ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ
ಮಂಗಳೂರು: ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐಎ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೇಶದ್ರೋಹ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐಎ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೇಶದ್ರೋಹ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಸುರತ್ಕಲ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಸುಹಾಸ್ ಶೆಟ್ಟಿಯನ್ನು 2025ರ ಮೇ 1ರಂದು ಬಜ್ಜೆಯಲ್ಲಿ ಜನರು ನೋಡುತ್ತಿದ್ದಾಗಲೇ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು ಸುಹಾಸ್ ಕೊಲೆ ಪ್ರಕರಣ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು ಹಲವು ಸಮಯದಿಂದ ಹೊಂಚು ಹಾಕಿ ಜನರಲ್ಲಿ ಭಯ ಮೂಡಿಸುವುದಕ್ಕಾಗಿಯೇ ಈ ರೀತಿ ಭಯಾನಕವಾಗಿ ಕೊಲೆ ಮಾಡಲಾಗಿತ್ತು ಎಂದು ಎನ್‌ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.
ಪ್ರಕರಣದಲ್ಲಿ ದೇಶದ್ರೋಹಿ ಸಂಘಟನೆಗಳ ಪಾತ್ರ ಮತ್ತು ಟಾರ್ಗೆಟ್ ಮಾಡಿ ಹಿಂದು ಸಂಘಟನೆ ನಾಯಕರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿತ್ತು. ತನಿಖೆಯ ಸಂದರ್ಭದಲ್ಲಿ ಹಲವು ತಿಂಗಳುಗಳಿಂದ ಸುಹಾಸ್ ಶೆಟ್ಟಿ ಕೊಲ್ಲಲು ಪ್ರಬಲ ಸಂಚು ರೂಪಿಸಿರುವುದು ತಿಳಿದುಬಂದಿದೆ. ಸುಹಾಸ್ ತನ್ನ ಸಹಚರರ ಜೊತೆಗೆ ಇನ್ನೋವಾ ಕಾರಿನಲ್ಲಿ ಬರುತ್ತಿದ್ದಾಗ ಬಜ್ಜೆಯಲ್ಲಿ ಮುಂದಿನಿಂದ ಮತ್ತೊಂದು ವಾಹನದಿಂದ ಡಿಕ್ಕಿಯಾಗಿಸಿ ಹೊರಬಂದ ಆತನಿಗೆ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಲಾಗಿತ್ತು.
ಸುಹಾಸ್ ಶೆಟ್ಟಿ ಕೊಲೆ ನಡೆಸುವುದಕ್ಕಾಗಿ ನಿಷೇಧಿತ ಪಿಎಫ್‌ಐ ಸಂಘಟನೆಯ ಮಾಜಿ ಸದಸ್ಯ ಅಬ್ದುಲ್ ಸಫಾನ್ ಎಂಬಾತ ನಿಯಾಜ್, ಮುಹಮ್ಮದ್ ಮುಸಾಮಿರ್, ಮಹಮ್ಮದ್ ಮುಜಾಮಿಲ್, ಇನ್ನೊಬ್ಬ ಪಿಎಫ್‌ಐ ಸದಸ್ಯ ವಾಮಂಜೂರು ನೌಶಾದ್ ಮತ್ತು ಆದಿಲ್ ಮಹರೂಫ್ ಜೊತೆಗೂಡಿ ಸಂಚು ನಡೆಸಿದ್ದರು. ಕೃತ್ಯ ನಡೆಸುವುದಕ್ಕಾಗಿ ಆದಿಲ್ ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದ ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಚಿಕ್ಕಮಗಳೂರು ಮೂಲದ ಕಲಂದರ್ ಶಾಫಿ, ರಂಜಿತ್, ನಾಗರಾಜ, ಮಹಮ್ಮದ್ ರಿಜ್ವಾನ್, ಅಜರುದ್ದೀನ್, ಅಬ್ದುಲ್ ಖಾದರ್ ಅವರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿ ಆರೋಪ ಹೊರಿಸಲಾಗಿದೆ. ಇನ್ನೊಬ್ಬ ಆರೋಪಿ ಅಬ್ದುಲ್ ರಜಾಕ್ ಬಗ್ಗೆ ತನಿಖೆ ನಡೆಯುತ್ತಿದ್ದು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಕೋರ್ಟಿಗೆ ಎನ್‌ಐಎ ತಿಳಿಸಿದೆ.













