ವಾಟ್ಸಾಪಿನಲ್ಲಿ ಹರಿದಾಡಿದ ಕಾಂಗ್ರೆಸ್ ಅಭ್ಯರ್ಥಿಗಳ ಪೇಕ್ ಪಟ್ಟಿ; ಇದು ನಕಲಿ ಪಟ್ಟಿ: ಸಿಎಂ ಸಿದ್ದರಾಮಯ್ಯ

Spread the love

ವಾಟ್ಸಾಪಿನಲ್ಲಿ ಹರಿದಾಡಿದ ಕಾಂಗ್ರೆಸ್ ಅಭ್ಯರ್ಥಿಗಳ ಪೇಕ್ ಪಟ್ಟಿ; ಇದು ನಕಲಿ ಪಟ್ಟಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಪರಿಶೀಲನಾ ಸಮಿತಿ ಮುಖಂಡರು ಅಂತಿಮಗೊಳಿಸುವುದಕ್ಕೂ ಮುನ್ನವೇ ವಾಟ್ಸ್‌ಆ್ಯಪ್‌ನಲ್ಲಿ ಅಭ್ಯರ್ಥಿಗಳ ಪಟ್ಟಿ ಹರಿದಾಡಿದೆ.

ಒಟ್ಟು 131 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಮಾಧ್ಯಮ ಪ್ರಕಟಣೆಗಾಗಿ ಎಂದು ಹಣೆ ಪಟ್ಟಿಯನ್ನು ಒಳಗೊಂಡ ಪಿಡಿಎಫ್‌ ಪ್ರತಿ ಮಂಗಳವಾರ ಸಂಜೆಯಿಂದಲೇ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ.

ಈ ಪಟ್ಟಿಯಿಂದ ಕಾಂಗ್ರೆಸ್‌ ವಲಯದಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು. ಸಿಎಂ ಸಿದ್ದರಾಮಯ್ಯ ಈ ಪಟ್ಟಿ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ‘ಹರಿದಾಡುತ್ತಿರುವ ಅಭ್ಯರ್ಥಿಗಳ ಪಟ್ಟಿ ನಕಲಿ. ಗೊಂದಲ ಸೃಷ್ಟಿಸಲೆಂದೇ ಅದನ್ನು ಸೃಷ್ಟಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿಗೆ ಎಐಸಿಸಿ ಇನ್ನೂ ಅನುಮೋದನೆ ನೀಡಿಲ್ಲ. ಫೇಕ್‌ ನ್ಯೂಸ್‌ ಫ್ಯಾಕ್ಟರಿಯ ಉತ್ಪನ್ನಗಳನ್ನು ಪ್ರೋತ್ಸಾಹಿಸದಿರಿ’ ಎಂದಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್‌ ಚುನಾವಣಾ ಪರಿಶೀಲನಾ ಸಮಿತಿ ಸಭೆ ಮುಕ್ತಾಯವಾಗಿದೆ. ಅಭ್ಯರ್ಥಿಗಳ ಮೊದಲ ಪಟ್ಟಿ ಕುರಿತು ಸಿಎಂ ಸಿದ್ದರಾಮಯ್ಯ ಬುಧವಾರ ಪಕ್ಷದ ಕೆಲವು ಮುಖಂಡರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.

ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರುಗಳ ಪಟ್ಟಿ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದು ಅಧಿಕೃತ ಅಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

ಈ ಸಂಬಂಧ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆಸಿ ವೇಣುಗೋಪಾಲ್‌ ಪ್ರಕಟಣೆ ಹೊರಡಿಸಿದ್ದಾರೆ. ಎಐಸಿಸಿ ಇದುವರೆಗೆ ಯಾವುದೇ ಇಂಥ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಚುನಾವಣೆ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ಮಾತ್ರ ಮುಗಿದಿದೆ. ಇನ್ನು ಕೇಂದ್ರ ಚುನಾವಣಾ ಸಮಿತಿ ಸಭೆ ಆಗಬೇಕಿದೆ. ಆ ನಂತರವೇ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ವೇಣುಗೋಪಾಲ್‌ ತಿಳಿಸಿದ್ದಾರೆ.


Spread the love