ಸಾಮಾಜಿಕ ಅಂತರದೊಂದಿಗೆ ನಡೆದ ಕಾಳಾವರ ಕಾಲೇಜು ಮೈದಾನದಲ್ಲಿ ಕುಂದಾಪುರ ವಾರದ ಸಂತೆ

Spread the love

ಸಾಮಾಜಿಕ ಅಂತರದೊಂದಿಗೆ ನಡೆದ ಕಾಳಾವರ ಕಾಲೇಜು ಮೈದಾನದಲ್ಲಿ ಕುಂದಾಪುರ ವಾರದ ಸಂತೆ

ಕುಂದಾಪುರ: ಗ್ರಾಮೀಣ ಅಂಗಡಿ ವ್ಯಾಪಾರಸ್ಥರಿಗಾಗಿ ಕುಂದಾಪುರ ಎಪಿಎಂಸಿ ಆವರಣದಲ್ಲಿ ನಡೆಯುತ್ತಿದ್ದ ಶನಿವಾರ ಸಂತೆಯನ್ನು ಕೋಟೇಶ್ವರದ ಕಾಳಾವರವರ ವರದರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಕೋವಿಡ್-19 ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಂದಾಪುರದ ಶನಿವಾರ ಸಂತೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ತರಕಾರಿ, ಹಣ್ಣು, ಅಗತ್ಯ ವಸ್ತುಗಳ ಪೂರೈಕೆಗೆ ವ್ಯತ್ಯಯ ಉಂಟಾಗದಂತೆ ಕೇವಲ ಸಗಟು, ಚಿಲ್ಲರೆ ವ್ಯಾಪರಸ್ಥರಿಗೆ ಮಾತ್ರ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು.

ವಿಸ್ತಾರ ಮೈದಾನದಲ್ಲಿ ಸಂತೆ ನಡೆಸಲು ತಾಲೂಕು ಆಡಳಿತ, ಎಪಿಎಂಸಿ, ಪೊಲೀಸ್ ಇಲಾಖೆ ಶುಕ್ರವಾರವೇ ಸಾಕಷ್ಟು ತಯಾರಿ ನಡೆಸಿತ್ತು. ಸಾಕಷ್ಟು ಅಂತರದಲ್ಲಿ ಗೆರೆಗಳನ್ನು ಹಾಕಿ ಸಾಮಾಜಿಕ ಅಂತರಕ್ಕೆ ಒತ್ತು ಕೊಡಲಾಗಿತ್ತು.

ಜಿಲ್ಲೆಯಲ್ಲಿನ ಅತೀ ದೊಡ್ಡ ವಾರದ ಸಂತೆ ಎನ್ನುವ ಹೆಗ್ಗಳಿಕೆ ಹೊಂದಿದ್ದ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿದ್ದ ವಾರದ ಸಂತೆ ಕೊರೋನಾ ಕಾರಣದಿಂದ ಬಂದ್ ಆಗಿತ್ತು. ಬ್ರಹ್ಮಾವರ, ಬೈಂದೂರು, ಕುಂದಾಪುರ, ಭಟ್ಕಳ ತಾಲ್ಲೂಕುಗಳ ಜನರಿಗೆ ಪ್ರಮುಖ ವ್ಯವಹಾರ ಕೇಂದ್ರವಾಗಿದ್ದ ಸಂತೆ ಬಂದ್ ಆಗಿದ್ದರಿಂದ ಕುಂದಾಪುರ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಯುಂಟಾಗಿತ್ತು. ಗ್ರಾಮೀಣ ಭಾಗದ ಚಿಲ್ಲರೆ ವ್ಯಾಪಾರಸ್ಥರಿಗೆ ಅಗತ್ಯ ಸಾಮಾನುಗಳು ದೊರಕದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ಕಳೆದ ಶನಿವಾರದಂದು ಗ್ರಾಮೀಣ ಭಾಗದ ರಖಂ ವ್ಯಾಪಾರಸ್ಥರಿಗೆ ಅನೂಕೂಲ ಕಲ್ಪಿಸುವ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ರಖಂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರೂ, ಚಿಲ್ಲರೆ ಖರೀದಿದಾರರ ಪ್ರವೇಶದಿಂದಾಗಿ ಒಂದಷ್ಟು ಗೊಂದಲಗಳು ಉಂಟಾಗಿತ್ತು. ಎಪಿಎಂಸಿ ಒಳ ಪ್ರವೇಶಕ್ಕೆ ಅವಕಾಶ ದೊರಕದೆ ಇದ್ದುದರಿಂದಾಗಿ ಜನರು ರಸ್ತೆ ಬದಿಯಲ್ಲಿನ ಮಾರಾಟಗಾರರಿಂದ ತರಕಾರಿ, ಹಣ್ಣು ಹಾಗೂ ಇತರ ವಸ್ತುಗಳನ್ನು ಖರೀದಿಸಿದ್ದರು.

ಶುಕ್ರವಾರ ಅಪೌಚಾರಿಕ ಸಭೆ ನಡೆಸಿದ್ದ ಕಂದಾಯ, ಪೊಲೀಸ್ಹಾಗೂ ಎಪಿಎಂಸಿ ಅಧಿಕಾರಿಗಳು ಚಿಲ್ಲರೆ ಖರೀದಿಗೆ ಬರುವ ಜನರನ್ನು ನಿಯಂತ್ರಿಸಿ ರಖಂ ಖರೀದಿಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಶನಿವಾರ ವಾರದ ಸಂತೆಗೆ ಬದಲಿಯಾಗಿ 10 ಕೆ.ಜಿ ಗಿಂತ ಮೇಲ್ಪಟ್ಟು ಖರೀದಿಸುವ ಖರೀದಿಗಾರರಿಗೆ ಕೋಟೇಶ್ವರದ ಸರ್ಕಾರಿ ಪದವಿ ಕಾಲೇಜಿನಲ್ಲಿ ತರಕಾರಿ, ಹಣ್ಣು ಹಾಗೂ ಕೆಲವು ಅಗತ್ಯ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಮಾರಾಟ ವ್ಯವಸ್ಥೆಯ ಮಾಹಿತಿ ಪಡೆದುಕೊಂಡು ಚಿಲ್ಲರೆ ಖರೀದಿಗಾಗಿ ಬಂದವರಿಗೆ ತಿಳುವಳಿಕೆ ನೀಡಿ ವಾಪಾಸು ಕಳುಹಿಸಲಾಯಿತು. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆದ ಮಾರಾಟ ನಡೆಯಿತು.

ಕೋಟೇಶ್ವರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ದೊರಕದೆ ಇದ್ದುದರಿಂದಾಗಿ ಗ್ರಾಮೀಣ ಭಾಗದಿಂದ ಬಂದಿದ್ದ ವ್ಯಾಪಾರಸ್ಥರು ಎಪಿಎಂಸಿ ಗೆ ಬಂದು ನಂತರ ಕೋಟೇಶ್ವರದ ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.


Spread the love