ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಹೃದಯಗಳನ್ನು ಜೋಡಿಸುವ ಸೇತುವೆಯಾಗಲು ಬಳಸಿಕೊಳ್ಳಿ : ಅಡ್ವೆ ರವೀಂದ್ರ ಪೂಜಾರಿ

Spread the love

ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಹೃದಯಗಳನ್ನು ಜೋಡಿಸುವ ಸೇತುವೆಯಾಗಲು ಬಳಸಿಕೊಳ್ಳಿ : ಅಡ್ವೆ ರವೀಂದ್ರ ಪೂಜಾರಿ

ಉಡುಪಿ: ವಿದ್ಯಾರ್ಥಿಗಳು ತಾವು ಪಡೆಯ ಶಿಕ್ಷಣದ ಮೂಲಕ ಹೃದಯಗಳನ್ನು ಬೆಸೆಯುವ ಸೇತುವೆ ನಿರ್ಮಿಸಲು ಬಳಸಿಕೊಳ್ಳದ ಹೊರತು ರಾಷ್ಟ್ರಸೇವೆ ಅಸಾಧ್ಯವಾಗಿದೆ ಎಂದು ಶಿಕ್ಷಣ ತಜ್ಞ ಹಾಗೂ ನಿವೃತ್ತ ಶಾಲಾ ನಿರೀಕ್ಷಕ ಅಡ್ವೆ ರವೀಂದ್ರ ಪೂಜಾರಿಯವರು ಹೇಳಿದರು.

ಅವರು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಸೌಹಾರ್ದ ಸಮಿತಿ ತೋನ್ಸೆ ಇದರ ವತಿಯಿಂದ ನಿಡಲಾದ ಪ್ರೋತ್ಸಾಹಕ ಪ್ರಶಸ್ತಿಗಳ ವಿತರಣಾ ಸಮಾರಂಭದ ತಮ್ಮ ಆಶಯ ಭಾಷಣ ಸಂಧರ್ಭದಲ್ಲಿ ಈ ಮಾತನ್ನು ಹೇಳಿದರು.

ರಕ್ಷಣಾರಂಗದಲ್ಲಿ ನಾವು ಬಲಿಷ್ಠರಾಗಿದ್ದೇವೆ ಅದರಿಂದಾಗಿ ಇಂದು ಯಾವ ಸೈನಿಕ ಶಕ್ತಿಗೂ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ. ಆದರೆ ಅಂತರಿಕ ವೈಷಮ್ಯಗಳು ನಮ್ಮನ್ನು ಸೋಲಿನ ಕಡೆಗೆ ನೂಕಬಹುದು, ಅದು ಮತೀಯ ವೈಷಮ್ಯ , ಭಾಷಾ ವೈಷಮ್ಯ ಹಾಗೂ ಇನ್ನಿತರ ಯಾವುದೇ ಬಗೆಯ ಅಂತರಿಕ ದ್ವೇಷಗಳು ನಮ್ಮ ರಾಷ್ಟ್ರವನ್ನು ದುರ್ಬಲ ಗೊಳಿಸಬಹುದು. ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಹೃದಯಗಳನ್ನು ಜೋಡಿಸುವ ಸೌಹಾರ್ದದ ಸೇತುವೆಗೆ ತಮ್ಮ ವತಿಯಿಂದ ಕನಿಷ್ಠ ಒಂದು ಇಟ್ಟಿಗೆಯನ್ನಾದರೂ ಜೋಡಿಸುವ ಮೂಲಕ ತಮ್ಮನ್ನು ಪ್ರೋತ್ಸಾಹಿಸಿದ ಸೌಹಾರ್ದ ಸಮಿತಿಯ ಆಶಯವನ್ನು ಮೈಗೂಡಿಸಿಕೊಳ್ಳಲಿ. ಬದಲಾಗಿ ಹೃದಯಗಳನ್ನು ಬೆಸೆಯುವ ಸೇತುವೆಯ ಕಲ್ಲುಗಳನ್ನು ಕೀಳುವವರಾಗದಿರೋಣ. ಎಲ್ಲಾ ಕ್ಷೇತ್ರಗಳಂತೆ ವಿದ್ಯಾ ಕ್ಷೇತ್ರವು ಕಲುಷಿತಗೊಳ್ಳುತ್ತಿರುವ ಈ ಸಮಯದಲ್ಲಿ ವಿವಿಧ ಹಿನ್ನೆಲೆಯವರು ಒಂದು ಗೂಡಿ ರಚಿಸಿಕೊಂಡ ಸೌಹಾರ್ದ ಸಮಿತಿಯು ಶಿಕ್ಷಣವನ್ನು ಪೋತ್ಸಾಹಿಸುತ್ತಾ ಆ ಕ್ಷೇತ್ರವನ್ನು ಉತ್ತಮ ಪಡಿಸುವುದರೊಂದಿಗೆ ಸೌಹಾರ್ದತೆ ಸಾಧಿಸಲು ಪ್ರಯತ್ನಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆಯುವ ಮೂಲಕ ಈ ಸಮಯದ ಅಗತ್ಯವನ್ನು ವಿಶಿಷ್ಟವಾಗಿ ಬಿಂಬಿಸುವಂತೆ ಉದ್ಘಾಟಿಸಿದ ಸಂತ ತೆರೇಸಾ ಇಗರ್ಜಿಯ ಧರ್ಮ ಗುರುಗಳಾದ ವಿಕ್ಟರ್ ಡಿಸೋಝರವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಸೌಹಾರ್ದ ಸಮಿತಿಯ ಆಶಯವನ್ನು ಈಡೇರಿಸುವಂತೆ ಕರೆನೀಡಿದರು.

