ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬಿಲ್ಲವಾಸ್ ಕತಾರ್ ವತಿಯಿಂದ ರಕ್ತದಾನ ಶಿಬಿರ
ವಿಶ್ವ ರಕ್ತದಾನಿಗಳ ದಿನಾಚರಣೆ( ಜೂನ್ 14)ಯ ಅಂಗವಾಗಿ ಬಿಲ್ಲವಾಸ್ ಕತಾರ್ ಸಂಘಟನೆಯು ಜೂನ್ 13, 2025 ರಂದು ಕತಾರ್ ನ ಎಚ್. ಎಂ.ಸಿ. ಯ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ ಯಶಸ್ವಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿತು. ಈ ಶಿಬಿರದಲ್ಲಿ ಹಲವು ಸದಸ್ಯರು, ಸಮಾಜ ಸೇವಕರು ಮತ್ತು ಸ್ವಯಂ ದಾನಿಗಳು ಬಹಳ ಶೃದ್ಧೆಯಿಂದ ಭಾಗವಹಿಸಿ ಇನ್ನೊಬ್ಬರ ಜೀವ ರಕ್ಷಣೆ ಮಾಡುವ ಶ್ರೇಷ್ಠ ಕಾರ್ಯಕ್ಕೆ ಬೆಂಬಲ ನೀಡಿದರು.

ಬಿಲ್ಲವಾಸ್ ಕತಾರ್ ನ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಪೂಜಾ ವ್ಯಾಸ್ ಅವರು ಆರಂಭಿಕ ಮಾತುಗಳಿಂದ ರಕ್ತ ದಾನದ ಶ್ರೇಷ್ಠತೆಯ ಬಗ್ಗೆ ಬೆಳಕು ಚೆಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. *ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆ ಶ್ರೀಮತಿ ಅಪರ್ಣಾ ಶರತ್* ಅವರು ಮುಖ್ಯ ಅತಿಥಿ, ಮುಖ್ಯ ಭಾಷಣಕಾರ, ದಾನಿಗಳು ಮತ್ತು ಬೆಂಬಲಿಗರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಬಿಲ್ಲವಾಸ್ ಕತಾರ್ ಸದಾ ಸಮಾಜದ ಹಿತ ಚಿಂತನೆಯನ್ನು ಉದ್ದೇಶವಾಗಿರಿಸಿಕೊಂಡು ದುಡಿಯುತ್ತಿದ್ದು ಇಂತಹ ಕಾರ್ಯಕ್ರಮಗಳನ್ನು ನಮಗೆ ಸದಾ ಸ್ಫೂರ್ತಿ ಯನ್ನು ನೀಡಿದೆ ಎಂದರು. ನಾವು ಸ್ವಾರ್ಥವನ್ನು ಮರೆತು, ಎಲ್ಲರೊಂದಿಗೆ ಬೆರೆತು ಮಾಡುವ ಕಾರ್ಯಕ್ರಮಕ್ಕೆ ಜನ ಬೆಂಬಲವೇ ಸಾಕ್ಷಿ ಎಂದರು.
 
  
 
