ಸರ್ಕಾರದ ಸವಲತ್ತುಗಳು ತ್ವರಿತವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಂತಾಗಬೇಕು: ಪ್ರಮೋದ್ ಮಧ್ವರಾಜ್

Spread the love

ಸರ್ಕಾರದ ಸವಲತ್ತುಗಳು ತ್ವರಿತವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಂತಾಗಬೇಕು: ಸಚಿವ ಪ್ರಮೋದ್ ಮಧ್ವರಾಜ್

ಬೆಂಗಳೂರು : ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತ್ವರಿತವಾಗಿ ಮುಟ್ಟುವಂತಾಗುವ ದಿಶೆಯಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಮೀನುಗಾರಿಕೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.

ಮೀನುಗಾರಿಕೆ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಕಾಸಸೌಧದಲ್ಲಿ ಏರ್ಪಡಿಸಿದ್ದ “ಜನಮನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಸೌಲಭ್ಯಕ್ಕಾಗಿ ಆಗಮಿಸುವ ಫಲಾನುಭವಿಗಳಿಗೆ ಗೌರವ ದೊರೆತಾಗ ಮಾತ್ರ ದೇಶವು ರಾಮ ರಾಜ್ಯವಾಗಲು ಸಾಧ್ಯವೆಂದು ಸಚಿವರು ಅಭಿಪ್ರಾಯ ಪಟ್ಟರು.

janamana1

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರು ರಾಜರೆಂಬುದನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮರೆಯುತ್ತಿರುವುದು ವಿಪರ್ಯಾಸವಾಗಿದೆ. ಜನರು ಕೂಡ ಚುನಾವಣೆ ದಿನ ಮಾತ್ರ ತಾವು ರಾಜರೆಂದು ಭಾವಿಸುತ್ತಾರೆ. ಜನಪ್ರತಿನಿಧಿಗಳು 5 ವರ್ಷಗಳಿಗೊಮ್ಮೆ ಮಾತ್ರ ಜನರ ಬಳಿಗೆ ಹೋಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ವಾರ್ತಾ ಇಲಾಖೆಯು ಹಮ್ಮಿಕೊಂಡಿರುವಂತಹ “ಜನಮನ” ಕಾರ್ಯಕ್ರಮದಿಂದ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸಲು ಸಾಧ್ಯವಾಗುತ್ತಿದೆ ಎಂದರು.

ಮೀನುಗಾರಿಕೆ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಾಡಿಯ ಎರಡು ಚಕ್ರವಿದ್ದಂತೆ. ಎರಡೂ ಚಕ್ರಗಳು ಒಟ್ಟಿಗೆ ಒಂದೇ ಸಮಯದಲ್ಲಿ ಚಲಿಸಿದರೆ ಮಾತ್ರ ಗಾಡಿ ಸರಿಯಾಗಿ ಚಲಿಸುತ್ತದೆ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ನಮ್ಮ ಇಲಾಖೆಯಿಂದ ಜನಪರ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಯೋಜನೆಗಳು ನಿಜವಾಗಿಯೂ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಮುಟ್ಟುತ್ತಿದೆಯೇ, ಇದರಿಂದ ಅವರಿಗಾಗಿರುವ ಅನುಕೂಲ, ಅವರ ಅಭಿಪ್ರಾಯ ಇವೇ ಮುಂತಾದ ಮಾಹಿತಿಯನ್ನು ನೇರವಾಗಿ ಫಲಾನುಭವಿಗಳಿಂದಲೇ ಪಡೆಯುವುದರಿಂದ ಇನ್ನಷ್ಟು ಜನಪರ ಕೆಲಸ ಮಾಡಲು ಈ ಸಂವಾದ ಕಾರ್ಯಕ್ರಮ ಸಹಾಯವಾಗಿದೆ ಎಂದರು.

ಸುಮಾರು ಮೂರು ತಾಸುಗಳ ಕಾಲ ತಮ್ಮ ಇಲಾಖೆಯ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಂಡಿರುವ ಭಾಗೀದಾರರು ಮತ್ತು ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಮೂಲಕ ಅವರೊಂದಿಗೆ ಸಲಹೆ ಸೂಚನೆಗಳನ್ನು ಮುಕ್ತವಾಗಿ ಹಂಚಿಕೊಂಡರು.

