ಸುರತ್ಕಲ್| ಪಶ್ಚಿಮ ಬಂಗಾಳ ಮೂಲದ ಯುವಕನ ಕೊಲೆ ಪ್ರಕರಣ; ಓರ್ವ ಆರೋಪಿ ಸೆರೆ
ಸುರತ್ಕಲ್ : ಮುಕ್ಕದಲ್ಲಿರುವ ಎಸ್ಟೇಟ್ ಒಂದರಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪರಂಪುರ್, ರತುವಾ ನಿವಾಸಿ ಮುಖೇಶ್ ಮಂಡಲ್ (27) ಎಂಬಾತನನ್ನು ಕೊಲೆಗೈದ ಆರೋಪದಲ್ಲಿ ಪಶ್ಚಿಮ ಬಂಗಾಲ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮುಕ್ಕದಲ್ಲಿರುವ ಎಸ್ಟೇಟ್ ನಲ್ಲಿ ಕೂಲಿ ನೌಕರನಾಗಿ ದುಡಿಯುತ್ತಿದ್ದ ಮುಖೇಶ್ ಮಂಡಲ್ 2025ರ ಜೂನ್ 24ರಂದು ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾಗಿದ್ದ ಮುಖೇಶ್ ಮಂಡಲ್ ನ ಮೃತದೇಹ 2025ರ ಆಗಸ್ಟ್ 21 ರಂದು ಎಸ್ಟೇಟ್ ನ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿತ್ತು.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಪಶ್ಚಿಮ ಬಂಗಾಲ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ವಶಕ್ಕೆ ಪಡೆದು ಸುರತ್ಕಲ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಮುಖೇಶ್ ಮಂಡಲ್ ನನ್ನು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ನೀರಿನ ಟ್ಯಾಂಕ್ ಗೆ ಹಾಕಿ ಮರದ ಮುಚ್ಚಳ ಮುಚ್ಚಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿವೆ.