ಶವ ಸಂಸ್ಕಾರಕ್ಕೆ ಅಡ್ಡಿ ಖೇದಕರ: ಮಾಜಿ ಶಾಸಕ ಜೆ.ಆರ್ ಲೋಬೊ

Spread the love

ಶವ ಸಂಸ್ಕಾರಕ್ಕೆ ಅಡ್ಡಿ ಖೇದಕರ: ಮಾಜಿ ಶಾಸಕ ಜೆ.ಆರ್ ಲೋಬೊ

ಮಂಗಳೂರು: ಮೊನ್ನೆ ರಾತ್ರಿ ಕೊರೊನ ವೈರಸ್ ನಿಮಿತ್ತ ಮರಣ ಹೊಂದಿದ ಬಂಟ್ವಾಳ ವೃದ್ಧೆಯೋರ್ವರ ಶವ ಸಂಸ್ಕಾರವನ್ನು ಮಂಗಳೂರಿನ ರುದ್ರ ಭೂಮಿಗಳಲ್ಲಿ ಮಾಡಲು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸೇರಿ ಅಡ್ಡಿ ಮಾಡಿರುವ ವಿಚಾರ ಮಾನವೀಯತೆಯನ್ನು ನಾಚುವಂತಹ ಸ್ಥಿತಿಗೆ ತಂದಿರುವ ಸನ್ನಿವೇಶ. ವಿದ್ಯಾವಂತರ ಜಿಲ್ಲೆ ಎಂದು ಹೇಳಿಕೊಳ್ಳುಲು ಖಂಡಿತವಾಗಿ ಅರ್ಹರಲ್ಲದಂತಹ ಸ್ಥಿತಿ ಉಂಟಾಗಿದೆ. ಈ ಹೀನಾಯ ಸ್ಥಿತಿಗೆ ತರಲು ಶಾಸಕರುಗಳು ಕೂಡ ಭಾಗಿ ಎಂದು ತಿಳಿದು ಖೇದವಾಯಿತು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ ಆರ್ ಲೋಬೊ ಹೇಳಿದ್ದಾರೆ.

20ಮಾರ್ಚ್, 2020ಕ್ಕೆ ಅಂತಾರಾಷ್ಟ್ರೀಯ ಅರೋಗ್ಯ ಸಂಸ್ಥೆ(WHO) ತನ್ನ ಪ್ರಕಟಣೆಯಲ್ಲಿ ಕೊರೊನ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ, ಶವಸಂಸ್ಕಾರವನ್ನು ಧಪನ ಯಾ ದಹನ ಮುಖಾಂತರ ಮಾಡಬಹುದಾಗಿದೆ. ಯಾವ ರೀತಿಯಲ್ಲಿ ಶವ ಸಂಸ್ಕಾರ ಮಾಡಬಹುದೆಂದು ಸಲಹೆಗಳನ್ನು ಕೂಡ ನೀಡಿರುತ್ತದೆ. ಹೀಗಿರುವಾಗ ಶವಸಂಸ್ಕಾರವನ್ನು ಧಪನ ಯಾ ದಹನದ ಮೂಲಕ ಮಾಡಬಹುದೆಂದು ಜಿಲ್ಲಾಢಳಿತ, ಸರಕಾರ ಹಾಗೂ ಜನ ಪ್ರತಿನಿಧಿಗಳು ಜನ ಸಾಮಾನ್ಯರಿಗೆ ಮನದಟ್ಟು ಮಾಡಬೇಕಾಗಿತ್ತು.

ಇನ್ನೊಂದು ಪ್ರಮುಖ ಹೆಜ್ಜೆಯಲ್ಲಿ ಜಿಲ್ಲಾಡಳಿತ ತಪ್ಪಿದ್ದು ಯಾವುದೆಂದರೆ, ಯಾವಾಗ ಸರಕಾರವೂ ಶವಸಂಸ್ಕಾರವನ್ನು ದಫನ ಯಾ ದಹನ ಯಾ ಯಾವುದೇ ಸಾಂಪ್ರದಾಯಿಕ ರೀತಿಯಲ್ಲಿ ಮಾಡಬಹುದೆಂದು ಹೇಳಿದ ನಂತರ, ಇದರ ಮೊದಲು ಮೊದಲನೆಯ ಕೊರೊನ ಪೀಡಿತ ಶವಸಂಸ್ಕಾರವನ್ನು ಮಂಗಳೂರಿನ ವಿದ್ಯುತ್ ಚಿತಾಗಾರದಲ್ಲಿ ಮಾಡಿದಾಗ, ಅದರ ನಂತರ ಸ್ಥಳ ಬದಲಾವಣೆ ಮಾಡಿರುವ ನಿರ್ಧಾರ ಅಕ್ಷರಶ: ತಪ್ಪು. ಹಿಂದೆ ಮಾಡಿರುವುದು ಸರಿಯಾದರೆ, ಈಗಲೂ ಅಲ್ಲೇ ಮಾಡಬಹುದಲ್ಲ. ಸ್ಥಳ ಬದಲಾವಣೆ ಮಾಡಿ, ರುದ್ರಭೂಮಿಯಿಂದ ರುದ್ರಭೂಮಿಗೆ ಶವ ತೆಗೆದುಕೊಂಡು ಅಲೆದಾಡಿದರೆ ಜನರಿಗೆ ಸಂಶಯ ಬಾರದಿರುತ್ತಾ?

