ಸಚಿವ ಪ್ರಮೋದ್ ಸೇರಿದಂತೆ ಆರೋಪ ಹೊತ್ತ ಕಾಂಗ್ರೆಸ್ ಸಚಿವರು ಯಾಕೆ ರಾಜೀನಾಮೆ ನೀಡುತ್ತಿಲ್ಲ : ಶ್ರೀಶ ನಾಯಕ್

Spread the love

ಸಚಿವ ಪ್ರಮೋದ್ ಸೇರಿದಂತೆ ಆರೋಪ ಹೊತ್ತ ಕಾಂಗ್ರೆಸ್ ಸಚಿವರು ಯಾಕೆ ರಾಜೀನಾಮೆ ನೀಡುತ್ತಿಲ್ಲ :  ಶ್ರೀಶ ನಾಯಕ್

ಉಡುಪಿ: ಉಡುಪಿ – ಚಿಕ್ಕಮಗಳೂರು ಸಂಸದೆ ಅವರು ರಾಜ್ಯದ ಸಚಿವೆಯಾಗಿದ್ದಾಗ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪ ಹೊರಿಸಿ, ನೈತಿಕತೆ ಇದ್ದರೇ ಸಂಸದೆ ರಾಜೀನಾಮೆ ನೀಡಬೇಕು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಸಾಲುಸಾಲು ಅವ್ಯವಹಾರ ನಡೆಸುತ್ತಿರುವ ಕಾಂಗ್ರೆಸ್ ಮಂತ್ರಿಗಳು ಯಾಕೆ ರಾಜೀನಾಮೆ ನೀಡುತ್ತಿಲ್ಲ? ಅವರಿಗೆ ನೈತಿಕತೆ ಇಲ್ಲವೇ ? ಅಥವಾ ಅವರ ರಾಜೀನಾಮೆಗೆ ಒತ್ತಾಯಿಸುವ ನೈತಿಕತೆ ಯುವ ಕಾಂಗ್ರೆಸ್ ನಾಯಕರಿಗಿಲ್ಲವೇ ? ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಳೆದೈದು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸುತ್ತಿದೆ, ಆದರೆ ಕಾಂಗ್ರೆಸ್ ನಾಯಕರಿಗೆ ಇದುವರೆಗೆ ಗೊತ್ತಿಲ್ಲದಿದ್ದ, ಶೋಭಾ ಕರಂದ್ಲಾಜೆ ಅವರು 2011ರಲ್ಲಿ ಈ ಅವ್ಯವಹಾರ ನಡೆಸಿದ್ದಾರೆ ಎನ್ನುವ ಆರೋಪ ಈಗ ಇದ್ದಕ್ಕಿದ್ದಂತೆ ಚುನಾವಣೆ ಹತ್ತಿರ ಬರುತ್ತಿರುವಾಗ ಹೇಗೆ ಗೊತ್ತಾಯಿತು ? ಇದುವರೆಗೆ ಅವರ ಬುದ್ದಿಗೇನು ಮಂಪರು ಕವಿದಿತ್ತು ? ಎಂದು ಪೆರ್ಣಂಕಿಲ ಶ್ರೀಶ ನಾಯಕ್ ಪ್ರಶ್ನಿಸಿದ್ದಾರೆ.

ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಮೀನು ಡಿನೋಟಿಫಿಕೇಶನ್‍ನ ಆರೋಪಿಯಾಗಿದ್ದಾರೆ, ಉಡುಪಿಯ ಜಿಲ್ಲಾಸ್ಪತ್ರೆಯನ್ನೇ ಖಾಸಗಿಯವರಿಗೆ ವಹಿಸುವುದಕ್ಕೆ 70 ಲಕ್ಷ ರೂ. ಬೆಲೆಯ ವಾಚು ಉಡುಗೊರೆ ಪಡೆದ ಆರೋಪವೂ ಅವರ ಮೇಲಿದೆ. ಸಚಿವ ಆಂಜನೇಯ ಅವರ ಪತ್ನಿ, ಪತಿಯ ಪರವಾಗಿ ಲಂಚ ಸ್ವೀಕರಿಸಿದ ವಿಡಿಯೋ ದಾಖಲೆಗಳೇ ಬಹಿರಂಗಗೊಂಡಿದೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿನಡೆದಾಗ ನೋಟಿನ ಕಂತೆಕಂತೆ ವಶಪಡಿಸಿಕೊಂಡದ್ದು, ಇನ್ನೂ ತನಿಖೆ ನಡೆಯುತ್ತಿದೆ, ಉಡುಪಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಹೈಕಮಾಂಡಿಗೆ 10 ಕೋಟಿ ರೂ. ಲಂಚ ನೀಡಿ ಮಂತ್ರಿಯಾದರು ಎಂಬ ಆರೋಪವೂ ಇದೆ. ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಸಚಿವ ಕೆ.ಜೆ.ಜಾರ್ಜ್ ಅವರ ಮೇಲೆಂತೂ ಸಿ.ಐ.ಬಿ.ಯೇ ಎಫ್‍ಐಆರ್ ದಾಖಲಿಸಿದೆ. ಹೀಗೆ ಪಟ್ಟಿ ಮಾಡಿದರೇ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರತಿಯೊಬ್ಬ ಮಂತ್ರಿಯೂ ಆರೋಪಿಯೇ ಆಗಿದ್ದಾರೆ. ನೈತಿಕತೆ ಇದ್ದರೇ ಅವರೆಲ್ಲರೂ ರಾಜೀನಾಮೆ ನೀಡಬೇಕಾಗುತ್ತದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನೇ ಬರ್ಖಾಸ್ತು ಮಾಡಬೇಕಾಗುತ್ತದೆ. ಆದರೇ ನೈತಿಕತೆ ಎಂಬುದೇ ಗೊತ್ತಿಲ್ಲದ ಕಾಂಗ್ರೆಸ್ ಸಚಿವರು ಇನ್ನೂ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಇನ್ನು ಸ್ವಲ್ವ ದಿನ ಕಾಯಿರಿ, ಜನರೇ ಅವರ ಅಧಿಕಾರದ ಅಂಟನ್ನು ಕಳಚುತ್ತಾರೆ ಎಂದು ಪೆರ್ಣಂಕಿಲ ಶ್ರೀಶ ನಾಯಕ್ ಹೇಳಿದ್ದಾರೆ.


Spread the love