`ಶುದ್ಧ ಗಾಳಿ’ ತಾಂತ್ರಿಕ ವರದಿ ಮತ್ತು ವಾಯು ಗುಣಮಟ್ಟ ಪ್ರಮಾಣದ ಪರಿಶೀಲನಾ ವಿವರಗಳನ್ನು ಸಲ್ಲಿಸಿದ ಎಪಿಡಿ

Spread the love

`ಶುದ್ಧ ಗಾಳಿ’ ತಾಂತ್ರಿಕ ವರದಿ ಮತ್ತು ವಾಯು ಗುಣಮಟ್ಟ ಪ್ರಮಾಣದ ಪರಿಶೀಲನಾ ವಿವರಗಳನ್ನು ಸಲ್ಲಿಸಿದ ಎಪಿಡಿ

ಎಪಿಡಿ ಫೌಂಡೇಶನ್ ತನ್ನ `ಶುದ್ಧ ಗಾಳಿ’ ಯೋಜನೆಯನ್ವಯ ಸೈಂಟ್ ಜಾರ್ಜ್‍ಸ್ ಹೋಮಿಯೋಪತಿ ಜತೆಗೂಡಿ ನಡೆಸಿದ ವಿಸ್ತøತ ಅಧ್ಯಯನದ ತಾಂತ್ರಿಕ ವರದಿ ಹಾಗೂ ಮಂಗಳೂರಿನ ವಾಯು ಗುಣಮಟ್ಟ ಪ್ರಮಾಣದ ಪರಿಶೀಲನಾ ವಿವರಗಳನ್ನು ಸನ್ಮಾನ್ಯ ಪರಿಸರ ಮತ್ತು ಅರಣ್ಯ ಸಚಿವ ಹಾಗೂ ದಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈಯವರಿಗೆ ಸಲ್ಲಿಸಿದೆ.

