ಸಾಮಾನ್ಯ ಸಭೆಗೆ ಅಡಚಣೆ; ಬಿಜೆಪಿ ನಗರಸಭಾ ಸದಸ್ಯರ ವಿರುದ್ದ ಜಿಲ್ಲಾಧಿಕಾರಿಗೆ ದೂರು

Spread the love

ಸಾಮಾನ್ಯ ಸಭೆಗೆ ಅಡಚಣೆ; ಬಿಜೆಪಿ ನಗರಸಭಾ ಸದಸ್ಯರ ವಿರುದ್ದ ಜಿಲ್ಲಾಧಿಕಾರಿಗೆ ದೂರು

ಉಡುಪಿ: ಉಡುಪಿ ನಗರಸಭೆಯ ಬಿಜೆಪಿ ಸದಸ್ಯರು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆಯವರಿಗೆ ಪ್ರತಿ ಸಭೆಯಲ್ಲಿ ಸಭೆ ನಡೆಸಲು ಬಿಡದೆ ವೃತಾ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಆಡಳಿತ ಪಕ್ಷದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಬಿಜೆಪಿ ನಗರಸಭಾ ಸದಸ್ಯರು ಪ್ರತಿ ಸಭೆಯಲ್ಲಿ ಅಧ್ಯಕ್ಷರು ಸಭೆ ನಡೆಸುವಾಗ ಸರಿಯಾಗಿ ಸಭೆ ನಡೆಸಲು ಬಿಡುತ್ತಿಲ್ಲ, ಸುಮ್ಮನೆ ಮೇಜು ಬಡಿದು ಗದ್ದಲ ಎಬ್ಬಿಸುವುದು, ಅನಾವಶ್ಯಕವಾಗಿ ಸದನದ ಬಾವಿಯಲ್ಲಿ ಬಂದು ಧರಣಿ ಕೂರುವುದು ಯಾವುದೇ ರೀತಿಯ ಅಭಿವೃದ್ಧಿಪರ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಗುರುವಾರದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಅಭಿವೃದ್ಧಿಯ ಬಗ್ಗೆ ಮಾತನಾಡುವುದಕ್ಕಾಗಿ ಸ್ವತಃ ಸಮಯ ಕೇಳಿದಾಗ ಅಧ್ಯಕ್ಷರ ಪೀಠದ ಬಳಿ ಬಂದು ಅವರ ಮೈಕ್ ಕಸಿಯುವ, ಪೌರಾಯುಕ್ತರ ಅಜೆಂಡಾ ಪ್ರತಿಯನ್ನು ಕಸಿಯುವ ಪ್ರಯತ್ನ ಮಾಡಿದ್ದಾರೆ ಇದರಿಂದ ಬೇಸರಗೊಂಡ ಅಧ್ಯಕ್ಷರು ಕಾರ್ಯಸೂಚಿಯನ್ನು ಒದಿ ಮಂಜೂರು ಮಾಡಿದ್ದಾರೆ. ಸಭೆಯಲ್ಲಿ ಕೆಟ್ಟ ಭಾಷೆಯನ್ನು ಅಸಭ್ಯ ವರ್ತನೆಯನ್ನು ತೋರಿಸಿ ವೈಯುಕ್ತಿಕ ಚರ್ಚೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರತಿ ಸಭೆಯಲ್ಲಿ ಇಂತಹ ವರ್ತನೆಯಿಂದ ನಗರದ ಅಭಿವೃದ್ಧಿಗೆ ಬಿಜೆಪಿಯ ನಗರಸಭಾ ಸದಸ್ಯರು ಅಡ್ಡಿ ಪಡಿಸುತ್ತಿದ್ದಾರೆ. ಪ್ರತ್ಯೇಕವಾಗಿ ಇಬ್ಬರು ನಗರಸಭಾ ಸದಸ್ಯರು ಸಭೆಯನ್ನು ನಡೆಸುವುದಕ್ಕೆ ಪ್ರತಿಬಾರಿ ಅಡ್ಡಿ ಪಡಿಸುತ್ತಿದ್ದಾರೆ. ಇದುವರೆಗೂ ನಾವು ಸಹಿಸಿಕೊಂಡು ಸುಮ್ಮನಿದ್ದು ಇನ್ನೂ ಸಹಿಸಲು ಸಾಧ್ಯವಿಲ್ಲ ಆದ್ದರಿಂದ ಜಿಲ್ಲಾಧಿಕಾರಿಗಳು ಸಂಬಂಧೀತ ಬಿಜೆಪಿ ಸದಸ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿಯನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಸಭೆಯ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಅಧ್ಯಕ್ಷರಿಗೆ ಸೂಚಿಸಿದರು ಮತ್ತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ನಗರಸಭೆಯ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಮಾಜಿ ಅಧ್ಯಕ್ಷರಾದ ಯುವರಾಜ್, ಸದಸ್ಯರಾದ ಜನಾರ್ಧನ ಭಂಡಾರ್ಕರ್, ರಮೇಶ್ ಕಾಂಚನ್, ಶಶಿರಾಜ್ ಕುಂದರ್, ಸೆಲಿನಾ ಕರ್ಕಡ, ಗಣೇಶ್ ನೇರ್ಗಿ, ಆರ್. ಕೆ. ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love