ಶಿರೂರು ಪರ್ಯಾಯೋತ್ಸವ: ಭಗವಂತನಿಗೆ ದೇಹವನ್ನು ಸೇವೆಯ ಮೂಲಕ ಅರ್ಪಿಸುವ ಅಪೂರ್ವ ಅವಕಾಶ – ಡಾ. ವೀರೇಂದ್ರ ಹೆಗ್ಗಡೆ
ಉಡುಪಿ: “ಭಗವಂತ ಕೊಟ್ಟ ದೇಹವನ್ನು ಹೊರೆ ಮಾಡದೆ, ಸೇವೆಯ ಮೂಲಕ ಅದನ್ನು ದೇವರಿಗೆ ಅರ್ಪಿಸಬೇಕು. ಭಕ್ತಿಯಿಂದ ಸೇವೆ ಸಲ್ಲಿಸುವುದು ಜೀವನದ ಪರಮಾರ್ಥ. ಈ ದೃಷ್ಟಿಯಿಂದ ಉಡುಪಿಯ ಪರ್ಯಾಯೋತ್ಸವ ಭಗವಂತನಿಗೆ ಸಮರ್ಪಣೆ ಮಾಡಲು ಅಪೂರ್ವ ಅವಕಾಶ,” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶುಕ್ರವಾರ ನಗರದ ವಿದ್ಯೋದಯ ಶಾಲೆಯಲ್ಲಿ ನಡೆದ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಅಧ್ಯಕ್ಷತೆ ವಹಿಸಿದ್ದರು.

“ಉಡುಪಿಯ ಪರ್ಯಾಯೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ದೇವರಿಗೆ ಹೊರೆಕಾಣಿಕೆ ಸಮರ್ಪಣೆ ಮಾಡುವ ವಿಶಿಷ್ಟ ಸಂಪ್ರದಾಯವಿದೆ. ಭಕ್ತರು ತಮ್ಮ ಶ್ರಮದ ಫಲವಾದ ತರಕಾರಿ, ಧಾನ್ಯ, ತೆಂಗಿನಕಾಯಿ ಮೊದಲಾದವುಗಳನ್ನು ತಲೆಮೇಲೆ ಹೊತ್ತು ತಂದು ಸಮರ್ಪಿಸುವುದು ಭಗವಂತನಿಗೆ ಅತ್ಯಂತ ಪ್ರಿಯವಾದ ಸೇವೆ,” ಎಂದರು.

ಅವರು ಮುಂದುವರಿದು, “ಅನ್ನಸಂತರ್ಪಣೆಗೆ ಉಪಯೋಗವಾಗದ ಅಥವಾ ಬೇಗ ಹಾಳಾಗುವ ವಸ್ತುಗಳ ಬದಲು ದೀರ್ಘಕಾಲ ಉಳಿಯುವ ತರಕಾರಿ, ಧಾನ್ಯಗಳನ್ನು ತಂದು ನೀಡಬೇಕು,” ಎಂದು ಸಲಹೆ ನೀಡಿದರು.
ಪರ್ಯಾಯೋತ್ಸವದ ಹೊರೆಕಾಣಿಕೆ ನಿರ್ವಹಣೆ, ಅದರ ಪ್ರದರ್ಶನ ಮತ್ತು ಸಂಗ್ರಹಣೆ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ನಿರ್ವಹಿಸಲಿದ್ದಾರೆ. ಅದೇ ವೇಳೆ ಉಡುಪಿ ನಗರವನ್ನು ಅಲಂಕರಿಸುವ ಜವಾಬ್ದಾರಿಯನ್ನೂ ಧರ್ಮಸ್ಥಳ ಕ್ಷೇತ್ರ ವಹಿಸಿಕೊಳ್ಳಲಿದೆ ಎಂದು ಹೆಗ್ಗಡೆ ಘೋಷಿಸಿದರು.

ಹಿಂದೂ ಸಂಘಟನೆಗಳ ಪ್ರಮುಖರಾದ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, “ಕರಾವಳಿಯ ಪ್ರತಿಯೊಬ್ಬರೂ ಉಡುಪಿಯ ಕೃಷ್ಣಮಠದ ಅನ್ನದ ಋಣಿಗಳೇ. ಶಿರೂರು ಶ್ರೀಗಳ ಈ ಪರ್ಯಾಯೋತ್ಸವದಲ್ಲಿ ಸೇವೆ ಸಲ್ಲಿಸುವ ಮೂಲಕ ಆ ಋಣ ತೀರಿಸುವ ಸುವರ್ಣಾವಕಾಶ ದೊರೆಯುತ್ತದೆ,” ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು, “ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯವನ್ನು ಜನರ ಪರ್ಯಾಯವಾಗಿ ಆಚರಿಸುತ್ತಿದ್ದರು. ಆ ಸಂಪ್ರದಾಯವನ್ನು ಮುಂದುವರಿಸಲು ಶಿರೂರು ಶ್ರೀಗಳು ನಿರ್ಧರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 243 ಗ್ರಾಮ ಪಂಚಾಯಿತಿಗಳ 5.83 ಲಕ್ಷ ಮನೆಗಳಿಗೆ ಆಹ್ವಾನ ತಲುಪಿಸುವ ಕಾರ್ಯ ನಡೆಯುತ್ತಿದೆ; ಈಗಾಗಲೇ 2 ಲಕ್ಷ ಮನೆಗಳಿಗೆ ಆಹ್ವಾನ ನೀಡಲಾಗಿದೆ,” ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ, ಶಾಸಕರಾದ ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಹರಿಕೃಷ್ಣ ಪುನರೂರು, ರಘುಪತಿ ಭಟ್, ಉದಯಕುಮಾರ್ ಮುನಿಯಾಲು, ಧನಂಜಯ ಶೆಟ್ಟಿ, ಪ್ರಸಾದರಾಜ್ ಕಾಂಚನ್ ಮುಂತಾದ ಗಣ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬಾರ್ಕೂರು ದಾಮೋದರ ಶರ್ಮ ನಿರೂಪಣೆ ಮಾಡಿದರು ಹಾಗೂ ಕೋಶಾಧಿಕಾರಿ ಜ.ಯಪ್ರಕಾಶ್ ಕೆದ್ಲಾಯ ವಂದನೆ ಸಲ್ಲಿಸಿದರು.












