ಶ್ರೀ ಕೃಷ್ಣ ಮಠದಲ್ಲಿ “ಸಂಪೂರ್ಣ ಮಹಾಭಾರತ” ಗ್ರಂಥ ಬಿಡುಗಡೆ

Spread the love

ಶ್ರೀ ಕೃಷ್ಣ ಮಠದಲ್ಲಿ “ಸಂಪೂರ್ಣ ಮಹಾಭಾರತ” ಗ್ರಂಥ ಬಿಡುಗಡೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ತತ್ವಸಂಶೋಧನಾ ಸಂಸತ್ ಇದರ ನೇತೃತ್ವದಲ್ಲಿ ನಿನ್ನಾ ಒಲುಮೆಯಿಂದ ಪ್ರತಿಷ್ಠಾನ (ರಿ) ಇವರು ಆಯೋಜಿಸಿರುವ ಸಮಗ್ರ ಶ್ರೀಮಹಾಭಾರತ ಸಮರ್ಪಣೋತ್ಸವ ಮತ್ತು ಶ್ರೀವ್ಯಾಸ-ದಾಸ ವಿ’ಜಯ’ ಉತ್ಸವದಲ್ಲಿ “ಸಂಪೂರ್ಣ ಮಹಾಭಾರತ” ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಿತು.

ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಭಂಡಾರಕೇರಿ ಮಠಾಧೀಶರಾದ ಶ್ರೀವಿದ್ಯೇಶತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು,ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು,ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು,ಸೋದೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು,ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹಾಗೂ ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಯತಿಪುಂಗವರು ಉಪಸ್ಥಿತರಿದ್ದರು.

ಉಡುಪಿಯ ಅಷ್ಟಮಠಗಳು ಹಾಗೂ ಶ್ರೀಸುಬ್ರಹ್ಮಣ್ಯ ಮಠದಲ್ಲಿ ಇರುವ ಸುಮಾರು 250ಕ್ಕೂ ಅಧಿಕ ಪ್ರಾಚೀನ ತಾಳಪತ್ರಗಳನ್ನು ಕಲೆಹಾಕಿ, ನಾಡಿನ ಪ್ರಸಿದ್ಧ 40 ಮಂದಿಹಿರಿಯ ವಿದ್ವಾಂಸರ ತಂಡ ಕಳೆದ ಎಂಟು ವರ್ಷಗಳಲ್ಲಿ ನಡೆಸಿದ ಸಂಶೋಧನೆಯಿಂದ ಕನ್ನಡದಲ್ಲಿ 37 ಸಂಪುಟಗಳಲ್ಲಿ ಹಾಗೂ ಸಂಸ್ಕೃತ ದಲ್ಲಿ 24 ಸಂಪುಟಗಳಲ್ಲಿ ಒಟ್ಟು 61 ಸಂಪುಟಗಳಲ್ಲಿ ಸಮಗ್ರ ಮಹಾಭಾರತ ಗ್ರಂಥ ಹೊರಬಂದಿದೆ.

ಅಷ್ಟಮಠಗಳಲ್ಲಿರುವ 250ಕ್ಕೂ ಅಧಿಕ ತಾಳಪತ್ರಗಳಲ್ಲಿ 99,400 ಶ್ಲೋಕಗಳು ಸಿಕ್ಕಿದ್ದು, ಅವುಗಳನ್ನು ಕನ್ನಡಕ್ಕೆ ಅನುವಾದಿಸಿ, ಆನಂದತೀರ್ಥಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯ ಹಾಗೂ ವಾದಿರಾಜರ ಲಕ್ಷಾಲಂಕಾರ ಶ್ಲೋಕಗಳನ್ನು ಅಳವಡಿಸಿ ಸಂಪೂರ್ಣ ಮಹಾಭಾರತ ಗ್ರಂಥವನ್ನು 37 ಸಂಪುಟಗಳಲ್ಲಿ ಮುದ್ರಿಸಿ ಲೋಕಾರ್ಪಣೆಗೊಳಿಸಲಾಗಿದೆ.


Spread the love