ಸಂಚಾರಕ್ಕೆ ಅಡಚಣೆ: ಆಟೋ ಚಾಲಕ-ಪೊಲೀಸ್ ವಾಗ್ವಾದ, ಪ್ರಕರಣ ದಾಖಲು

Spread the love

ಸಂಚಾರಕ್ಕೆ ಅಡಚಣೆ: ಆಟೋ ಚಾಲಕ-ಪೊಲೀಸ್ ವಾಗ್ವಾದ, ಪ್ರಕರಣ ದಾಖಲು

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ದಸರಾ ಜಾತ್ರೆಯ ಹಿನ್ನೆಲೆಯಲ್ಲಿ ಭಾರೀ ಜನಜಂಗುಳಿ ಇರುವಾಗ, ಆಟೋ ಚಾಲಕನೊಬ್ಬ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಘಟನೆ ತೀವ್ರ ಜಟಾಪಟಿಗೆ ಕಾರಣವಾಗಿದೆ.

ಸೆಪ್ಟೆಂಬರ್ 24ರ ರಾತ್ರಿ 9.30ರ ಸುಮಾರಿಗೆ ಶೈಲೇಶ್ (28) ಎಂಬ ಆಟೋ ಚಾಲಕ ದೇವಸ್ಥಾನದ ಮುಖ್ಯದ್ವಾರದ ಎದುರು ಆಟೋ ನಿಲ್ಲಿಸಿದ್ದನ್ನು ಟ್ರಾಫಿಕ್ ಪೊಲೀಸರು ತಡೆದು ₹500 ದಂಡ ವಿಧಿಸಿದರು. ಇದರಿಂದ ಆಕ್ರೋಶಗೊಂಡ ಚಾಲಕ, “500 ರೂ. ಸಂಪಾದಿಸಲು ಎಷ್ಟು ಕಷ್ಟ ಇದೆ ಗೊತ್ತಾ? ನಾನು ಏನು ತಪ್ಪು ಮಾಡಿದ್ದೇನೆ? ತಪ್ಪು ಮಾತು ಕೂಡ ಆಡಿಲ್ಲ” ಎಂದು ವಾಗ್ವಾದ ನಡೆಸಿದರು. ಈ ವೇಳೆ ಚಾಲಕ ಘಟನೆಯನ್ನು ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪೊಲೀಸ್ ಎಎಸ್ಐ ಒಬ್ಬರು ಚಾಲಕನ ಬೆಲ್ಟ್ ಹಿಡಿದು ತಡೆದ ಘಟನೆ ಇನ್ನಷ್ಟು ಉದ್ವಿಗ್ನತೆ ಮೂಡಿಸಿದ್ದು, ಸ್ಥಳಕ್ಕೆ ಸೇರಿದ್ದ ಇತರ ಆಟೋ ಚಾಲಕರು ಕೂಡ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯ ಜಟಾಪಟಿ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರ ಪ್ರಕಾರ, ನಂತರ ಚಾಲಕ ಶೈಲೇಶ್ ಸ್ವಯಂಪ್ರೇರಿತವಾಗಿ ಕ್ಷಮೆ ಯಾಚಿಸಿದ್ದು, ನಡೆದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಸಂಚಾರ ಅಡಚಣೆ ಮತ್ತು ಪೊಲೀಸರ ಸೂಚನೆ ಪಾಲಿಸದ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.


Spread the love