ಸಮಸ್ಯೆಗಳ ನಡುವೆಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿ: ಕೋಟ ಶ್ರೀನಿವಾಸ ಪೂಜಾರಿ

Spread the love

ಸಮಸ್ಯೆಗಳ ನಡುವೆಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಶಿಕ್ಷಣ ಹಾಗೂ ಶಿಕ್ಷಕರ ಹಲವಾರು ಸಮಸ್ಯೆಗಳ ನಡುವೆಯೂ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು, ಗುರುವಾರ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಉಡುಪಿ, ಡಾ.ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ (ರಿ)., ಅಂಬಲಪಾಡಿ ಉಡುಪಿ ಇವರ ಸಹಯೋಗದಲ್ಲಿ ಡಾ.ಎಸ್ ರಾಧಾಕೃಷ್ಣನ್ ಜನ್ಮ ದಿನಾಚರಣೆ ಪ್ರಯುಕ್ತ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ದಿನಾಚರಣೆ ಎಂಬುದು ಶಿಕ್ಷಕರ ಸೇವೆಯ ಸಾರ್ಥಕತೆಯನ್ನು ನೆನೆಯುವ ದಿನವಾಗಿದೆ. ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಶಿಕ್ಷಣ ಇಂದು ಎಲ್ಲಾ ವರ್ಗದವರಿಗೂ ಲಭ್ಯವಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ, ಆದರೆ ಯಾವ ರೀತಿಯ ಶಿಕ್ಷಣವನ್ನು ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆ ಕಂಡುಕೊಂಡಿಲ್ಲ. ಎಲ್ಲೆಡೆ ಆಂಗ್ಲ ಭಾಷೆಯ ಪ್ರಭಾವದಿಂದ ಒಂದೆಡೆ ಸರಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದ್ದರೆ ಮತ್ತೊಂದೆಡೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿದೆ. ಇನ್ನು ಹಲವೆಡೆ ಕನ್ನಡ ಭಾಷೆಯನ್ನು ಉಳಿಸುವ ಕುರಿತು ಮಾತನಾಡುವ ಜನರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂಬ ಟೀಕೆಗಳು, ಶಿಕ್ಷಕರ ವರ್ಗಾವಣೆ ಕುರಿತ ಗೊಂದಲಗಳು ಕೇಳಿ ಬರುತ್ತಿದೆ. ಈ ಎಲ್ಲದರ ನಡುವೆಯೂ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಂಡಿದ್ದೇವೆ. ಉತ್ತಮ ನಾಗರಿಕರನ್ನು ಸೃಷ್ಟಿಸುವ ಅವಶ್ಯಕತೆ, ಅನಿವಾರ್ಯತೆ ಮತ್ತು ಶಕ್ತಿ ಶಿಕ್ಷಕರಿಗಿದೆ. ಆದರ್ಶ ಶಿಕ್ಷಕ ಉತ್ತಮ ನಾಗರಿಕನನ್ನು ಸೃಷ್ಟಿಸಲು ಸಾಧ್ಯ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಸರಕಾರ ಶ್ರಮಿಸುವುದಾಗಿ ತಿಳಿಸಿದರು.

ಸ್ವತಃ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಶಿಕ್ಷಕರಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡುತ್ತಾ, ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದ ಶಿಕ್ಷಕರ ಪ್ರತಿನಿಧಿಯಾಗಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಉತ್ತಮ ಶಿಕ್ಷಕ ಎಂದರೆ ಯಾರು ಎಂದು ಸಭಿಕರಲ್ಲಿ ಪ್ರಶ್ನಿಸಿದ ಅವರು, ಶಿಕ್ಷಕ ವೃತ್ತಿಯನ್ನು ಪ್ರೀತಿಸುವವರು, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಸಲು ಸಾಧ್ಯ ಇರುವವರು ಹಾಗೂ ಪ್ರಪಂಚದ ಆಗು ಹೋಗುಗಳನ್ನು ನಿರಂತರವಾಗಿ ಅಧ್ಯಯನ ಮಾಡುವ ಅಭ್ಯಾಸ ಹೊಂದಿರುವವರು ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.