ಸಂವಾದದಲ್ಲಿ ಫಲಾನುಭವಿಗಳು ನೀಡಿದ ಕೆಲವು ಸಲಹೆ ಸೂಚನೆಗಳ ಮೇರೆಗೆ ಸಚಿವರು ಮುಂದಿನ ಸಾಲಿನ ಆಯವ್ಯಯದಲ್ಲಿ ಮೀನುಗಾರರಿಗೆ ಇನ್ನೂ ಹೆಚ್ಚಿನ ಮನೆಗಾಗಿ ಪ್ರಸ್ತಾವನೆ ಕಳುಹಿಸುವುದು, ನಮ್ಮ ರಾಜ್ಯದಲ್ಲಿಯೇ ಶೂಟಿಂಗ್ ರೇಂಜ್ ಮಾಡುವುದು. ಸರ್ಕಾರದ ವತಿಯಿಂದಲೇ ಟೆನ್ನಿಸ್ ಆಟಗಾರರನ್ನು ಪಟಿಯಾಲಕ್ಕೆ ತರಬೇತಿಗೆ ಕಳುಹಿಸುವುದು. ಹೊಸ ಕ್ರೀಡಾ ನೀತಿಯಲ್ಲಿ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡುವುದನ್ನು ಸೇರಿಸುವುದು, ಇಲಾಖೆವತಿಯಿಂದ ತರಬೇತಿ ಪಡೆದ ಯುವ ಪ್ರತಿಭಾವಂತ ಕಲಾವಿದರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಅವಕಾಶ ದೊರಕಿಸಿಕೊಡುವುದು, ಮೀನುಗಾರರ ಬಲೆ ಕಿಟ್‍ಗಾಗಿ ನೀಡಲಾಗುತ್ತಿರುವ ರೂ. 10 ಸಾವಿರವನ್ನು ಹೆಚ್ಚಳ ಮಾಡುವುದು, ಮೀನುಗಾರರಿಗೆ ನೀಡಲಾಗುತ್ತಿರುವ ಸಲಕರಣೆಗಳ ಗುಣಮಟ್ಟ ಕಾಪಾಡಿಕೊಳ್ಳುವುದು ಮತ್ತು ಮೀನುಮರಿ ಸಾಗಣಿಕೆ ಮಾಡುವವರಿಗೆ ವೈಜ್ಞಾನಿಕ ತರಬೇತಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪರಿಗಣಿಸಲಾಗುವುದೆಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಭರವಸೆ ನೀಡಿದರು.

ಫಲಾನುಭವಿಗಳು ಇಲಾಖೆಯನ್ನು ಇನ್ನೂ ಉತ್ತಮ ಪಡಿಸಲು ಅನೇಕ ಸಲಹೆ ಸೂಚನೆಗಳನ್ನು ನೀಡಿದಕ್ಕೆ ಧನ್ಯವಾದ ತಿಳಿಸಿದ ಸಚಿವರು ಇಲಾಖೆಯನ್ನು ಭ್ರಷ್ಟ್ಟ ಮುಕ್ತ ಇಲಾಖೆಯನ್ನಾಗಿ ಮಾಡುವುದು ನನ್ನ ಗುರಿ ಎಂದರು.

ಪ್ರಾಸ್ತಾವಿಕವಾಗಿ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಅವರು ಮಾತನಾಡಿ ಸರ್ಕಾರವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಆದರೆ ಆ ಯೋಜನೆಗಳು ತಳಮಟ್ಟದ ಫಲಾನುಭವಿಗಳಿಗೆ ಮುಟ್ಟುತ್ತಿರುವ ಮಾಹಿತಿಯ ಜೊತೆಗೆ ಕಾರ್ಯಕ್ರಮಗಳು ಯಶಸ್ವಿಯಾಗಿದೆಯೇ ಎಂಬುದನ್ನು ಜನಮನ ಕಾರ್ಯಕ್ರಮದಿಂದ ನೇರವಾಗಿ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಇಲಾಖಾವಾರು ಜನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಮೊದಲನೇ ಕಾರ್ಯಕ್ರಮವಾಗಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಸ್ವಾಗತಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಮೀನುಗಾರಿಕೆ ಇಲಾಖೆ ನಿರ್ದೇಶಕ ವೀರಪ್ಪಗೌಡ, ಯುವ ಸಬಲೀಕರಣ ಇಲಾಖೆ ನಿರ್ದೇಶಕ ಅನುಪಮ್ ಅಗರ್‍ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಅವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

ಸಂವಾದ ಕಾರ್ಯಕ್ರಮಕ್ಕೂ ಮುಂಚಿತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಮೀನುಗಾರಿಕೆ ಮತ್ತು ಯುವ ಸಬಲೀಕರಣ ಇಲಾಖೆಯ ಸಾಕ್ಷ್ಯಚಿತ್ರವನ್ನು ಫಲಾನುಭವಿಗಳಿಂದ ಸಚಿವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


Spread the love