ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ- ಭಾರತ ವಿದ್ಯಾರ್ಥಿ ಫೆಡರೇಷನ್

Spread the love

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ- ಭಾರತ ವಿದ್ಯಾರ್ಥಿ ಫೆಡರೇಷನ್

ಮಂಗಳೂರು: ದ.ಕ ಜಿಲ್ಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲಿದ್ದರೂ ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯದಲ್ಲೂ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಖಾಸಗೀ ಶಿಕ್ಷಣ ಸಂಸ್ಥೆಗಳು ನಾಯಿ ಕೊಡೆಯಂತೆ ತಲೆಯೆತ್ತಿದ್ದು ಅಕ್ರಮ ಡೊನೇಷನ್ ವಸೂಲಿ,ಸರಕಾರಿ ನಿಯಮಗಳನ್ನು ಪಾಲಿಸದೆ ಚಟುವಟಿಕೆ ನಡೆಸುಸುತ್ತಿದ್ದು ನಿಯಂತ್ರಣ ಇಲ್ಲದಂತಾಗಿದೆ. ಆದರೆ ಬಡ,ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಸರ್ಕಾರಿ ಶಾಲೆಗಳು ಮೂಲಭೂತ ಸಮಸ್ಯೆಗಳಿಂದ ಕೂಡಿದೆ.

ವಿದ್ಯಾರ್ಥಿಗಳು ಮಾನಸಿಕ ಒತ್ತಡಗಳಿಲ್ಲದೆ ವಿದ್ಯಾರ್ಥಿ ಸ್ನೇಹಿ ಶಿಕ್ಷಣವನ್ನು ಪಡೆಯಲು ಸಾಧ್ಯವಿರುವುದು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಎಂಬುದು ಶಿಕ್ಷಣ ತಜ್ಞರ ವಾದಗಳಾಗಿವೆ. ಆದರೆ ಗುಣಮಟ್ಟದ ಶಿಕ್ಷಣ ಎಂಬ ಆಧಾರದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಅಳೆದಾಗ ಸರ್ಕಾರಿ ಶಾಲೆಗಳು ಪ್ರಸ್ತುತತೆಯಿಂದ ಕೂಡಿಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಒಬ್ಬನೇ ಖಾಯಂ ಶಿಕ್ಷಕರಿಲ್ಲದ ಶಾಲೆಗಳೂ ಇಂದಿಗೂ ಇದೆ. ವಿದ್ಯಾರ್ಥಿಗಳು ಹೆಚ್ಚಿದ್ದರೂ ಶಿಕ್ಷಕರ ಕೊರತೆ ಇದೆ. ಅದೇ ರೀತಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಆ ಸಂಖ್ಯೆಗೆ ಅನುಗುಣವಾಗಿಯೂ ಶಿಕ್ಷಕರ ನೇಮಕಾತಿ ನಡೆದಿಲ್ಲ. ಸರ್ಕಾರ ಶಾಲೆಗಳಲ್ಲಿ ಚಿತ್ರಕಲೆ,ತೋಟಗಾರಿಕೆಗೆ ಸಂಬಂಧಿಸಿದ ಶಿಕ್ಷಕರು ಇರಬೇಕೇಂದು ಹೇಳುತ್ತದೆ ಆದರೆ ಅನೇಕ ಶಾಲೆಗಳಲ್ಲಿ ಪಠ್ಯ ವಿಷಯಕ್ಕೆ ಸಂಬಂದಿಸಿದ ಶಿಕ್ಷಕರ ಕೊರತೆಯೇ ದೊಡ್ಡ ಪ್ರಮಾಣದಲ್ಲಿ ಇದೆ. ಅದೇ ರೀತಿ ಮುಖ್ಯೋಪಧ್ಯಾಯರು, ದೈಹಿಕ ಶಿಕ್ಷಕರ ಕೊರತೆಯೂ ಇವೆ.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಕ್ರೀಡಾ ಸಾಮಾಗ್ರಿ, ಶೌಚಾಲಯ ವ್ಯವಸ್ಥೆ, ಸುಸಜ್ಜಿತ ಕೊಠಡಿಯ ಕೊರತೆಯೂ ಅನೇಕ ಶಾಲೆಗಳಲ್ಲಿವೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರದ ಪ್ರತಿನಿಧಿಗಳು ಕಾರ್ಯಪ್ರವೃತರಾಗಬೇಕಾಗಿದೆ. ಶಾಲೆಗಳಿಗೆ ಈಗ ನೀಡುತ್ತಿರುವ ನಿರ್ವಹಣಾ ಅನುದಾನವನ್ನೂ ಹೆಚ್ಚಿಸಬೇಕಾಗಿದ್ದು, ಮಾತ್ರವಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು ಮುಚ್ಚುವ ಭೀತಿಯಿಂದ ಇರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಜಿಲ್ಲೆಯಲ್ಲಿ ಯೋಜನೆಯನ್ನು ರೂಪಿಸುವ ಬಗ್ಗೆ ಸರ್ಕಾರದ ಪ್ರತಿನಿಧಿಗಳು, ಪೋಷಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಸರ್ಕಾರಿ ಶಾಲೆಗಳ ಉಳಿಸುವ ವಿಶೇಷ ಯೋಜನೆಯನ್ನು ಜಾರಿಗೊಳಿ¸ವ ಬಗ್ಗೆ ಚರ್ಚೆ ನಡೆಸಬೇಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ ನ ಜಿಲ್ಲಾ ಅಧ್ಯಕ್ಷ ನಿತಿನ್ ಕುತ್ತಾರ್ ಹಾಗೂ ಕಾರ್ಯದರ್ಶಿ ಚರಣ್ ಶೆಟ್ಟಿ ಒತ್ತಾಯಿಸಿದ್ದಾರೆ.


Spread the love