ವೆಲಂಕಣಿಗೆ ನೇರ ರೈಲಿಗೆ ಕ್ರೈಸ್ತ ಬಂಧುಗಳ ಒತ್ತಾಯ

Spread the love

ವೆಲಂಕಣಿಗೆ ನೇರ ರೈಲಿಗೆ ಕ್ರೈಸ್ತ ಬಂಧುಗಳ ಒತ್ತಾಯ

ಮಂಗಳೂರು: ಪುಣ್ಯಕ್ಷೇತ್ರಗಳಲ್ಲಿ ಕ್ರೈಸ್ತರ ಪಾಲಿಗೆ ಅತ್ಯಂತ ಮಹತ್ವದ ಹಾಗೂ ಪರಮಪವಿತ್ರ ಯಾತ್ರಾ ಸ್ಥಳವಾಗಿರುವ ತಮಿಳುನಾಡಿನ ವೆಲಂಕಣಿಗೆ ಮಂಗಳೂರು ಮುಖಾಂತರ ನೇರ ರೈಲು ಸೌಲಭ್ಯವನ್ನು ಪ್ರಾರಂಭಿಸುವಂತತೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ ಅವರು ಕಳೆದ ಹಲವಾರು ವರ್ಷಗಳಿಂದ ಈ ಬಗ್ಗೆ ಬೇಡಿಕೆ ಇದ್ದರೂ ಯಾವುದೇ ಸರಕಾರ ಅಥವಾ ಜನಪ್ರತಿನಿಧಿಗಳು ಇದರ ಬಗ್ಗೆ ಕಾಳಜಿ ವಹಿಸದೆ ಇರುವುದು ಅತ್ಯಂತ ದುಃಖಕರವಾಗಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ರೈಲಿನ ಮುಖಾಂತರ ಮಂಗಳೂರಿನಿಂದ ವೆಲಂಕಣಿಗೆ ಸುಮಾರು 20 ಗಂಟೆಗಳ ಹಾದಿಯಿದ್ದು ನೇರ ರೈಲು ಸಂಚಾರದ ಸೌಲಭ್ಯವಲ್ಲ. ಆದುದರಿಂದ ಜನರು ವಾಹನದ ಮೂಲಕ ಆ ಸ್ಥಳಕ್ಕೆ ತೆರಳುತ್ತಿದ್ದು, ಹಲವಾರು ಸಂದರ್ಭಗಳಲ್ಲಿ ಅಫಘಾತ ಸಂಭವಿಸಿ ನೂರಾರು ಮಂದಿಈ ಪುಣ್ಯಕ್ಷೇತ್ರದ ದರ್ಶನದ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಕರೂರಿನಲ್ಲಿ ವೆಲಂಕಣಿ ಕ್ಷೇತ್ರಕ್ಕೆ ತೆರಳಿ ಹಿಂದಿರುಗುತ್ತಿದ್ದ, ಮಂಜೇಶ್ವರದ ಕಯ್ಯಾರಿನ ಕುಟುಂಬದ ಏಳು ಸದಸ್ಯರು ಅಫಘಾತಕ್ಕೆ ಬಲಿಯಾಗಿದ್ದಾರೆ. ಇಂತಹ ಹತ್ತು ಹಲವು ಅಫಘಾತಗಳು ಹಿಂದೆಯೂ ನಡೆದಿವೆ.ರಸ್ತೆಯ ಮೂಲಕ ವೆಲಂಕಣಿಗೆ ಹೋಗಲು ಆರ್ಥಿಕವಾಗಿಯೂ ಕೂಡ ಒಂದು ದೊಡ್ಡ ಹೊರೆಯಾಗಿದೆ. ಹಲವಾರು ಬಡ ಕ್ರೈಸ್ತರು ಇಂದಿಗೂ ಕೂಡ ವೆಲಂಕಣಿಯ ದರ್ಶನ ಪಡೆಯದವರಿದ್ದಾರೆ. ಆದ್ದರಿಂದ ಗೋವಾದಿಂದ ಬೆಂಗಳೂರು ಮುಖಾಂತರ ವೆಲಂಕಣಿಗೆ ಹೋಗುವ ವಾಸ್ಕೊಡಗಾಮ ಎಕ್ಸ್ ಪ್ರೆಸ್ ರೈಲಿನಂತೆ ಇನ್ನೋಂದು ರೈಲನ್ನು ಗೋವಾದಿಂದ ಮಂಗಳೂರು ಸೆಂಟ್ರಲ್ ಮುಖಾಂತರ ವೆಲಂಕಣಿಗೆ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರಿಗೆ ವೇದಿಕೆಯ ಮುಖಾಂತರ ಮನವಿ ಸಲ್ಲಿಸಲಾಗುವುದು ಅಲ್ಲದೆ ಇತರ ಕ್ರೈಸ್ತ ಸಂಘಟನೆಗಳು ಕೂಡ ಕಾರ್ಯತರ್ಪರರಾಗಬೇಕು. ಈ ರೈಲಿನ ಮುಖಾಂತರ ಹಿಂದು ಬಂಧುಗಳಿಗೆ ತಂಜಾವೂರಿನ ಪ್ರಸಿದ್ದ ದೇವಸ್ಥಾನ ಹಾಗೂ ಮುಸಲ್ಮಾನರಿಗೆ ನಾಗೂರಿನಲ್ಲಿರುವ ಪ್ರಸಿದ್ದ ದರ್ಗಾಕ್ಕೆ ತೆರಳುವ ಅವಕಾಶ ಲಭಿಸುತ್ತದೆ.


Spread the love