ಸರಕಾರಿ ಶಾಲೆಗಳ ದುರಸ್ತಿಗೆ ಆದ್ಯತೆ: ಶಾಸಕ ಮೊಹಿದೀನ್ ಬಾವಾ

Spread the love

ಸರಕಾರಿ ಶಾಲೆಗಳ ದುರಸ್ತಿಗೆ ಆದ್ಯತೆ: ಶಾಸಕ ಮೊಹಿದೀನ್ ಬಾವಾ

 ಮ0ಗಳೂರು : ದುರಸ್ತಿ ಅಗತ್ಯವಿರುವ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಗತ್ಯ ಕಾಮಗಾರಿಗಳನ್ನು ವಿಳಂಭವಿಲ್ಲದೇ ಕೈಗೆತ್ತಿಕೊಳ್ಳಲಾಗುವುದು ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ತಿಳಿಸಿದ್ದಾರೆ.

ಅವರು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈಗೊಳ್ಳಲಾದ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ಈಗಾಗಲೇ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳ ದುರಸ್ತಿ ಮತ್ತು ತುರ್ತು ನಿರ್ವಹಣೆಗೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಅಂಗರಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಂಟು ಕೊಠಡಿಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಈ ಭಾಗದ ಕೈಗಾರಿಕೋದ್ಯಮಿಗಳ ನೆರವಿನಿಂದ ಶಾಲಾ ಕಟ್ಟಡದ ನೆಲ ಮಹಡಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸ್ಥಳೀಯ ಬೃಹತ್ ಉದ್ಯಮ, ಸಾರ್ವಜನಿಕ ಉದ್ದಿಮೆಗಳ ನೆರವನ್ನೂ ಕೋರಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಮೊಹಿದೀನ್ ಬಾವಾ ಹೇಳಿದರು.

ಇಂಗ್ಲೀಷ್ ಮಾಧ್ಯಮದ ಪ್ರಭಾವದ ನಡುವೆಯೂ ನಗರ ಪ್ರದೇಶದಲ್ಲಿರುವ ಅಂಗರಗುಂಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಶಾಸಕರು, ಸರಕಾರಿ ಶಾಲೆಗಳಿಂದಾಗಿಯೇ ಕನ್ನಡ ಸಂಸ್ಕøತಿ ಕರ್ನಾಟಕದಲ್ಲಿ ಉಳಿದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಅಂಗರಗುಂಡಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಗೌಡ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರವಿಕಲಾ ಶೆಟ್ಟಿ, ಎಸ್‍ಡಿಎಂಸಿ ಅಧ್ಯಕ್ಷರಾದ ಇಲ್ಯಾಸ್, ಮನ್ಸೂರ್, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


Spread the love