ್ದು, ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಇವರು ತಾಯ್ನಾಡಿನ ಅದೆಷ್ಟೋ ಸೇವಾ ಸಂಘಟನೆಗಳ ಕಾರ್ಯಚಟುವಟಿಕೆಗಳಿಗೆ ಬೆಂಬಲವೀಯುತ್ತಾ ಬಂದಿದ್ದಾರೆ ಹಾಗೂ ಅವೆಷ್ಟೋ ಅಸಹಾಯಕ ಕುಟುಂಬಗಳಿಗೆ ವಸತಿ, ವೈದ್ಯಕೀಯ, ಶಿಕ್ಷಣ ಅಥವಾ ಬದುಕು ಕಟ್ಟಿಕೊಳ್ಳುವ ವಿಚಾರಗಳಲ್ಲಿ ವಿವಿಧ ರೀತಿಯಲ್ಲಿ ನೆರವನ್ನೀಯುತ್ತಾ ಸಹಕರಿಸಿದ್ದಾರೆ.

ತನ್ನ ಸೇವೆ – ಸಾಧನೆಗಳ ಹಾದಿಯಲ್ಲಿ ಯಾವತ್ತೂ ಹಿಂತಿರುಗಿ ನೋಡದ ಇವರ ವಿವಿಧ ಕ್ಷೇತ್ರಗಳ ಅಭಿನಂದನೀಯ ಕೊಡುಗೆಗಳನ್ನು ಗುರುತಿಸಿ ಈ ವರೆಗೆ ನಾಡಿನ ಮತ್ತು ಹೊರನಾಡಿನ ಅವೆಷ್ಟೋ ಸಂಘ – ಸಂಸ್ಥೆಗಳು ಇವರಿಗೆ ಯೋಗ್ಯ ಸಮ್ಮಾನವನ್ನಿತ್ತು ಗೌರವಿಸಿವೆ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳನ್ನಿತ್ತು ಪುರಸ್ಕರಿಸಿವೆ. ಹೀಗೆ ಇವರಿಗೆ ಈ ತನಕ ಪ್ರಾಪ್ತಿಯಾದ ಪ್ರಶಸ್ತಿಗಳ ಯಾದಿಯಲ್ಲಿ ರಾಷ್ಟ್ರೀಯ ಭೂಷಣ ರಾಷ್ಟ್ರ ಪ್ರಶಸ್ತಿ, ಸಮಾಜರತ್ನ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸೌರಭ ರಾಜ್ಯ ಪ್ರಶಸ್ತಿ, ಸೃಷ್ಟಿ ಕಲಾಶ್ರೀ ರಾಜ್ಯ ಪ್ರಶಸ್ತಿ ಮತ್ತು ಮುಂಬೈ ವಿಶ್ವವಿದ್ಯಾಲಯದ ಸ್ವರ್ಣ ಪದಕ ಗೌರವ ಪುರಸ್ಕಾರಗಳು ಅತ್ಯಂತ ಪ್ರಮುಖವಾದವುಗಳಾಗಿವೆ.

ಇಷ್ಟೆಲ್ಲಾ ಸೇವೆ ಮತ್ತು ಸಾಧನೆಗಳ ರೂವಾರಿಯಾಗಿರುವ ಲೀಲಾಧರ್ ಬೈಕಂಪಾಡಿಯವರ ಗೌರವ ಮುಕುಟದ ಮತ್ತೊಂದು ಮಾಣಿಕ್ಯವಾಗಲಿರುವ ಈ ಪ್ರತಿಷ್ಠಿತ ‘ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪ್ರಶಸ್ತಿ’ಯು ಭಾರತ ಮತ್ತು ಅಂತಾರಾಷ್ಟ್ರೀಯ ಮೂಲದ ಗಣ್ಯರ ಸಮ್ಮುಖದಲ್ಲಿ ಇದೇ ಫೆಬ್ರವರಿ ಮಾಹೆಯ ದಿನಾಂಕ 9 ರಂದು ಥೈಲ್ಯಾಂಡಿನ ಬ್ಯಾಂಕಾಕ್ ಮಹಾನಗರದ ‘ಹಾಲಿಡೇ ಇನ್ನ್ ಸಿಲೋಮ್’ ಪಂಚತಾರಾ ಹೊಟೇಲಿನಲ್ಲಿ ಜರಗಲಿರುವ ಅದ್ದೂರಿಯ ಕಾರ್ಯಕ್ರಮವೊಂದರಲ್ಲಿ ಸಕಲ ಗೌರವಗಳೊಂದಿಗೆ ಪ್ರದಾನವಾಗಲಿದೆ.


Spread the love