ಎಪಿಡಿ ಫೌಂಡೇಶನ್ ಅಧ್ಯಕ್ಷ ಅಬ್ದುಲ್ಲಾ ಎ. ರೆಹಮಾನ್ ಹಾಗೂ ರಾಜ್ಯ ಕೊ-ಆರ್ಡಿನೇಟರ್ ಅರ್ಜುನ್ ರೈ ಅವರು ಜನವರಿ 28, 2017ರಂದು ಸಚಿವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ವರದಿಯನ್ನು ಅವರಿಗೆ ಸಲ್ಲಿಸಿ ಅಧ್ಯಯನದ ವರದಿಯಲ್ಲಿ ತಿಳಿಸಿದಂತೆ ಉಂಟಾಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಅವರಿಗೆ ವಿವರಿಸಿದರಲ್ಲದೆ ವಾಯು ಮಾಲಿನ್ಯ ತಡೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮಂಗಳೂರಿನ ವಾಯು ಗುಣಮಟ್ಟದ ಬಗ್ಗೆ ಸ್ವತಂತ್ರ ತನಿಖೆಯನ್ನು ಎಪಿಡಿ ಫೌಂಡೇಶನ್ ಡಿಸೆಂಬರ್ ತಿಂಗಳಲ್ಲಿ ಕೈಗೊಂಡಿತ್ತು. ಒನ್‍ಅರ್ಥ್‍ಎನ್ವಿರೋ ಲ್ಯಾಬ್ಸ್ (ಒಇಎಲ್), ಬೈಕಂಪಾಡಿ ಇಲ್ಲಿನ ತಾಂತ್ರಿಕ ಪರಿಣತರು ಅಧ್ಯಯನ ನಡೆಸಿದ್ದು ನಗರದ 12 ಪ್ರಮುಖ ಸ್ಥಳಗಳಿಂದ ಡಿಸೆಂಬರ್ 1ರಿಂದ 8, 2016ರ ತನಕ ಪ್ರತಿ ದಿನ ಎಂಟು ಗಂಟೆಗಳ ಕಾಲದ ಗಾಳಿಯ ಸ್ಯಾಂಪಲ್ಲುಗಳನ್ನು ಸಂಗ್ರಹಿಸಲಾಗಿತ್ತು. ಈ ಅಧ್ಯಯನವನ್ನು ಮಂಗಳೂರಿನ ಸೈಂಟ್. ಜಾರ್ಜ್’ಸ್ ಹೋಮಿಯೋಪತಿ ಪ್ರಾಯೋಜಿಸಿದ್ದರೆ, ನೀಲ್ ಝಕಾರಿಯಸ್ ಸಂಘಟಿಸಿದ್ದರು.
ಇಲ್ಲಿನ ಗಾಳಿಯಲ್ಲಿ ಹೆಚ್ಚು ಸೀಸದ ಪ್ರಮಾಣವಿದೆ ಹಾಗೂ ಇತರ ಹಾನಿಕಾರಕ ಅಂಶಗಳೂ ಅಪಾಯದ ಮಟ್ಟಕ್ಕೆ ಸನಿಹದಲ್ಲಿವೆಯೆಂದು ವರದಿಯು ಬಹಿರಂಗಪಡಿಸಿದೆ. ಈ ಅಧ್ಯಯನದ ಭಾಗವಾಗಿ ಆರು ವಾಯುಮಾಲಿನ್ಯಕಾರಕಗಳನ್ನು ಪರಿಶೀಲಿಸಲಾಗಿತ್ತು. ಅವುಗಳೇನೆಂದರೆ ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ); ಪಿಎಂ 10 (10 ಮೈಕ್ರೋಮೀಟರ್ ಹಾಗೂ ಅದಕ್ಕಿಂತ ಕಡಿಮೆ ವ್ಯಾಸವುಳ್ಳ ಅಂಶಗಳು) ಮತ್ತು ಪಿಎಂ2.5 (ದೇಹದೊಳಗೆ ಉಸಿರಾಟದ ಮೂಲಕ ಹೋಗಬಹುದಾದ ಸೂಕ್ಷ್ಮ ಕಣಗಳು-ಇವುಗಳ ವ್ಯಾಸ 2.5 ಮೈಕ್ರೋಮೀಟರ್ ಅಥವಾ ಚಿಕ್ಕದು). ಈ ಕಣಗಳು ದೇಹದೊಳಗೆ ಉಸಿರಾಟದ ಮೂಲಕ ಸೇರಿದ್ದೇ ಆದಲ್ಲಿ ಹೃದಯ ಮತ್ತು ಶ್ವಾಸಕೋಶದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇತರ ಮಾಲಿನ್ಯಕಾರಕಗಳೆಂದರೆ: ನೈಟ್ರೋಜನ್ ಡೈಆಕ್ಸೈಡ್ (ಎನ್‍ಒ 2; ಸಲ್ಫರ್ ಡೈಆಕ್ಸೈಡ್ (ಎಸ್‍ಒ2) ಹಾಗೂ ಸೀಸ.
