ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

Spread the love

ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

  • ಜಾತಿ ಧರ್ಮ ಎಂದು ಜಗಳ ತರುವವರು ಅವರ ಮಕ್ಕಳನ್ನು ಗಲಭೆ ಹಚ್ಚಲು ಕಳಿಸುವುದಿಲ್ಲ
  • ಬಡವರ ಮಕ್ಕಳನ್ನು, ಅಮಾಯಕರನ್ನು ದಬ್ಬುತ್ತಾರೆ: ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ

ಪುತ್ತೂರು: ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಸೋಮವಾರ ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನ-ಮನ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಶೋಕ್ ಅವರು ಕಾಂಗ್ರೆಸ್ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಸ್ತ್ರದಾನ ಮಾಡುವ ಕಾರ್ಯವನ್ನು 13 ವರ್ಷಗಳಿಂದ ಮಾಡ್ತಾ ಬರುತ್ತಿದ್ದಾರೆ. ಒಂದು ಲಕ್ಷ ಜನರಿಗೆ ಇಂದು ವಸ್ತ್ರದಾನ ಮಾಡುತ್ತಿದ್ದಾರೆ. ಇತರರಿಗೆ ಅವರು ಸ್ಫೂರ್ತಿಯಾಗಲಿ ಎಂದರು.

ಸಮಾಜದಲ್ಲಿನ ದುರ್ಬಲರಿಗೆ ತಮ್ಮ ಗಳಿಕೆಯ ಒಂದು ಭಾಗವನ್ನು ನೀಡುವುದು ಒಳ್ಳೆಯ ಕೆಲಸ ಎಂದರು. ಸಮ ಸಮಾಜ ನಿರ್ಮಾಣ ಸಂವಿಧಾನದ ಉದ್ದೇಶ. ಕಾಯಕ ಮತ್ತು ದಾಸೋಹ ತತ್ವವನ್ನು ಬಸವಣ್ಣ ನಮಗೆ ನೀಡಿದ್ದಾರೆ ಎಂದರು.

ಸಹಿಷ್ಣುತೆ, ಸಹಬಾಳ್ವೆ ಅಗತ್ಯ

ನಮ್ಮ ನಾಡು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಪರಸ್ಪರ ಕಚ್ಚಾಡುವ, ಅಸಮಾನತೆವುಳ್ಳ ಸಮಾಜ ನಿರ್ಮಾಣವಾಗಬಾರದು. ಇತರೆ ಧರ್ಮಗಳ ಬಗ್ಗೆ ಸಹಿಷ್ಣುತೆ ಅಗತ್ಯ. ಸಹಬಾಳ್ವೆ ಇರಬೇಕು. ಇದನ್ನು ಎಲ್ಲರೂ ಪಾಲಿಸಿದಾಗ ಸಂವಿಧಾನದ ಧ್ಯೇಯೋದ್ದೇಶಗಳನ್ನು ಪಾಲಿಸಿದಂತಾಗುತ್ತದೆ ಎಂದರು.

ತಲಾ ಆದಾಯದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ

ರಾಜ್ಯ ಹಸಿವು ಮುಕ್ತವಾಗಬೇಕೆಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ತಲಾ ಆದಾಯದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುತ್ತಾರೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಕಾಂಗ್ರೆಸ್ ಸರ್ಕಾರ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2500 ಕೋಟಿ ರೂ. ಗಳ ಅನುದಾನ ಕೊಡಲು ಸಾಧ್ಯವಾಗುತ್ತಿತ್ತೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜಗಳ ಉಂಟು ಮಾಡುವುದಕ್ಕೆ ಕಡಿವಾಣ

ಟೀಕೆ ಮಾಡುವವರು ಸುಮ್ಮನೆ ಟೀಕೆ ಮಾಡುತ್ತಾರೆ. ಏಕೆಂದರೆ ಜಾತಿ ಧರ್ಮದ ಹೆಸರಿನಲ್ಲಿ ಜಗಳ ತರುವುದರಲ್ಲಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿತ್ತು. ಅದಕ್ಕೆಲ್ಲಾ ನಮ್ಮ ಸರ್ಕಾರ ಕಡಿವಾಣ ಹಾಕಿದೆ ಎಂದರು.

ಜಾತಿ ಧರ್ಮ ಎಂದು ಜಗಳ ತರುವವರ ಮಕ್ಕಳನ್ನು ಇದಕ್ಕೆ ಕಳಿಸುವುದಿಲ್ಲ. ಬಡವರ ಮಕ್ಕಳನ್ನು, ಅಮಾಯಕರನ್ನು ಕಳಿಸುತ್ತಾರೆ. ದಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಈಗ ಸುಧಾರಣೆಯಾಗಿದೆಯಲ್ಲವೆ ಎಂದು ಕೇಳಿದರು. ಪೋಲಿಸ್ ಅಧಿಕಾರಿಗಳು ದಕ್ಷರಾಗಿದ್ದರೆ ಬದಲಾವಣೆ ತರಲು ಸಾಧ್ಯ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಅನ್ಯೋನ್ಯತೆಯಿಂದ ಕೆಲಸ ಮಾಡಬೇಕು ಎಂದರು.

