ಸಂಸದೆ ಶೋಭಾ ಕರಂದ್ಲಾಜೆಯಿಂದ ಅಗ್ಗದ ಪ್ರಚಾರಕ್ಕಾಗಿ ಕ್ಷುಲ್ಲಕ ರಾಜಕಾರಣ – ಸೊರಕೆ

Spread the love

ಸಂಸದೆ ಶೋಭಾ ಕರಂದ್ಲಾಜೆಯಿಂದ ಅಗ್ಗದ ಪ್ರಚಾರಕ್ಕಾಗಿ ಕ್ಷುಲ್ಲಕ ರಾಜಕಾರಣ – ಸೊರಕೆ

ಉಡುಪಿ: ಕರ್ನಾಟಕ ರಾಜ್ಯದಲ್ಲಿ ಬರಗಾಲದಿಂದ ಜನ ತತ್ತರಿಸಿ ಹೋಗಿದ್ದು ರೈತರ ಬೆಳೆಗಳು ನಷ್ಟವಾಗಿ ರೈತರ ಬದು ದುಸ್ತರವಾಗಿದೆ. ಅನಾವೃಷ್ಠಿಯಿಂದ ಉಂಟಾಗಿರುವ ಹಾನಿಗಳ ಬಗ್ಗೆ ಕೇಂದ್ರ ಸರಕಾರಕ್ಕೆ ವರದಿಯನ್ನು ನೀಡಲಾಗಿದೆ ಇದು ವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರ ಬಂದಿಲ್ಲ ಆದರೆ ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೌನ ತಾಳಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರಕಾರವು 4.50 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ನೀಡುತ್ತಿದ್ದು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಎಷ್ಟು ಅನುದಾನ ನೀಡುತ್ತದೆ ಎನ್ನುವುದನ್ನು ತಿಳಿಸಲಿ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಎನ್ನುವ ನೆಪದಿಂದ ಚುನಾವಣಾ ಪ್ರಚಾರ ಕಾರ್ಯಕ್ಕೆ ಕ್ಷೇತ್ರಕ್ಕೆ ಬರುವುದು ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಇದಷ್ಠೆ ಸಂಸದರ ಜವಾಬ್ದಾರಿ ಎಂದು ಅವರು ಅರಿತುಕೊಂಡಂತಿದೆ.

ಇತ್ತೀಚೆಗೆ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸುವಂತ ಒಂದೇ ಕುಟುಂಬದ ನಾಲ್ಕು ಜನರ ಬರ್ಬರ ಹತ್ಯೆ ಶೋಭಾ ಕರಂದ್ಲಾಜೆಯವರ ಸಂಸದೀಯ ಕ್ಷೇತ್ರದ ನೇಜಾರು ಎಂಬಲ್ಲಿ ನಡೆಯಿತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆದಿದ್ದ ಈ ದುರ್ಘಟನೆಯನ್ನು ಆ ಪ್ರದೇಶದ ಸಮಸ್ತ ಜನತೆಯ ಖಂಡಿಸಿ ಸಡಗರದ ಹಬ್ಬವನ್ನು ಆಚರಿಸದಿರಲು ನಿರ್ಧರಿಸಿ ಶೋಕ ವ್ಯಕ್ತಪಡಿಸಿ ಮಾನವೀಯತೆಯ ಧರ್ಮವನ್ನು ಮೆರೆದರೆ ಕ್ಷೇತ್ರದ ಸಂಸದರೆ ಮಾತ್ರ ಈ ಘಟನೆಯನ್ನು ಖಂಡಿಸದೇ ಮತ್ತು ಯಾವುದೇ ರೀತಿಯ ಕಾನೂನು ಪ್ರಕ್ರಿಯೆಗೆ ಪ್ರಯತ್ನ ಮಾಡದಿರುವುದು ಹಾಗೂ ಇದರ ಬಗ್ಗೆ ಚಕಾರವೆತ್ತದೆ ಮೌನ ತಾಳಿರುವುದು ಇವರ ಸಂಕುಚಿತ ಮನಃಸ್ಥೀತಿಯನ್ನು ಬಿಂಬಿಸುತ್ತದೆ.

