ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೊ ಅಂತ್ಯಕ್ರಿಯೆ
ಮಂಗಳೂರು: ಕೊಂಕಣಿ ಸಂಗೀತ, ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ, ವಿಶ್ವ ಕೊಂಕಣಿ ಕಲಾರತ್ನ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝಾರಿಯೊ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ರವಿವಾರ ನಡೆಯಿತು.
ನಗರದ ವೆಲೆನ್ಶಿಯಾದ ಸಂತ ವಿನ್ಸೆಂಟ್ ಫೆರೆರ್ ಚರ್ಚ್‌ನಲ್ಲಿ ಅಂತಿಮ ಬಲಿಪೂಜೆಯಲ್ಲಿ ಗೋವಾದ ವಂ. ಪ್ರತಾಪ್ ನಾಯಕ್ ಪ್ರವಚನ ನೀಡಿದರು. ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ವಿಶ್ರಾಂತ ಬಿಷಪ್ ಅ.ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಚರ್ಚ್‌ನಲ್ಲಿ ಅಂತಿಮ ನಮನ ಸಲ್ಲಿಸಿದರು.
ಬಳಿಕ ಜಿಲ್ಲಾಡಳಿತದಿಂದ ಸರಕಾರಿ ಗೌರವಾರ್ಪಣೆ ನಡೆಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸರಕಾರಿ ಗೌರವ ಸಲ್ಲಿಸಿದರು. ಮಧ್ಯಾಹ್ನ 1 ಗಂಟೆಯಿಂದ ಸಂಜೆ 5ರವರೆಗೆ ಶಕ್ತಿನಗರದ ಕಲಾಂಗಣ ದಲ್ಲಿ ಸಾರ್ವಜನಿಕ ವೀಕ್ಷಣೆ ಮತ್ತು ಶ್ರದ್ಧಾಂಜಲಿ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಕೊಂಕಣಿಯ ಪ್ರಸಿದ್ಧ ಗಾಯಕರಿಂದ ಸಂಗೀತ ನಮನ ಸಲ್ಲಿಸಲಾಯಿತು. ಬಳಿಕ ಬೋಳೂರಿನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಸಂಗೀತಾ ನಿರ್ದೇಶಕ ಗುರುಕಿರಣ್, ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾಕಾರಿ ರಾಯ್ ಕ್ಯಾಸ್ಟಲಿನೋ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಜೋಕಿಂ ಸ್ಟಾನಿ ಅಲ್ವಾರಿಸ್, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಕೆಥೋಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷ ಸಂತೋಷ್ ಡಿಸೋಜ, ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿ ಪಿಂಟೋ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.