ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾದ ದಕ್ಷಿಣ ಕನ್ನಡ ಸಂಸದ
- ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶದ ನಿಲುವನ್ನು ಪ್ರಸ್ತುತಪಡಿಸಿದ ಕ್ಯಾ. ಚೌಟ
ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ 80ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸಿರುವ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು ನಮ್ಮ ದೇಶದ ಸುಸ್ಥಿರ ಅಭಿವೃದ್ಧಿಯ ಬಗ್ಗೆ ವಿಷಯ ಮಂಡಿಸಿದ್ದಾರೆ. ಆ ಮೂಲಕ ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.
ಭಾರತದಿಂದ ಸರ್ವ ಪಕ್ಷಗಳ ಸಂಸದರನ್ನು ಒಳಗೊಂಡಿರುವ ಪಿಪಿ ಚೌಧರಿ ನೇತೃತ್ವದ ನಿಯೋಗವು ನ್ಯೂಯಾರ್ಕ್‌ನಲ್ಲಿ ಅ.8ರಿಂದ 14ರವರೆಗೆ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಭಾಗವಹಿಸುತ್ತಿದೆ. ಈ ತಂಡದಲ್ಲಿ ಕರ್ನಾಟಕದಿಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸ್ಥಾನ ಪಡೆದಿರುವುದು ಮಾತ್ರವಲ್ಲ ಈ ವಿಶ್ವ ವೇದಿಕೆಯಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿ ಕುರಿತಂತೆ ವಿಚಾರ ಮಂಡಿಸುವ ಮೂಲಕ ಗಮನಸೆಳೆದಿದ್ದಾರೆ.
ಈ ಅಧಿವೇಶನದಲ್ಲಿ ಕ್ಯಾ. ಚೌಟ ಅವರು “2030ಕ್ಕೆ ಐದು ವರ್ಷಗಳು-ಸುಸ್ಥಿರ ಅಭಿವೃದ್ಧಿಗಾಗಿ ಬಹುಪಕ್ಷೀಯ ಪರಿಹಾರಗಳು ” ವಿಷಯದ ಮೇಲೆ ಭವಿಷ್ಯ ಭಾರತದ ರಾಷ್ಟ್ರೀಯ ನಿಲುವನ್ನು ಮಂಡಿಸಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ಬಹುಪಕ್ಷೀಯ ಸಹಕಾರ ಮತ್ತು ಸಂಪನ್ಮೂಲಗಳ ಸ್ಥಿರತೆ ಅತ್ಯಗತ್ಯ. ಅಲ್ಲದೆ, ಭಾರತವು ಅಭಿವೃದ್ಧಿ ಹೊಂದದ(LDCs) ಮತ್ತು ಭೂ-ಆವೃತ ಅಭಿವೃದ್ಧಿಶೀಲ(LLDCs) ರಾಷ್ಟ್ರಗಳಿಗೆ ತನ್ನ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ದಕ್ಷಿಣ-ದಕ್ಷಿಣ ಸಹಕಾರದ ಮಹತ್ವವನ್ನು ಭಾರತ ಪ್ರತಿಪಾದಿಸುತ್ತಿರುವುದಾಗಿ ಹೇಳಿದರು.
ಕ್ಯಾ. ಚೌಟ ಅವರನ್ನು ಒಳಗೊಂಡಿರುವ ಈ ನಿಯೋಗದಲ್ಲಿ ಸಂಸದರಾಗಿರುವ ಅನಿಲ್ ಬಲೂನಿ, ಡಾ. ನಿಶಿಕಾಂತ್ ದುಬೆ, ಉಜ್ವಲ್ ನಿಕಮ್, ಎಸ್ ಫಾಂಗ್ನಾನ್ ಕೊನ್ಯಾಕ್, ಡಾ. ಮೇಧಾ ವಿಶ್ರಮ್ ಕುಲಕರ್ಣಿ, ಪೂನಂ ಬೆನ್ ಮಾದಮ್, ವಂಶಿ ಕೃಷ್ಣ ಗದ್ದಾಮ್, ವಿವೇಕ್ ತಂಖಾ, ಡಾ. ಟಿ ಸುಮತಿ, ಎನ್.ಕೆ. ಪ್ರೇಮಚಂದ್ರನ್, ಕುಮಾರಿ ಸೆಲ್ಜಾ, ಮಾತುಕುಮಿಲ್ಲಿ ಶ್ರೀಭರತ್ ಮತ್ತು ರಾಜೀವ್ ರೈ ಅವರು ಕೂಡ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಮಹತ್ತರ ಸಂದರ್ಭದ ಕುರಿತು ಪ್ರತಿಕ್ರಿಯಿಸಿದ ಕ್ಯಾ. ಚೌಟ ಅವರು, “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರತಿನಿಧಿಯಾಗಿ ಈ ವಿಶ್ವ ವೇದಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿರುವುದಕ್ಕೆ ಬಹಳ ಹೆಮ್ಮೆ ತಂದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ(UNGA) ಅಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸುವ ಅತ್ಯಂತ ಮಹತ್ತರ ಜವಾಬ್ದಾರಿಯನ್ನು ನನ್ನಂತಹ ಸಾಮಾನ್ಯ ಬಿಜೆಪಿ ಕಾರ್ಯಕರ್ತನಿಗೆ ವಹಿಸಿರುವ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಪಕ್ಷದ ಎಲ್ಲ ನಾಯಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿಶೇಷವಾಗಿ ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಕಿರಣ್ ರಿಜುಜಿ ಅವರ ನಿರಂತರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಹಾಗೂ ಅದರಲ್ಲಿಯೂ ದಕ್ಷಿಣ ಕನ್ನಡ ಜನತೆಗೆ ನಾನು ಅಭಾರಿಯಾಗಿದ್ದೇನೆ ಎಂದು ಕ್ಯಾ. ಚೌಟ ಅವರು ತಿಳಿಸಿದ್ದಾರೆ.