ಪುತ್ತೂರಿನಲ್ಲಿಯೇ ವೈದ್ಯಕೀಯ ಕಾಲೇಜು
ಬಜೆಟ್ ನಲ್ಲಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಕೀಯ ಕಾಲೇಜು ಪುತ್ತೂರಿನಲ್ಲಿಯೇ ನಿರ್ಮಾಣವಾಗಲಿದೆ ಈ ಬಗ್ಗೆ ಯಾರಿಗೂ ಅನುಮಾನ ಬೇಡವೆಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ವೆಚ್ಚ

ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿಗಳನ್ನು ಸರ್ಕಾರ ವೆಚ್ಚ ಮಾಡಿದ್ದು , ಸರ್ಕಾರ ದಿವಾಳಿಯಾಗಿಲ್ಲ, ಆಗುವುದೂ ಇಲ್ಲ. ಮುಂದಿನ ಚುನಾವಣೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಇದಕ್ಕೆ ನೀವು ಆಶೀರ್ವಾದಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ವೈದ್ಯಕೀಯ ಕಾಲೇಜು ನಿರ್ಮಾಣವನ್ನು ಸರ್ಕಾರ ಮಾಡಿಯೇ ತೆರಳಲಿದೆ. ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ನಮ್ಮ ಬದ್ಧತೆಯಾಗಿದೆ. ಇಲ್ಲಿಯವರೆಗೆ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣವಾಗಿದೆ ಎಂದರು.

ಬಡವರ ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಜಿಎಸ್ ಟಿ ಕಡಿತದಿಂದ: ಕರ್ನಾಟಕಕ್ಕೆ 15 ಸಾವಿರ ಕೋಟಿ ನಷ್ಟ

2017ರಲ್ಲಿ ಜಿ ಎಸ್ ಟಿ ಜಾರಿಗೆ ತಂದಿದ್ದು ನರೇಂದ್ರ ಮೋದಿ. ಎಂಟು ವರ್ಷಗಳಾಗಿದೆ. ಎಂಟು ವರ್ಷಗಳಲ್ಲಿ ಭಾರತೀಯರಿಂದ ತೆರಿಗೆ ಲೂಟಿ ಮಾಡಿದ್ದೂ ಅವರೇ. ಈಗ ಕಮ್ಮಿ ಮಾಡಿ ಈಗ ದೀಪಾವಳಿ ಗಿಫ್ಟ್ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯ ಸೋಗಲಾಡಿತನವನ್ನು ಟೀಕಿಸಿದರು.

ಜಿಎಸ್ ಟಿ ಬದಲಾವಣೆಯ ಪರಿಣಾಮದಿಂದಾಗಿ ಕರ್ನಾಟಕಕ್ಕೆ 15 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದರು.

ಕೋಮು ಸೌಹಾರ್ದತೆ ಇದ್ದರೆ ಯಾವುದೇ ರಾಜ್ಯ, ಜಿಲ್ಲೆ ಬೆಳವಣಿಗೆಯಾಗಲು ಸಾಧ್ಯ

ಕೋಮು ಸೌಹಾರ್ದತೆ ಇದ್ದರೆ ಯಾವುದೇ ರಾಜ್ಯ, ಜಿಲ್ಲೆ ಬೆಳವಣಿಗೆಯಾಗಲು ಸಾಧ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಕೋಮು ಸೌಹಾರ್ದತೆಗೆ ಧಕ್ಕೆ ತರುವವರ ಮೇಲೆ ಹಾಗೂ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದರು. ಈ ಬಗ್ಗೆ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಹೆಚ್.ಕೆ ಪಾಟೀಲ್ ಅವರು ಕಾನೂನು ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದರು.

ನಾವು ಆದೇಶ ಹೊರಡಿಸಿದರೆ ಜಾತಿ ಬಣ್ಣ ಕಟ್ಟುತ್ತಾರೆ

ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಯಾವುದೇ ಸಂಘಟನೆ ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ಹಮ್ಮಿಕೊಂಡರೆ ನಿಷೇಧ ಮಾಡಬೇಕೆಂದು ಆದೇಶ ಹೊರಡಿಸಿದ್ದರು. ನಾವೂ ಅದನ್ನೇ ಮಾಡಿದ್ದೇವೆ. ಅದಕ್ಕೆ ಆರ್ ಎಸ್ ಎಸ್ ಬಲಿ ಹಾಕಲು ಹೊರಟಿದ್ದಾರೆ ಎಂದು ಟೀಕಿಸುತ್ತಾರೆ. ನಾವು ಮಾಡಿದರೆ ಜಾತಿ ಬಣ್ಣ ಕಟ್ಟುತ್ತಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಇಂಥ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು ಎಂದರು.

ಜೇನು ಕಚ್ಚಿ ಮೃತಪಟ್ಟವರಿಗೆ 5 ಲಕ್ಷ ಪರಿಹಾರ

ಜಿಲ್ಲೆಯಲ್ಲಿ ಜೇನು ಕಚ್ಚಿ ಮೃತಪಟ್ಟ ವ್ಯಕ್ತಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದರು.


Spread the love
Subscribe
Notify of

0 Comments
Inline Feedbacks
View all comments