ಸುರತ್ಕಲ್: ಗ್ಯಾರೇಜ್‌ನಿಂದ ವಾಹನಗಳ ಬಿಡಿಭಾಗ ಕಳವು: ಲಾರಿ ಚಾಲಕನ ಬಂಧನ
ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಪ್ರದೇಶದ ಗ್ಯಾರೇಜ್‌ನಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ: ಫೆಬ್ರವರಿ 14/15-2026ರ ರಾತ್ರಿ ವೇಳೆ ಲಾರಿಯಲ್ಲಿ ಬಂದಿದ್ದ ಚಾಲಕನೊಬ್ಬನು ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ ಸಮೀಪದ ಫ್ರೆಂಡ್ಸ್ ಗ್ಯಾರೇಜ್ ಬಳಿ ಲಾರಿಯನ್ನು ನಿಲ್ಲಿಸಿ, ಗ್ಯಾರೇಜ್‌ನಲ್ಲಿ ದುರಸ್ತಿಗಾಗಿ ಇರಿಸಲಾಗಿದ್ದ ಎರಡು ಭಾರೀ ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ಲಾರಿಯಲ್ಲಿ ಕೊಂಡೊಯ್ದಿದ್ದಾನೆ. ಈ ಬಗ್ಗೆ ಗ್ಯಾರೇಜ್ ಮಾಲೀಕರು ನೀಡಿದ ದೂರಿನ ಮೇರೆಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಲಾರಿ ಚಾಲಕನಾದ ಮುಖೇಶ್ ದಾಸ್ (46), ತಂದೆ ಚೊಟ್ಟುದಾಸ್, ವಾಸ: ಓಲ್ಡ್ ನಂ.10/A, ನ್ಯೂ ನಂ.450, 9ನೇ ಮೇನ್, 5ನೇ ಕ್ರಾಸ್, ಶ್ರೀನಿವಾಸನಗರ, ಬನಶಂಕರಿ, ಬೆಂಗಳೂರು ದಕ್ಷಿಣ, ಬೆಂಗಳೂರು ಹಾಗೂ ಖಾಯಂ ವಿಳಾಸ ಮೇಘವಾಲೋ ಶ್ರೀಮಲಿಯೋ ಕ ಬಾಸ್, ಖುದೇಚ, ಜೋಧ್‌ಪುರ, ರಾಜಸ್ಥಾನ ರಾಜ್ಯ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯ ವಶದಿಂದ ರೂ.96,000 ಮೌಲ್ಯದ ಕಳವುಗೈದ ವಾಹನಗಳ ಬಿಡಿಭಾಗಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ KA-02-AM-2335 ಸಂಖ್ಯೆಯ ಈಚರ್ ಲಾರಿ ಸೇರಿ ಒಟ್ಟು ರೂ.15,96,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.