ವಿವಿಧ ಧರ್ಮ,ಭಾಷೆ ಮತ್ತು ಸಂಸ್ಕೃತಿಯ ಜನರು ಒಂದಾಗಿ ಬಾಳುತ್ತಿರುವುದೇ ನಮ್ಮ ದೇಶದ ಶಕ್ತಿ , ಸೌಹಾರ್ದ ಸಮಿತಿಯ ಪ್ರೋತ್ಸಾಹದಿಂದ ಪ್ರೇರಣೆಯನ್ನು ಪಡೆದು ನಮ್ಮ ವಿಧ್ಯಾರ್ಥಿಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆಯುವ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ರಾಷ್ಟ್ರದ ಶಕ್ತಿಯಾಗಲಿ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್ ಪ್ರಕಾಶ್ ಹೇಳಿದರು.

ಬಡಾನಿಡಿಯೂರು ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ ಮತ್ತು ಪಡುತೋನ್ಸೆ ಪಂಚಾಯತ್ ಅಧ್ಯಕ್ಷೆಯವರಾದ ಫೌಝಿಯಾ ಸಾದಿಕ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೆಮ್ಮಣ್ಣು ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಅರುಣ್ ಫೆರ್ನಾಂಡಿಸ್ ಮತ್ತು ಮೂಡುತೋನ್ಸೆ ಪಂಚಾಯತ್ ಅಧ್ಯಕ್ಷೆ ಪುಷ್ಪ ಕೊಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಡುತೋನ್ಸೆ , ಮೂಡುತೋನ್ಸೆ ಮತ್ತು ಬಡಾನಿಡಿಯೂರು ಪಂಚಾಯತ್ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ 85% ಅಂಕಗಳಿಗಿಂತಲೂ ಅಧಿಕ ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 60 ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉದ್ಘಾಟನೆಯ ನಂತರ ಕಾರ್ಮೆಲ್ ಹೈಸ್ಕೊಲ್ ವಿಧ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಆರಂಭದಲ್ಲಿ ಸಮಿತಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.  ಸಮಿತಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿ ಲುವೀಸ್ ಧನ್ಯವಾದವಿತ್ತರು.ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತು ವೇರೋನಿಕಾ ಕರ್ನೇಲಿಯೋ ಕಾರ್ಯಕ್ರಮ ನಿರೂಪಿಸಿದರು.


Spread the love