ಶಾಶ್ವತ ನಿಲ್ದಾಣಕ್ಕಾಗಿ ಪರದಾಡುತ್ತಿರುವ ತ್ರಾಸಿ ಆಟೋ ಚಾಲಕರು

Spread the love

ಶಾಶ್ವತ ನಿಲ್ದಾಣಕ್ಕಾಗಿ ಪರದಾಡುತ್ತಿರುವ ತ್ರಾಸಿ ಆಟೋ ಚಾಲಕರು
 

ಕುಂದಾಪುರ : ಹೆದ್ದಾರಿಯಲ್ಲಿ ಏನಾದರೂ ಅನಾಹುತಗಳು ಸಂಭವಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮೊದಲು ನೆರವಿಗೆ ಧಾವಿಸುವುದು ಆಟೋ ಚಾಲಕರು. ರಾತ್ರಿ-ಹಗಲೆನ್ನದೇ ದಿನದ 24 ಗಂಟೆಯೂ ನಗುಮೊಗದಿಂದಲೇ ಜನರಿಗೆ ಸೇವೆ ನೀಡುವ ಆ ಊರ ಆಟೋ ಚಾಲಕರಿಗೆ ಶಾಶ್ವತ ನೆಲೆ ಎಂಬುವುದೇ ಇಲ್ಲ. ನಿತ್ಯವೂ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ನಿಲ್ದಾಣವನ್ನು ಸ್ಥಳಾಂತರ ಮಾಡುವ ಆ ಊರ ಆಟೋ ಚಾಲಕರ ಪಾಡು ಕೇಳುವವರೇ ಇಲ್ಲ. ಅಷ್ಟಕ್ಕೂ ಆ ಊರು ಯಾವುದು, ಅಲ್ಲಿನ ಸಮಸ್ಯೆಯಾದರೂ ಏನು ಅಂತೀರಾ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ಒಂದೆಡೆ ಜಗತ್ಪ್ರಸಿದ್ದ ತ್ರಾಸಿ-ಮರವಂತೆ ಕಡಲ ಕಿನಾರೆ. ಇನ್ನೊಂದೆಡೆ ಜಿಲ್ಲೆಯ ಪ್ರಸಿದ್ದ ಗಂಗೊಳ್ಳಿ ಮೀನುಗಾರಿಕಾ ಬಂದರು. ಹೇಳಿ ಕೇಳಿ ಈ ಊರು ಪ್ರವಾಸಿಗರ ನೆಚ್ಚಿನ ತಾಣ. ಇವೆರಡಕ್ಕೂ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿ ಗುರುತಿಸಿಕೊಂಡಿರುವ ತ್ರಾಸಿ ಪೇಟೆಯಲ್ಲಿ ಇದೀಗ ಆಟೋ ಚಾಲಕರು ಶಾಶ್ವತ ನೆಲೆ ಇಲ್ಲದೇ ಪರದಾಡುವಂತಾಗಿದೆ. ಚತುಷ್ಪತ ಹೆದ್ದಾರಿ ಕಾಮಗಾರಿ ಬಳಿಕ ಅತಂತ್ರರಾದ ತ್ರಾಸಿಯ ರಿಕ್ಷಾ ಚಾಲಕರಿಗೆ ತಮ್ಮ ರಿಕ್ಷಾ ನಿಲ್ದಾಣವನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸುವುದೇ ನಿತ್ಯದ ಕಾಯಕವಾಗಿಬಿಟ್ಟಿದೆ. ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಶಾಶ್ವತ ನಿಲ್ದಾಣಕ್ಕಾಗಿ ರಿಕ್ಷಾ ಚಾಲಕರು ಬೇಡಿಕೆ ಇಡುತ್ತಿದ್ದರೂ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಿಂದಾಗಲಿ ಯಾವ ಪ್ರಯೋಜನವೂ ಇಲ್ಲದಂತಾಗಿದೆ. ಕುಂದಾಪುರ – ಬÉೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿ, ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಸುಮಾರು ಐವತ್ತು ವರ್ಷಗಳಿಂದಲೂ ತ್ರಾಸಿಯಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಈ ಹಿಂದೆಯೇ ಎತ್ತಂಗಡಿ ಮಾಡಲಾಗಿದೆ. ಆ ಬಳಿಕ ಚಾಲಕರು ನಿಲ್ದಾಣವನ್ನು ಅಲ್ಲೇ ಸಮೀಪದಲ್ಲಿ ನೆನೆಗುದಿಗೆ ಬಿದ್ದ ಖಾಸಗಿ ಪೆಟ್ರೋಲ್ ಬಂಕ್ನ ಮುಂಭಾಗದಲ್ಲಿ ತತ್ಕಾಲಿಕವಾಗಿ ಇಟ್ಟುಕೊಂಡಿದ್ದಾರೆ. ಆದರೆ ನೆನೆಗುದಿಗೆ ಬಿದ್ದ ಪೆಟ್ರೋಲ್ ಬಂಕ್ ಮರಳಿ ಆರಂಭಿಸುವ ಸಿದ್ದತೆಯಲ್ಲಿದ್ದರಿಂದ ಇದೀಗ ಆಟೋ ಚಾಲಕರು ಮತ್ತೆ ಅತಂತ್ರರಾಗಿದ್ದಾರೆ.

