ವಿಶೇಷ ಮಕ್ಕಳ ಕುರಿತು ಕಾಳಜಿ ತೋರಿಸೋಣ; ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ

Spread the love

ವಿಶೇಷ ಮಕ್ಕಳ ಕುರಿತು ಕಾಳಜಿ ತೋರಿಸೋಣ; ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ

ಉಡುಪಿ: ಕ್ರೈಸ್ತ ಧರ್ಮ ಸಭೆ ಸದಾಕಾಲ ನೊಂದವರ, ಸಮಾಜದಿಂದ ತಿರಸ್ಕರಿಸಲ್ಪಟ್ಟವರ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಸ್ವಸ್ಥ ಸಮಾಜ ನಿರ್ಮಾಣದ ಗುರಿ ಹೊಂದಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು.

ಅವರು ಶುಕ್ರವಾರ ಮಾನಸ ಪುನರ್ವಸತಿ ಹಾಗೂ ತರಬೇತಿ ಸಂಸ್ಥೇ ಪಾಂಬೂರು ಇದರ ದ್ವಿದಶಮಾನೋತ್ಸವದ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ವಿಶೇಷ ಮಕ್ಕಳ ತರಬೇತಿ ಕುರಿತು ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

20 ವರ್ಷಗಳ ಹಿಂದೆ ತನ್ನದೆ ಕೈಯಿಂದ ಉದ್ಘಾಟಿಸಲ್ಪಟ್ಟ ಈ ಸಂಸ್ಥೆ ಇಂದು ವಿಶೇಷ ಸಾಧನೆಯೊಂದಿಗೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರತಿಯೊಂದು ಮಗು ಜನಿಸುವುದು ಗೆಲ್ಲುವುದಕ್ಕಾಗಿ ಅದರಂತೆ ವಿಶೇಷ ಮಕ್ಕಳಿಗೂ ಕೂಡ ಅಂತಹ ವಾತಾವರಣವನ್ನು ಕಲ್ಪಿಸುವ ಅಗತ್ಯವಿದ್ದು, ಸಮಾಜದಲ್ಲಿ ತುಳಿತಕ್ಕೆ, ನೊಂದವರಿಗೆ ಹಾಗೂ ಮೂಲೆಗುಂಪಾದ ವ್ಯಕ್ತಿಗಳ ನೆರವಿಗೆ ಬರುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೆಥೊಲಿಕ್ ಧರ್ಮಸಭೆ ಆರಂಭದಿಂದಲೂ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ. ಪರರನ್ನು ಪ್ರೀತಿಸಿದಾಗ ನಿನ್ನನ್ನು ಪ್ರೀತಿಸಿದಂತೆ ಎಂಬ ವಾಕ್ಯದಂತೆ ಅದನ್ನು ಸಭೆ ಪಾಲಿಸಿಕೊಂಡು ಬಂದಿದೆ. ನನ್ನ ನೆರೆಯ ಸಹೋದರರ ಬಗ್ಗೆ ಕಾಳಜಿ ವಹಿಸಬೇಕಾದ ಸಾಮಾಜಿಕ ಜವಾಬ್ದಾರಿ ನಮ್ಮ ಪ್ರತಿಯೊಬ್ಬರ ಮೇಲಿದ್ದು, ಸ್ವಾರ್ಥದಿಂದ ಕೂಡಿದ ಈ ಸಮಾಜದಲ್ಲಿ ಪ್ರತಿಯೊಬ್ಬರು ಪರಸ್ಪರ ಸೇವೆಯ ಗುಣಗಳನ್ನು ರೂಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಆಗ ಮಾತ್ರ ಪ್ರತಿಯೊಬ್ಬರು ಸಮಾಜದಲ್ಲಿ ಸ್ವತಂತ್ರರಾಗಿ ಸಂತೋಷದಿಂದ ಜೀವಿಸಲು ಸಾಧ್ಯವಿದೆ. ವಿಶೇಷ ಮಕ್ಕಳ ಬಗ್ಗೆ ಪ್ರತಿಯೊಬ್ಬರು ಕಾಳಜಿ ಪ್ರೀತಿಯನ್ನು ಹೆಚ್ಚು ತೋರಿಸುವುದರೊಂದಿಗೆ ಅವರಿಗೂ ಸಹ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಮಾತನಾಡಿ ಪ್ರತಿಯೊಬ್ಬರು ತನಗೆ ಆರೋಗ್ಯವಂತ ಮಕ್ಕಳೇ ಜನಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಾರೆ. ಯಾವುದೋ ದೋಷದಿಂದ ಕೆಲವು ಬಾರಿ ಅನಾರೋಗ್ಯ ಹಾಗೂ ವಿಶೇಷ ಸಾರ್ಮಥ್ರ್ಯದ ಮಕ್ಕಳು ಜನಿಸಿದಾಗ ಅವರನ್ನು ಕೂಡ ದೇವರ ವರ ಎಂದು ಸ್ವೀಕಾರ ಮಾಡಬೇಕು. ಅಂತಹ ಮಕ್ಕಳನ್ನು ಸಮಾಜದಲ್ಲಿ ಸಧೃಡ ವ್ಯಕ್ತಿಗಳಾಗಿ ಮಾಡಬೇಕಾದ ವಿಶೇಷ ಜವಾಬ್ದಾರಿ ಸಮಾಜದ ಮೇಲಿದೆ. ವಿಶೇಷವಾಗಿ ತರಬೇತಿ ಪಡೆದ ಮಗು ಒಂದು ದಿನ ಅದೇ ಹೆತ್ತವರ ಬಾಳಿನ ಆಶಾಕಿರಣವಾಗಿಲಿದೆ. ಅಂತಹ ಮಗುವನ್ನು ಹೇಗೆ ತರಬೇತಿ ಮಾಡಬೇಕು ಎನ್ನುವ ತರಬೇತಿಯನ್ನು ಶಿಕ್ಷಕರು, ಸಮಾಜ ಪ್ರತಿಯೊಬ್ಬರು ಪಡೆಯುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ. ಜೆರಾಲ್ಡ್ ಐಸಾಕ್ ಲೋಬೊ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ. ಸ್ಟ್ಯಾನಿ ತಾವ್ರೊ, ಸೆಕುಂದರಾಬಾದ್ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ನಿಬೇದಿತಾ ಪಟ್ನಾಯಕ್, ಖ್ಯಾತ ಮನೋಶಾಸ್ತ್ರಜ್ಞ ಡಾ. ಪಿ. ವಿ. ಭಂಡಾರಿ, ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ಮಂಗಳೂರು ಪ್ರದೇಶದ ವಂ ಮ್ಯಾಥ್ಯು ವಾಸ್, ಉಡುಪಿ ಪ್ರದೇಶದ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಮಾನಸ ಸಂಸ್ಥೆಯ ಹೆನ್ರಿ ಮಿನೇಜಸ್, ಕಾರ್ಯಕ್ರಮ ನಿರ್ವಹಣಾ ಸಮಿತಿಯ ಎಲ್ ರೋಯ್ ಕಿರಣ್ ಕ್ರಾಸ್ತಾ, ಜೋಸೇಪ್ ನೊರೊನ್ಹಾ, ತುಷಾರ್ ಸುಜಿತ್, ಸ್ವಾಕ್ ಅಧ್ಯಕ್ಷ ಅಲ್ಬನ್ ಡಿಸೋಜಾ ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿ, ಮಾನಸ ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ಅನ್ಸಿಲ್ಲಾ ಫೆರ್ನಾಂಡಿಸ್ ವಂದಿಸಿದರು. ಸ್ಟೀವನ್ ಪ್ರಕಾಶ್ ಲೂವಿಸ್ ಮತ್ತು ಮರಿಯಾ ಜಸಿಂತಾ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಬಳಿಕ ವಿವಿಧ ವಿಷಯಗಳ ಮಂಡನೆಯನ್ನು ಡಾ ಥೋಮಸ್ ಜೆ. ಕ್ವಾಡ್ರಸ್, ಡಾ. ನಿಬೇದಿತಾ ನಾಯಕ್, ಡಾ. ಪಿ.ವಿ. ಭಂಡಾರಿ, ತುಷಾರ್ ಸುಜಿತ್ ಮಾಡಿದರು. ವಿಶೇಷ ಮಕ್ಕಳ ಕುರಿತು ವಿವಿಧ ವಿಚಾರಗಳ ಮೇಲೆ ಗ್ರೇಶಿ ಗೋನ್ಸಾಲ್ವಿಸ್, ಸಿಸ್ಟರ್ ಸುಜಿತ್, ವಂಸತ್ ಕುಮಾರ್ ಶೆಟ್ಟಿ, ಡಾ. ಮುಝಾಫರ್ ಅಸಾದಿ, ವಿಲ್ಸನ್ ರೊಡ್ರಿಗಸ್, ಕೆ ಎಸ್ ಜೈ ವಿಠಲ್ ಇವರುಗಳ ವಿಚಾರಗೋಷ್ಟಿ ನಡೆಯಿತು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವಾ ವಿಚಾರಗೋಷ್ಟಿಯನ್ನು ನಡೆಸಿಕೊಟ್ಟರು.

 


Spread the love