ಉತ್ತಮ ನಾಡು ಕಟ್ಟುವ ಕೆಲಸ ಮಾಡಲು ಸಾಧ್ಯವಿರುವ ಶಿಕ್ಷಕರು, ಒಂದು ಸುಶಿಕ್ಷಿತ ಪೀಳಿಗೆಯನ್ನು ತಯಾರು ಮಾಡುತ್ತಾರೆ. ಹಲವು ಬಾರಿ ವಿದ್ಯಾರ್ಥಿಗಳು ಶಿಕ್ಷಕರ ನಡೆನುಡಿಯನ್ನು ಗಮನಿಸಿ ಅವರನ್ನು ಅನುಕರಿಸುವುದರಿಂದ ಮಾದರಿ ಶಿಕ್ಷಕರಾಗಲು ಶಿಕ್ಷಕರ ನಡೆನುಡಿ ಉತ್ತಮವಾಗಿರಬೇಕು. ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸುವವನೇ ನಿಜವಾದ ಶಿಕ್ಷಕನಾಗುತ್ತಾನೆ. ಶಿಕ್ಷಕರು ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಕೊಡುಗೆಗಳನ್ನಾಗಿ ರೂಪಿಸುವ ಸಾಧನೆಯ ಗುರಿ ಹೊತ್ತು ಕೆಲಸಮಾಡಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿರುವ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸುವುದಾಗಿ ಡಿಸಿ ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು ಮಾತನಾಡಿ, ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವಂತಹ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಶಿಕ್ಷಕರು ಶಿಕ್ಷಣದ ಶಿಲ್ಪಿಗಳಾಗಿದ್ದು, ಶಿಕ್ಷಕರ ದಿನಾಚರಣೆ ಶಿಕ್ಷಣದ ಗುಣಮಟ್ಟವನ್ನು ನಿರ್ಧರಿಸುವ ಕಾರ್ಯಕ್ರಮವಾಗಿದೆ. ಶಿಕ್ಷಕರ ಬದುಕು ಎಲ್ಲರಿಗೂ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮಾದರಿಯಾಗಬೇಕು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಗುಣಮಟ್ಟದ ಶಿಕ್ಷಣ ಬೇರಾವ ಜಿಲ್ಲೆಯಲ್ಲೂ ಕಾಣಲು ಸಾಧ್ಯವಿಲ್ಲ. ಶಿಕ್ಷಕರ ದಿನಾಚರಣೆ ಅರ್ಥಪೂರ್ಣ ಆಚರಣೆ ಆಗುವುದರೊಂದಿಗೆ ಶಿಕ್ಷಕರನ್ನು ಗೌರವಿಸುವ ಕಾರ್ಯ ಎಲ್ಲಾ ಶಾಲೆಯಲ್ಲೂ ಆಗಬೇಕು. ಪ್ರಸ್ತುತ ಜಿಲ್ಲೆಯಲ್ಲಿರುವ ಶೈಕ್ಷಣಿಕ ಗುಣಮಟ್ಟವನ್ನು ನಿರಂತರ ಕಾಯ್ದುಕೊಳ್ಳುವಂತೆ ಶಿಕ್ಷಕರಿಗೆ ಸೂಚಿಸಿದ ಅವರು, ಶಿಕ್ಷಕ ವೃತ್ತಿಯನ್ನು ದುಡಿಮೆ ಎಂದು ಭಾವಿಸದೆ ಸೇವೆಯ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ಶಿಕ್ಷಕರ ದಿನಾಚರಣೆಯಂದು ಶಾಲಾ ಮಟ್ಟದಲ್ಲಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಶಿಕ್ಷಕರ ದಿನಾಚರಣೆಯನ್ನು ಬೆಳಿಗ್ಗೆ ಶಾಲಾ ಮಟ್ಟದಲ್ಲಿ ಆಚರಿಸಿ, ಮಧ್ಯಾಹ್ನದ ನಂತರ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಕುರಿತು ಚಿಂತನೆ ನಡೆಸುವಂತೆ ಶಿಕ್ಷಣ ಅಧಿಕಾರಿಗಳಿಗೆ ಸಲಹೆಯನ್ನು ನೀಡಿ, ರಾಜ್ಯ ಮಟ್ಟದಲ್ಲಿ ಶಿಕ್ಷಕರ ದಿನಾಚರಣೆಯನ್ನು ಪ್ರತೀ ವರ್ಷ ಒಂದೊಂದು ಜಿಲ್ಲೆಯಲ್ಲಿ ಆಚರಿಸುವ ಕುರಿತು ಶಿಕ್ಷಣ ಸಚಿವರಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ)ನ ಅಧ್ಯಕ್ಷ ಡಾ. ಜಿ ಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ, ನಿವೃತ್ತ ಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ವಿವಿಧ ಶಾಲೆಯ ಶಿಕ್ಷಕರಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮವನ್ನು ಅಲೆವೂರು ಶಾಂತಿ ನಿಕೇತನ ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ ಕಿಣಿ ನಡೆಸಿಕೊಟ್ಟರು.

ಕಾಪು ಶಾಸಕ ಲಾಲಾಜಿ ಮೆಂಡನ್, ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿ.ಪಂ. ಸದಸ್ಯೆ ಶಿಲ್ಪ ಸುವರ್ಣ, ಡಯಟ್ ಸಂಸ್ಥೆಯ ಪ್ರಾಂಶುಪಾಲ ಚಂದ್ರಶೇಖರ್, ಜಿಲ್ಲಾ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಮುಖ್ಯೋಪಾದ್ಯಾಯಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಮಂಗಳ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಜ್ಯೋತಿ ಜಿಲ್ಲಾ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಸ್ವಾಗತಿಸಿದರು, ಉದ್ಯಾವರ ಸರಕಾರಿ ಪ್ರೌಢ ಶಾಲೆಯ ಪಂಚಾಕ್ಷರಿ ಎವಿ, ಮಣಿಪುರ ನಾಗರಾಜ್ ಮೊಗೇರ ನಿರೂಪಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ವಂದಿಸಿದರು.


Spread the love