ತ್ರಾಸಿಯ ರಿಕ್ಷಾ ನಿಲ್ದಾಣಕ್ಕೆ ಸರಿಸುಮಾರು 40 ರಿಂದ 50 ವರ್ಷಗಳ ಇತಿಹಾಸವಿದೆ. ಗಂಗೊಳ್ಳಿ, ಮುಳ್ಳಿಕಟ್ಟೆ, ಗುಜ್ಜಾಡಿ ಎಲ್ಲಾ ಊರುಗಳಿಗಿಂತ ತ್ರಾಸಿಯಲ್ಲಿಯೇ ಮೊದಲು ರಿಕ್ಷಾ ನಿಲ್ದಾಣ ಆರಂಭಗೊಂಡಿರುವ ಹಿರಿಮೆಯಿದೆ. 2-3 ಚಾಲಕರಿಂದ ಆರಂಭಗೊಂಡ ನಿಲ್ದಾಣದಲ್ಲಿ ಈಗ 44 ರಿಕ್ಷಾಗಳಿದ್ದು, ಇನ್ನೂ ಹೊಸದಾಗಿ 4 ರಿಕ್ಷಾಗಳು ಸೇರ್ಪಡೆಗೊಂಡಿವೆ. ಆಗೆಲ್ಲ ಇಲ್ಲಿ ಯಾವುದೇ ಅಪಘಾತ ಸಂಭವಿಸಿದರೂ ರಿಕ್ಷಾದವರೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಇಲ್ಲಿಯ ಜಂಕ್ಷನ್ಗೆ ಬ್ಯಾರಿಕೇಡ್ಗಳನ್ನು ಕೂಡ ತ್ರಾಸಿ ರಿಕ್ಷಾ ಚಾಲಕ- ಮಾಲಕರ ಸಂಘದವರು ಕೊಡುಗೆಯಾಗಿ ನೀಡಿದ್ದಾರೆ. ನಿಲ್ದಾಣಕ್ಕೆ ಸೂಕ್ತವಾದ ಸ್ಥಳವಿಲ್ಲದಿದ್ದರಿಂದ ಅಲ್ಲೇ ಸಮೀಪದ ಬಸ್ ನಿಲ್ದಾಣದ ಪಕ್ಕ ನಿಲ್ಲಿಸಿದರೆ, ಗಂಗೊಳ್ಳಿಗೆ ಸಂಚರಿಸುವ ಬಸ್ ನಿಲ್ಲುವ ಪಕ್ಕದಲ್ಲಿ ನಿಲ್ಲಿಸಿದರೆ ಅಲ್ಲಿ ಬಸ್ಗಳಿಗೆ ತೊಂದರೆಯಾಗುತ್ತದೆ. ಈಗ ಖಾಸಗಿ ವ್ಯಕ್ತಿಯೊಬ್ಬರು ಮಾನವೀಯ ನೆಲೆಯಲ್ಲಿ ತಾತ್ಕಲಿಕವಾಗಿ ಅವರ ಜಾಗದಲ್ಲಿ ನಿಲ್ಲಿಸಲು ಅವಕಾಶ ನೀಡಿದ್ದಾರೆ. ಆದರೆ ಅವರು ಪೆಟ್ರೋಲ್ ಬಂಕ್ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಅಲ್ಲಿಂದಲೂ ತೆರವು ಮಾಡುವುದು ಅನಿವಾರ್ಯವಾಗಿದೆ. ಹಾಗಾದರೆ ರಿಕ್ಷಾಗಳನ್ನು ಎಲ್ಲಿ ನಿಲ್ಲಿಸಲಿ ಎನ್ನುವುದಾಗಿ ವಿ4 ವಾಹಿನಿಯ ಮುಂದೆ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಈಗ ಇರುವ ಸ್ಥಳ ಖಾಸಗಿ ಆಗಿರುವುದರಿಂದ ಚಾಲಕರು ತುರ್ತಾಗಿ ಅಲ್ಲಿಂದ ರಿಕ್ಷಾಗಳನ್ನು ನಿಲ್ಲಿಸಲು ಬೇರೆಡೆ ಸ್ಥಳಾಂತರಿಸಬೇಕಿದೆ. ಕುಂದಾಪುರದಿಂದ ಗಂಗೊಳ್ಳಿಗೆ ಸಂಚರಿಸುವ ಬಸ್ ನಿಲ್ಲುವ ಸ್ಥಳದಲ್ಲಿ ರಿಕ್ಷಾ ನಿಲ್ದಾಣಕ್ಕೆ ಅವಕಾಶ ಮಾಡಿಕೊಟ್ಟು, ಬಸ್ಗಳನ್ನು ಮತ್ತೊಂದು ಬದಿಯ ಬಸ್ ನಿಲ್ದಾಣದಲ್ಲಿ ನಿಲ್ಲಲು ಅವಕಾಶ ಮಾಡಿದರೆ ಉತ್ತಮ ಎನ್ನುವುದಾಗಿ ರಿಕ್ಷಾ ಚಾಲಕರು ಹೇಳುತ್ತಾರೆ.

