ಸಮರ್ಥ ಭಾರತದ ಕನಸು ನನಸಾಗಿಸಿದವರು ಮೋದಿ : ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸಮರ್ಥ ಭಾರತದ ಕನಸನ್ನು ನನಸು ಮಾಡುವುದರೊಂದಿಗೆ ದೇಶ ಇಂದು ಸ್ವಾಭಿಮಾನಿಯಾಗಿ ಜಗತ್ತಿನ ಮುಂದೆ ಎದ್ದು ನಿಲ್ಲವಂತಹ ಕ್ರಾಂತಿಕಾರಕ ಬದಲಾವಣೆಯನ್ನು ನರೇಂದ್ರ ಮೋದಿ ಮಾಡಿದ್ದಾರೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶನಿವಾರ ಉಡುಪಿ ಶಾಮಿಲಿ ಸಭಾಂಗಣದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 75 ನೇ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರಧಾನಿಗಳು ಹಿಂದೆಲ್ಲಾ ವಿದೇಶಕ್ಕೆ ಭೇಟಿ ನೀಡಿದಾಗ ಸಿಗುತ್ತಿದ್ದ ಗೌರವಕ್ಕಿಂತ ದುಪ್ಪಟ್ಟು ಗೌರವ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಗತ್ತು ನೀಡುತ್ತಿದೆ ಇದು ಅವರ ಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮತ್ಸ್ಯೋದ್ಯಮಕ್ಕೆ ಪ್ರಧಾನಿಯವರು ಹೆಚ್ಚಿನ ಒತ್ತು ನೀಡಿದ್ದು ಅದೇ ಸಮುದಾಯದ ಬೆಂಬಲದೊಂದಿಗೆ ಆರಂಭಗೊಂಡ ಮಹಾಲಕ್ಷ್ಮೀ ಬ್ಯಾಂಕ್ ಸಾಧನೆ ತೋರುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಇಂದು 20 ಕೋಟಿಗೂ ಅಧಿಕ ಮಂದಿ ತೊಡಗಿಕೊಂಡಿದ್ದು ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರ ಕ್ರಾಂತಿಕಾರಕ ಬದಲಾವಣೆ ಕಾಣಲಿದೆ ಎಂದರು.
ಮಂಗಳೂರು ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಮಾತನಾಡಿ ಪ್ರತಿಯೊಬ್ಬರ ಮನ ಹಾಗೂ ಮನಸ್ಸನು ತಟ್ಟಿದ ವ್ಯಕ್ತಿ ಮೋದಿಯಾಗಿದ್ದು ಕಳೆದ 11 ವರ್ಷದಲ್ಲಿ ದೇಶದ ಪ್ರತಿಯೊಬ್ಬರ ಜೀವನವನ್ನು ತಲುಪಿದ್ದಾರೆ. ಇಡೀ ದೇಶದ ಆಡಳಿತದಲ್ಲಿ ಬದಲಾವಣೆ ತಂದಿರುವ ಅಪರೂಪದ ನಾಯಕ ಅವರಾಗಿದ್ದಾರೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವ ರಾಜ್ ಮಾತನಾಡಿ ಒಂದು ದಿನವೂ ಕೂಡ ರಜೆಯನ್ನು ಪಡೆಯದೆ ಸತತ 23 ವರ್ಷಗಳಿಂದ ದೇಶಕ್ಕಾಗಿ ದುಡಿದವರು ನರೇಂದ್ರ ಮೋದಿ. ಕಳೆದ 75 ವರ್ಷಗಳಲ್ಲಿ ವಿವಿಧ ಪ್ರಧಾನಿಗಳು ದೇಶವನ್ನು ಆಳಿದ್ದು ಅವರದ್ದೇ ಆದ ರೀತಿಯಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಆದರೆ ನರೇಂದ್ರ ಮೋದಿಯವರು ಹಿಂದಿನ ಎಲ್ಲಾ ಪ್ರಧಾನಿಗಳ ಕೆಲಸದೊಂದಿಗೆ ದೇಶದ ಅಭಿವೃದ್ಧಿಗೆ ಅಂತಿಮ ಸ್ಪರ್ಶವನ್ನು ನೀಡಿ ಸೂಪರ್ ಪವರ್ ಮಾಡಿದವರು. ಅವರಲ್ಲಿ ಯಾವುದೇ ರೀತಿಯ ಸ್ವಾರ್ಥ, ಕಲ್ಮಶ ಇಲ್ಲದ ವ್ಯಕ್ತಿಯಾಗಿದ್ದು ದೇಶದ ಹಿತ ಮಾತ್ರ ಅವರ ಚಿಂತನೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಶ್ಪಾಲ್ ಸುವರ್ಣ ಸಹಕಾರಿ ಕ್ಷೇತ್ರಕ್ಕೆ ಮೋದಿ ಕೊಡುಗೆ ಅನನ್ಯವಾಗಿದ್ದು ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರೂಪಿಸುವುದರೊಂದಿಗೆ ಆರ್ಥಿಕತೆಯಲ್ಲಿ ಶಿಸ್ತು ಮೂಡಿಸಿದ್ದಾರೆ ಎಂದರು.
ದೇಶ ಕಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಭವಿಷ್ಯದ ಆತ್ಮನಿರ್ಭರ ಭಾರತ ನಿರ್ಮಾಣದ ರೂವಾರಿಗಳಾದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ, ಕಾರ್ಯ ಯೋಜನೆ , ಬದ್ಧತೆ ಹಾಗೂ ವಿಕಸಿತ ಭಾರತ ಕಲ್ಪನೆಯ ಬಗ್ಗೆ “ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ” “Modi in My Eyes : a Visionary” ಎಂಬ ವಿಷಯದ ಬಗ್ಗೆ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಾಥಮಿಕ ವಿಭಾಗ (5-7 ತರಗತಿ), ಪ್ರೌಢಶಾಲಾ ವಿಭಾಗ ( 8-10), ಪಿಯುಸಿ ವಿಭಾಗ, ಪದವಿ ವಿಭಾಗ, ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನದೊಂದಿಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಅವಕಾಶವನ್ನು ವಿಜೇತರಿಗೆ ಬ್ಯಾಂಕಿನ ವತಿಯಿಂದ ಕಲ್ಪಿಸಲಾಗುವುದು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನಪರಿಷದ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹೊಸದಿಗಂತ ಪತ್ರಿಕೆಯ ಸಿಇಒ ಪಿ ಎಸ್ ಪ್ರಕಾಶ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ದಕ ಮೊಗವೀರ ಮಹಾಜನ ಸಂಘ (ರಿ) ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬ್ಯಾಂಕಿನ ಉಪಾಧ್ಯಕ್ಷರಾದ ವಾಸುದೇವ ಸಾಲಿಯಾನ್, ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಉಪಸ್ಥಿತರಿದ್ದರು.