ಜಿಲ್ಲೆಗೆ ಆಗಮಿಸಿದರೂ ಸೌಜನ್ಯಕ್ಕಾದರೂ ಮಾನವೀಯ ನೆಲೆಯಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳದಿರುವುದು ಇವರ ಅಮಾನವೀಯತೆಗೆ ಸಾಕ್ಷಿಯಾಗಿದೆ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಯಾವುದೇ ರೀತಿಯ ಸಹಕಾರ ನೀಡದಿದ್ದರೂ ಇಲ್ಲಿ ಬಂದು ರಾಜ್ಯ ಸರ್ಕಾರವನ್ನು ಟೀಕಿಸುವುದು ಸಂಸದೆಗೆ ಒಂದು ರೀತಿಯ ಚಾಳಿಯಾಗಿ ಬಿಟ್ಟಿದೆ.

ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿರುವುದು ಕಳ್ಳರ ತಂಡ ಎಂದು ಅಸಂವಿಧಾನಿಕ ಪದ ಬಳಕೆ ಮಾಡಿರುವ ಸಂಸದೆಯ ಹೇಳಿಕೆ ಇವರ ರಾಜಕೀಯ ಅಪ್ರಬುದ್ಧತೆಗೆ ಕನ್ನಡಿ ಹಿಡದಂತಿದೆ. ರಾಜ್ಯ ಸರ್ಕಾರದ ಕ್ಯಾಬಿನೆಟ್ ಕಳ್ಳರ ತಂಡವೆಂದಾದರೆ ಕೇಂದ್ರ ಸರ್ಕಾರದ ಕ್ಯಾಬಿನೆಟನನ್ನು ಏನೇಂದು ಕರೆಯೋಣ?

ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ಮುಳುಗಿ ಹೋಗಿದ್ದ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೆಸೆದಿದ್ದು, ಇದೀಗ ಅಧಿಕಾರವಿಲ್ಲದೆ ಹತಾಶರಾಗಿ ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಚಡಪಡಿಸುತ್ತಿರುವುದೇ ಇವರ ಅಧಿಕಾರ ದಾಹಕ್ಕೆ ಸಾಕ್ಷಿ. ರಾಜ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಹೋಗಿರುವ ಬಿಜೆಪಿಗೆ ಈಗ ಅಸ್ತಿತ್ವ ಉಳಿಸಿಕೊಳ್ಳಲು ಸುಳ್ಳು ಕಥೆಗಳ ಸೃಷ್ಠಿ ಮತ್ತು ಅಪಪ್ರಚಾರ ಒಂದೇ ಬಂಡವಾಳ ಎಂಬಂತೆ ಭಾಸವಾಗುತ್ತಿದೆ

ಉಡುಪಿ ಸಂಸದೆ ಶೋಭಾ ಕರಂದ್ಲಾಝೆ ಮತ್ತು 25 ಸಂಸದರು ಬರಗಾಲದ ಬಗ್ಗೆಯಾಗಲಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಅನುದಾನದ ಬಗ್ಗೆಯಾಗಲಿ ಬಾಯಿ ತೆರೆದು ಪ್ರಧಾನಿಯವರ ಮುಂದೆ ಮಾತನಾಡುವ ಧ್ಯೆರ್ಯ ಇಲ್ಲದವರಿಗೆ ರಾಜ್ಯದಲ್ಲಿ ಯಶಸ್ವಿಯಾಗಿ ಜನಪರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಟೀಕಿಸುವ ಯಾವ ನೈತಿಕತೆ ಇದೆ? ಒಟ್ಟಾರೆಯಾಗಿ ಹೇಳುವುದಾದರೆ ಕೈಗೆಟುಕ ದ್ರಾಕ್ಷಿ ಹಣ್ಣು ಹುಳಿ ಎಂದ ನರಿಯಂತಾಗಿದೆ ಬಿಜೆಪಿಗರ ಪಾಡು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love