ವೈಜ್ಞಾನಿಕವಾಗಿ ಶವಸಂಸ್ಕಾರವನ್ನು ಮಾಡಬಹುದೆಂದು WHO, ಸರಕಾರ ಹೇಳಿದ ನಂತರ, ಸ್ಥಳೀಯರನ್ನು, ಜನಪ್ರತಿನಿಧಿಗಳನ್ನು ಕೇಳುವ ಪ್ರಶ್ನೆಯೇ ಇದರಲ್ಲಿ ಉದ್ಭವಿಹಿಸುದಿಲ್ಲ, ಸ್ಥಳದ ಜನರು, ಜನಪ್ರತಿನಿಧಿಗಳು ಅಡ್ಡಿ ಮಾಡಿದರೆ, ಸಾಮ, ದಾನ, ಭೇಧ, ದಂಡದ ಮುಖಾಂತರ ಹಿಂದೆ ಮಾಡಿದ ಸ್ಥಳದಲ್ಲೇ ಶವಸಂಸ್ಕಾರ ಮಾಡುವಂಥಹ ಕಠಿಣ ನಿರ್ಧಾರವನ್ನು ಜಿಲ್ಲಾಢಳಿತ ತೆಗೆದುಕೊಳ್ಳಲೇ ಬೇಕಿತ್ತು. ಜಿಲ್ಲಾಢಳಿತದ ಡೋಲಾಯಮಾನ ತೀರ್ಮಾನ ಈ ಗೊಂದಲಕ್ಕೆ ಒಂದು ಪ್ರಮುಖ ಕಾರಣ.

ಜನಪ್ರತಿನಿಧಿಗಳಲೇ – ನಿಮಗೆ ಜನರು ಮತ ಹಾಕಿರುವುದು ಸಾರ್ಥಕವಾಯ್ತು, ಎರಡು ಶವಸಂಸ್ಕಾರದಲ್ಲೂ ತಾವು ರಾಜಕೀಯ ಮಾಡಿದಿರಲ್ಲ? ಮಾನವೀಯತೆಯನ್ನು ತಾವು ಸಂಪೂರ್ಣ ಮರೆತಿರಲ್ಲ? ಕೇವಲ ತಮ್ಮ ವೈಯಕ್ತಿಕ ಪ್ರಚಾರಕ್ಕೆ ಕಿಟ್ ಗಳ ವಿತರಣೆಗೆ ಮಾತ್ರ ಜನಪ್ರತಿನಿಧಿಗಳಲ್ಲ. ಸರಿಯಾದ ಸಮಯದಲ್ಲಿ, ಇಂಥಹ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ, ಜನರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ಜಿಲ್ಲಾಢಳಿತಕ್ಕೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ಸಹಕರಿಸುವುದು ಜನಪ್ರತಿನಿಧಿಗಳ ಮುಖ್ಯ ಕರ್ತವ್ಯ. ಇಂಥಹ ಕ್ಲಿಷ್ಟಕರ, ಪರಿಸ್ಥಿತಿಗಳಲ್ಲಿ ಮಾತ್ರ, ಜನಪ್ರತಿನಿಧಿಗಳ ನಿಜವಾದ ಬಣ್ಣ ಬಯಲಾಗುವುದು.

ಕೊನೆಯದಾಗಿ, ಈ ಸಂದಿಗ್ದ ಪರಿಸ್ಥಿತಿಯಲ್ಲಿ ಕೋಮು ಪ್ರಚೋದನೆ ಮಾತುಗಳನ್ನು ಆಡುವುದನ್ನು ನಿಲ್ಲಿಸೋಣ. ಈಗಾಗಲೇ ನಮ್ಮ ಜಿಲ್ಲೆಯನ್ನು ಸಾಕಷ್ಟು ಕೋಮು ದ್ವೇಷದಲ್ಲಿ ಸಿಲುಕಿಸಿದ್ದೇವೆ. ದೇವರಿಗೆ ಕೂಡಾ ಬೇಸರ ಬರುವಂತಹ ಸ್ಥಿತಿಗೆ ಬಂದಿದ್ದೇವೆ. ಈಗ ಶವಸಂಸ್ಕಾರ ಮಾಡುವುದಕ್ಕೂ ತಡೆಯೊಡ್ಡಿ ಅಮಾನವೀಯತೆಯನ್ನು ಮೆರೆದಿದ್ದೇವೆ. ಇಷ್ಟೊಂದು ದೇಗುಲಗಳು ಇರುವ ನಮ್ಮ ಈ ಜಿಲ್ಲೆಯ ಜನರ ಸ್ಥಿತಿ, ನಮ್ಮ ಹೃದಯದಲ್ಲಿ ದೇಗುಲವನ್ನು ಕಟ್ಟುವುದರಲ್ಲಿ ಸಂಪೂರ್ಣ ವಿಫಲವಾಗಿರುವ ಸ್ಥಿತಿಗೆ ಬಂದು ತಲುಪಿದ್ದೇವೆಯಲ್ಲ ಎಂದು ದುಃಖವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love