ಸರ್ಕಾರಿ ಶಾಲಾ ಮಕ್ಕಳಿಗೆ ಸಕಲ ಸೌಲಭ್ಯ – ಸಚಿವ ಮಧ್ವರಾಜ್

Spread the love

ಸರ್ಕಾರಿ ಶಾಲಾ ಮಕ್ಕಳಿಗೆ ಸಕಲ ಸೌಲಭ್ಯ – ಸಚಿವ ಮಧ್ವರಾಜ್

ಉಡುಪಿ: ಸರ್ಕಾರಿ ಶಾಲಾ ಮಕ್ಕಳು ಇತರ ಶಾಲಾ ಮಕ್ಕಳಂತೆ ಕಲಿಯಲು ಪೂರಕವಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸಮವಸ್ತ್ರ, ಶೂ, ಬಿಸಿಯೂಟವನ್ನೊಳಗೊಂಡಂತೆ ಎಲ್ಲ ಸೌಕರ್ಯಗಳನ್ನು ಮಕ್ಕಳಿಗೆ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

shoe-distribution-pramod-udupi

ಅವರಿಂದು ಮಹಾತ್ಮ ಗಾಂಧಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಮಲ್ಪೆ ಮತ್ತು ಹಳೆವಿದ್ಯಾರ್ಥಿ ಸಂಘ ಸಂಯುಕ್ತವಾಗಿ ಆಯೋಜಿಸಿದ ಶೂ ವಿತರಣೆ ಮತ್ತು ದಾನಿಗಳಿಂದ ಪುಸ್ತಕ ಮತ್ತು ಶೈಕ್ಷಣಿಕ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹೊಣೆ ಸಮಾಜದ್ದು; ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ ಎಂದ ಸಚಿವರು, ಶಾಲಾ ದುರಸ್ತಿಗೆ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದರು.
ಕಾರ್ಮಿಕರ ವಲಸೆ ಮಕ್ಕಳಿಂದ ನಗರದಲ್ಲಿ ಸರ್ಕಾರಿ ಶಾಲೆಗಳು ಉಳಿದಿದ್ದು, ಕನ್ನಡ ಶಾಲೆಗಳ ಭವಿಷ್ಯತ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸ್ಥಳೀಯರು ಈ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆ ನಡೆಸಬೇಕಿದೆ ಎಂದರು.
ನಗರಸಭೆಯ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯರಾದ ಶ್ಯಾಮ್ ಪ್ರಸಾದ್ ಕುಡ್ವ ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಮಲ್ಪೆ ಲಯನ್ಸ್‍ನ ಗಿರಿಜಾ ತಲ್ಲೂರು ಶೆಟ್ಟಿ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅತಿಥಿಗಳಾಗಿದ್ದರು. ಸುನಿಲ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶಂಭು ಸುವರ್ಣ ಸ್ವಾಗತಿಸಿದರು. ನಾಗರಾಜ ಪ್ರಭು ಉಪಸ್ಥಿತರಿದ್ದರು, ಶಾಲಾ ಮಕ್ಕಳು, ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


Spread the love