ಸುರತ್ಕಲ್‌ ಟೋಲ್‌ ಮುಚ್ಚಲು ಆಗ್ರಹ

Spread the love

ಸುರತ್ಕಲ್‌ ಟೋಲ್‌ ಮುಚ್ಚಲು ಆಗ್ರಹ

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಕ್ಕದಲ್ಲಿರುವ ಸುರತ್ಕಲ್‌ ಟೋಲ್‌ ಗೇಟ್‌ನ ಪರವಾನಗಿ ಅವಧಿ ನವೆಂಬರ್‌ 15ರಂದು ಅಂತ್ಯಗೊಳ್ಳಲಿದ್ದು, ಆ ಬಳಿಕ ಟೋಲ್‌ ಕೇಂದ್ರವನ್ನು ಮುಚ್ಚುವಂತೆ ಸುರತ್ಕಲ್‌ ಟೋಲ್‌ ವಿರೋಧಿ ಹೋರಾಟ ಸಮಿತಿ ನಿಯೋಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಮನವಿ ಸಲ್ಲಿಸಿದೆ.

ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಹಾಗೂ ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ ನೇತೃತ್ವದಲ್ಲಿ ಎನ್‌ಎಚ್‌ಎಐ ಮಂಗಳೂರು ಯೋಜನಾ ನಿರ್ದೇಶಕ ಶಿಸು ಮೋಹನ್‌ ಅವರನ್ನು ಭೇಟಿಮಾಡಿದ ನಿಯೋಗ, ಟೋಲ್‌ ಗೇಟ್‌ ಪರವಾನಗಿ ನವೀಕರಿಸದಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

‘ಈ ಹಿಂದೆ ಪ್ರಾಧಿಕಾರ ಕೈಗೊಂಡ ತೀರ್ಮಾನದಂತೆ ಟೋಲ್‌ ಗೇಟ್‌ ತೆರವು ಮಾಡಬೇಕು. ಗುಂಡಿಗಳಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವ ಸುರತ್ಕಲ್‌ನಿಂದ ನಂತೂರು ವೃತ್ತದವರೆಗಿನ ಮಾರ್ಗವನ್ನು ದುರಸ್ತಿ ಮಾಡಬೇಕು. ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವ ಕೂಳೂರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾತ್ಕಾಲಿಕ ನೆಲೆಯಲ್ಲಿ ಪ್ರಾರಂಭವಾದ ಸುರತ್ಕಲ್‌ ಟೋಲ್‌ ಗೇಟ್‌ ಐದು ವರ್ಷದಿಂದ ಕಾರ್ಯಾಚರಿಸುತ್ತಿದೆ. ಸ್ಥಳೀಯರ ವಿರೋಧ, ಪ್ರತಿಭಟನೆಗಳ ನಡುವೆಯೂ ಮುಂದುವರಿಸಲಾಗಿದೆ. ಎರಡು ವರ್ಷಗಳಿಂದ ಕಡಿಮೆ ಅವಧಿಗೆ ಪದೇ ಪದೇ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಈ ಹಿಂದಿನ ನಿರ್ಧಾರದಂತೆ ಸುರತ್ಕಲ್‌ ಟೋಲ್‌ ಕೇಂದ್ರವನ್ನು ಹೆಜಮಾಡಿ ಟೋಲ್‌ ಕೇಂದ್ರದ ಜೊತೆ ವಿಲೀನ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಬೇಡಿಕೆಯಂತೆ ಟೋಲ್‌ ಕೇಂದ್ರ ರದ್ದು ಮಾಡಬೇಕು. ಹೆದ್ದಾರಿಯ ದುರಸ್ತಿ ಮಾಡಬೇಕು. ತಪ್ಪಿದಲ್ಲಿ ಪ್ರಾಧಿಕಾರದ ವಿರುದ್ಧ ತೀವ್ರವಾದ ಹೋರಾಟ ಆರಂಭಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಭರತ್ ಶೆಟ್ಟಿ ಕುಳಾಯಿ ( ಅಧ್ನಕ್ಷರು, ನಾಗರಿಕ ಸಮಿತಿ ಕುಳಾಯಿ) ಗಂಗಾಧರ ಭಂಜನ್ (ಕಾರ್ಯದರ್ಶಿ, ನಾಗರಿಕ ಸಮಿತಿ ಕುಳಾಯಿ) ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್ ಹೋರಾಟ ಸಮಿತಿ ಪ್ರಮುಖರಾದ ಶ್ರೀಮಾಥ್ ಕುಲಾಲ್, ನಿತಿನ್ ಬಂಗೇರ, ಅಜ್ಮಾಲ್ ಅಹ್ಮದ್, ಜನಾರ್ಧನ ಸಾಲ್ಯಾನ್ ಕುಳಾಯಿ ಹಾಜರಿದ್ದರು


Spread the love