ಹೀಗೆ ಮಾಪನ ಮಾಡಲ್ಪಟ್ಟ ಆರು ಅಂಶಗಳಲ್ಲಿ ಪಿಎಂ2.5, ಪಿಎಂ10 ಹಾಗೂ ಸೀಸ ಕೆಲವು ಪ್ರದೇಶಗಳಲ್ಲಿ ಅನುಮತಿಸಲ್ಪಟ್ಟ ಮಿತಿಯಿಂದ ಹೆಚ್ಚಾಗಿದೆ ಎಂದು ಕಂಡು ಬಂದಿದೆ. ಪಿಎಂ2.5 ಹಾಗೂ ಪಿಎಂ10 12 ಸ್ಥಳಗಳ ಪೈಕಿ ಮೂರರಲ್ಲಿ (ಬಂಟ್ಸ್ ಹಾಸ್ಟೆಲ್, ಪಂಪ್‍ವೆಲ್ ಹಾಗೂ ಬೈಕಂಪಾಡಿ) ಹಾಗೂ ಪಿಎಂ2.5 12 ಸ್ಥಳಗಳ ಪೈಕಿ ಆರು ಸ್ಥಳಗಳಲ್ಲಿ (ಪಿವಿಎಸ್ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಬಂದರ್, ಎಂಸಿಸಿ, ಪಂಪ್‍ವೆಲ್ ಮತ್ತು ಬೈಕಂಪಾಡಿ) ಇಲ್ಲಿ ಮಿತಿಗಿಂತ ಹೆಚ್ಚಾಗಿದೆ.
ನಗರದ ಹೆಚ್ಚಿನ ಕಡೆಗಳಲ್ಲಿ ಒಟ್ಟಾರೆ ವಾಯು ಗುಣಮಟ್ಟ ಉತ್ತಮವಾಗಿದೆಯೆಂದು ಅಧ್ಯಯನದಲ್ಲಿ ಕಂಡು ಬಂದರೂ, ದೀರ್ಘಾವಧಿಯಲ್ಲಿ ಪರಿಸ್ಥಿತಿ ಹದಗಡುವ ಸಾಧ್ಯತೆಯಿದೆ. ಸೂಕ್ತ ಸಮಯದಲ್ಲಿ ಸರಿಯಾದ ಕ್ರಮವೊಂದೇ ವಾಯು ಮಾಲಿನ್ಯದ ಅಡ್ಡ ಪರಿಣಾಮಗಳಿಂದ ನಗರವನ್ನು ರಕ್ಷಿಸಬಹುದು. ಆದುದರಿಂದ ವಾಯು ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಪಿಡಿ ಫೌಂಡೇಶನ್ ಸಂಬಂಧಿತ ಅಧಿಕಾರಿಗಳನ್ನು ವಿನಂತಿಸಿದೆ. ಇಂತಹ ಕ್ರಮಗಳು ನಗರಪಾಲಿಕೆಯ ಸ್ವಚ್ಛ ಮಂಗಳೂರು ಯೋಜನೆಯ ಯಶಸ್ಸಿಗೂ ಪೂರಕವಾಗುವುದು.
“ನಗರದಲ್ಲಿ ಸಿಎನ್‍ಜಿ ಲಭ್ಯಗೊಳಿಸಬೇಕು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಸಿಎನ್‍ಜಿ/ಎಲ್‍ಪಿಜಿ ಉಪಯೋಗಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ದೇಶದೆಲ್ಲೆಡೆ ಬಿಎಸ್-Iಗಿ ವಾಹನಗಳು ಕಡ್ಡಾಯವಾಗಿದ್ದರೆ, ಮಂಗಳೂರಿನ ರಸ್ತೆಗಳಲ್ಲಿ ಇನ್ನೂ ಬಿಎಸ್-III ವಾಹನಗಳು ಸಾಗುವುದನ್ನು ನೋಡಬಹುದಾಗಿದೆ. ವಾಯು ಮಾಲಿನ್ಯದಿಂದ ಪರಿಸರ ಹಾಗೂ ನಾಗರಿಕರಿಗೆ ಇನ್ನೂ ಹೆಚ್ಚಿನ ಸಮಸ್ಯೆ ಉದ್ಭವಿಸದಂತೆ ಆಡಳಿತ ಕೂಡಲೇ ಕ್ರಮ ಕೈಗೊಳ್ಳುವುದೆಂದು ನಾವು ನಿರೀಕ್ಷಿಸುತ್ತೇವೆ,”ಎಂದು ಎಪಿಡಿ ಫೌಂಡೇಶನ್ನಿನ ರೆಹಮಾನ್ ಹೇಳುತ್ತಾರೆ.
“ಹೊಗೆ ಉಗುಳುವ ವಾಹನಗಳು ನಗರದಲ್ಲಿ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ. ವಾಹನಗಳ ಉತ್ತಮ ನಿರ್ವಹಣೆಯನ್ನು ಉತ್ತೇಜಿಸುವ ಸಲುವಾಗಿ ಮೋಟಾರ್ ವಾಹನಗಳ ಕಾಯ್ದೆ 1988 ಇದರ ಸೆಕ್ಷನ್ 190(2) ಹಾಗೂ ಕೇಂದ್ರ ಮೋಟಾರ್ ವಾಹನ ನಿಯಮ 1989 ಇದರ ನಿಯಮ 115/116 ಇದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ನಾವು ಅಧಿಕಾರಿಗಳಲ್ಲಿ ವಿನಂತಿಸಿದ್ದೇವೆ,” ಎಂದು ಎಪಿಡಿ ಫೌಂಡೇಶನ್ನಿನ ರಾಜ್ಯ ಕೊ-ಆರ್ಡಿನೇಟರ್ ಅರ್ಜುನ್ ರೈ ಹೇಳಿದ್ದಾರೆ.


Spread the love