ಶಿರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವ  ಆಚರಣೆ

Spread the love

ಶಿರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವ  ಆಚರಣೆ

ಉಡುಪಿ: ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀರಾಘವೇಂದ್ರ ಮಠದ ಸನ್ನಿಧಾನದಲ್ಲಿ ಭಕ್ತಿಭಾವದಿಂದ ಹಾಗೂ ವೈಭವೋಪೇತವಾಗಿ ನೆರವೇರಿತು.

ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಕುಟುಂಬಿಕರ ವತಿಯಿಂದ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರಾಧನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಾತಃಕಾಲದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮಗಳು ಜರುಗಿದವು. ವೇದಮೂರ್ತಿ ಶ್ರೀ ನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಶ್ರೀ ಅನಿಲ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಬಳಿಕ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ. ಲಾತವ್ಯ ಆಚಾರ್ಯ ಅವರು ನೆರವೇರಿಸಿದರು. ಅಪರಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ನಡೆಯಿತು.

ಈ ಸಂದರ್ಭದಲ್ಲಿ ಶ್ರೀರಾಯರ ಮಠದ ಶ್ರೀ ಜಯತೀರ್ಥ ಆಚಾರ್ಯ, ಅಪ್ಪಣ್ಣ ಆಚಾರ್ಯ, ಶ್ರೀ ಹರಿಕೃಷ್ಣ ಪುನರೂರು, ಶ್ರೀ ಲಕ್ಷ್ಮೀನಾರಾಯಣ ತಂತ್ರಿ, ಸೊಂಡೂರು ಪ್ರಹ್ಲಾದ ಆಚಾರ್ಯ, ಶ್ರೀ ಪಿ. ವಾದಿರಾಜ ಆಚಾರ್ಯ, ಶ್ರೀ ಪಿ. ಶ್ರೀನಿವಾಸ ಆಚಾರ್ಯ, ಶ್ರೀ ಪಿ. ವೃಜನಾಥ ಆಚಾರ್ಯ, ಶ್ರೀ ಗೋಪಾಲಕೃಷ್ಣ ಭಟ್ ಒಳಕಾಡು, ಡಾ. ವ್ಯಾಸರಾಜ ತಂತ್ರಿ, ಚೆನ್ನೈನ ಶ್ರೀ ರಾಜಗೋಪಾಲ್, ಶ್ರೀ ರಾಜೇಂದ್ರ ಆಚಾರ್ಯ ಬಡಗುಬೆಟ್ಟು ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಶ್ರೀಪಾದರ ಪೂರ್ವಾಶ್ರಮದ ಸಹೋದರರಾದ ಶ್ರೀ ಅಕ್ಷೋಭ್ಯ ಆಚಾರ್ಯ, ಶ್ರೀ ಅರ್ಜುನ ಆಚಾರ್ಯ, ಶ್ರೀ ವಿಶಾಲ ಆಚಾರ್ಯ, ಕುಂದಾಪುರದ ಶ್ರೀ ಶಂಕರನಾರಾಯಣ ಹೊಳ್ಳ, ಇಮೇಜ್ ಮೊಬೈಲ್ ಸಂಸ್ಥೆಯ ಶ್ರೀ ಯಾದವ್, ಶ್ರೀ ರಾಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇನ್ನೊಂದೆಡೆ, ಕೇಮಾರು ಶ್ರೀಸಾಂದೀಪನಿ ಮಠದ ಆಶ್ರಮದಲ್ಲಿ ಶ್ರೀ ಈಶವಿಠಲದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಶಿರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ಅಂಗವಾಗಿ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಯಿತು.


Spread the love
Subscribe
Notify of

0 Comments