ಒಟ್ಟಿನಲ್ಲಿ ಹೆದ್ದಾರಿ ಕಾಮಗಾರಿ ಬಳಿಕ ನೆಲೆ ಕಳೆದುಕೊಂಡ ತ್ರಾಸಿ ರಿಕ್ಷಾ ಚಾಲಕರು ಶಾಶ್ವತ ನಿಲ್ದಾಣವನ್ನು ಮಾಡಿಕೊಡಬೇಕು ಎನ್ನುವುದಾಗಿ ಸಂಸದರು, ಶಾಸಕರು, ತ್ರಾಸಿ ಗ್ರಾ.ಪಂ.ಗೆ ಮನವಿ ಕೊಟ್ಟಿದ್ದಾರೆ. ಆದರೆ ಈವರೆಗೆ ಯಾರಿಂದಲೂ ಸಕರಾತ್ಮಕ ಸ್ಪಂದನೆ ಮಾತ್ರ ಸಿಕ್ಕಿಲ್ಲ. ಈಗಲಾದರೂ ಆಟೋ ಚಲಾಕರ ಬಗೆಗಿನ ಕಾಳಜಿಯಿಂದ ಶಾಸಕರು, ಸ್ಥಳೀಯ ಪಂಚಾಯತ್ ನೆರವಿಗೆ ಬರಲಿ ಎನ್ನುವುದೇ ನಮ್ಮ ಆಶಯ.


Spread the love