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಜೀವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅಬೀರ್ ಮೆಡಿಕಲ್ ಗ್ರೂಪ್, ದೋಹಾ, ಕತಾರ್ ನ ವೈದ್ಯಕೀಯ ನಿರ್ದೇಶಕ ಡಾ. ವಿಶ್ವನಾಥ್ ಪುಟ್ಟಣ್ಣ* ಅವರು ಮಾತನಾಡಿ ರಕ್ತವನ್ನು ಉತ್ಪಾದಿಸುವ ಏಕೈಕ ಕಾರ್ಖಾನೆ – ಮನುಷ್ಯನ ದೇಹ, ಅದು ಅತ್ಯಮೂಲ್ಯ, ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು. ರಕ್ತ ದಾನದ ಆರಂಭ, ಬೆಳವಣಿಗೆ, ವರ್ಗೀಕರಣ, ಆರೋಗ್ಯ ಲಾಭಗಳನ್ನು ಎಳೆ ಎಳೆಯಾಗಿ ಬಿಡಿಸಿ ಜನರಿಗೆ ಮನದಟ್ಟು ಮಾಡಿದ ಪುಟ್ಟಣ್ಣ ಅವರು ರಕ್ತದಾನವನ್ನು ನಮ್ಮ ಜೀವನ ಶೈಲಿಯನ್ನಾಗಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಮಾಜಕ್ಕೆ ಕರೆ ಇತ್ತರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕತಾರ್ ಎನರ್ಜಿಯ ಎಲ್.ಎನ್.ಜಿ ವಿಭಾಗದ ಪೆಟ್ರೋಲಿಯಂ ಎಂಜಿನಿಯರ್ ಹಾಗೂ ಮಾಜಿ ಕತಾರ್ ಚಾರಿಟಿಯ ಪ್ರಮುಖ ದಾನಿಗಳ ಸಂಬಂಧದ ಮುಖ್ಯಸ್ಥರಾಗಿದ್ದ ಖಾಲಿದ್ ಫಖ್ರೂ ಅವರು ತಮ್ಮ ಭಾಷಣದಲ್ಲಿ ಸ್ವಯಂಸೇವಕ ರಕ್ತದಾನದ ಮಹತ್ವವನ್ನು ವಿವರಿಸಿ, ನಿರ್ಭಯರಾಗಿ ರಕ್ತದಾನ ಮಾಡಿ ಆರೋಗ್ಯ ವರ್ಧಿಸಿಕೊಳ್ಳಿ ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ಆಯೋಜಿಸಿದ ಬಿಲ್ಲವಾಸ್ ಕತಾರ್ ತಂಡವನ್ನು ಶ್ಲಾಘಿಸಿದರು.
 
  
 
ಐ.ಸಿ.ಸಿ. , ಐ.ಸಿ.ಬಿ. ಎಫ್ ಮತ್ತು ಐ.ಎಸ್,ಸಿ ಯ ವಿವಿಧ ಹಾಲಿ ಮತ್ತು ಪೂರ್ವ ಪದಾಧಿಕಾರಿಗಳು, ಕರ್ನಾಟಕದ ಮೂಲದ ವಿವಿಧ ಸಂಘಟನೆಗಳ ಅಧ್ಯಕ್ಷರು, ಸದಸ್ಯರು ಮತ್ತು ಪೂರ್ವ ಪದಾಧಿಕಾರಿಗಳು ಮತ್ತು ಅನೇಕ ಗಣ್ಯರು ಈ ಪುಣ್ಯದ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿದೊಂಡು ಬಿಲ್ಲವಾಸ್ ಕತಾರ್ ನ ಸಮಾಜ ಸೇವೆಗೆ ಕೈ ಜೋಡಿಸಿದರು.
ಹಮಾದ್ ಮೆಡಿಕಲ್ ಕಾರ್ಪೊರೇಷನ್ ಸಂಸ್ಥೆಯು ಬಿಲ್ಲವಾಸ್ ಕತಾರ್ ನ ಈ ಪರೋಪಕಾರಿ ಸೇವೆಯನ್ನು ಗುರುತಿಸಿ ಪ್ರಶಂಸಾ ಪತ್ರ ನೀಡಿ ಗೌರವಿಸಿತು ಹಾಗೂ ರಾಷ್ಟ್ರದ ಆರೋಗ್ಯ ಸೇವೆಗೆ ಕೊಡುಗೆ ನೀಡಿದುದಕ್ಕೆ ಧನ್ಯವಾದ ಸಲ್ಲಿಸಿತು.
 
  
 
ಬಿಲ್ಲವಾಸ್ ಕತಾರ್ ಸಂಘಟನೆಯ ಕಾರ್ಯದರ್ಶಿ ಉಮೇಶ್ ಪೂಜಾರಿ ಅವರು ರಕ್ತ ದಾನ ಶಿಬಿರದ ಯಶಸ್ಸಿಗೆ ಕಾರಣವಾದ ಎಲ್ಲಾ ಅತಿಥಿಗಳು, ದಾನಿಗಳು, ಸ್ವಯಂಸೇವಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಹಮಾದ್ ಮೆಡಿಕಲ್ ಕಾರ್ಪೊರೇಷನ್‌ಗೆ ಧನ್ಯವಾದ ಅರ್ಪಿಸಿದರು. ಭವಿಷ್ಯದಲ್ಲಿಯೂ ಸಾಮಾಜಿಕ ಮತ್ತು ಪರೋಪಕಾರಿ ಸೇವೆಗೆ ಬಿಲ್ಲವಾಸ್ ಕತಾರ್ ಕಟಿಬದ್ಧವಾಗಿದೆ ಎಂದು ಘೋಷಿಸಿದರು.
 
            