ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್: ಮಂಗಳೂರಿನಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ
ಮಂಗಳೂರು: ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ದಕ ಜಿಲ್ಲಾ ಬಂದ್ ಗೆ ಕರೆ ನೀಡಿದ್ದು ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬೆಂಗಳೂರಿನಿಂದ ಬರುತ್ತಿದ್ದ ನಾಲ್ಕು ಬಸ್ಸುಗಳಿಗೆ ಕಿಡಿಗೇಡಿಗಳು ನಸುಕಿನ ವೇಳೆಯಲ್ಲಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಇದರ ಬೆನ್ನಲ್ಲೇ ಕೆ ಎಸ್ ಆರ್ ಟಿ ಸಿ ಕೂಡ ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಿದೆ.
ಅಲ್ಲದೆ ಪಂಪ್ ವೆಲ್ ಬಳಿ ನಾಲ್ಕು ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದ್ದು ಅದೃಷ್ಠವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಬಸ್ಸುಗಳ ಗಾಜುಗಳು ಒಡೆದಿದ್ದು ಹಾಗಾಗಿ ಬಸ್ಸು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ನಗರದಲ್ಲಿ ಬಹುತೇಕ ಅಂಗಡಿಗಳು ಮುಚ್ಚಿದ್ದು ಜನರ ಸಂಚಾರ ವಿರಳವಾಗಿದೆ. ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿರುವ ದ್ರ ಶ್ಯ ಕಂಡು ಬಂದಿದೆ.
ನಗರ ಮತ್ತು ಹೊರವಲಯದ ಪ್ರಮುಖ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಮಂಗಳೂರಿಗೆ ಆಗಮಿಸಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಕೊಲೆಯಾದ ಸುಹಾಸ್ ಶೆಟ್ಟಿ ಹಿಂದೂ ಕಾರ್ಯಕರ್ತನಾಗಿದ್ದ. ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಸುಹಾಸ್ ಶೆಟ್ಟಿ ವಿರುದ್ಧ ಒಟ್ಟು 5 ಪ್ರಕರಣಗಳಿದ್ದವು. ಬಜಪೆ ಠಾಣೆಯಲ್ಲಿ 3, ಬೆಳ್ತಂಗಡಿ, ಸುರತ್ಕಲ್ ಠಾಣೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದು, ಇನ್ನೆರಡು ವಿಚಾರಣೆ ಹಂತದಲ್ಲಿದ್ದವು. ಮತ್ತು ಎರಡರಲ್ಲಿ ಖುಲಾಸೆಗೊಂಡಿದ್ದರು.
ಕೊಲೆ, ಕೊಲೆಗೆ ಯತ್ನ ಆರೋಪ ಹಿನ್ನಲೆ ಪೊಲೀಸರು ರೌಡಿಶೀಟ್ ಓಪನ್ ಮಾಡಿದ್ದರು. ಸುರತ್ಕಲ್ನಲ್ಲಿ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ A1 ಆರೋಪಿಯಾಗಿದ್ದರು. ಮಾರ್ಚ್ನಲ್ಲಿ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರ ಬಂದಿದ್ದರು.
ಸುಹಾಸ್ ಶೆಟ್ಟಿ ಹಾಗೂ ಐದು ಜನ ಕಾರ್ಯಕರ್ತರು ಅವರ ಕಾರಿನಲ್ಲಿ ತೆರಳುತ್ತಾ ಇದ್ದರು. ಜಿಹಾದಿ ಇಸ್ಲಾಮಿಕ್ ಭಯೋತ್ಪಾದಕ ಮುಸಲ್ಮಾನರು ಸುಹಾಸ್ ಹತ್ಯೆ ಮಾಡಿದ್ದಾರೆ. ಇದೊಂದು ಪೂರ್ವ ಯೋಜಿತ ಹತ್ಯೆ, ಇದರ ಹಿಂದೆ ನಿಷೇಧಿತ ಪಿಎಫ್ಐ ಕೈವಾಡ ಇದೆ. ಹೀಗಾಗಿ ಬಂದ್ಗೆ ಕರೆ ನೀಡಿದ್ದೇವೆ. ಪೊಲೀಸ್ ಇಲಾಖೆ ವೈಫಲ್ಯದ ವಿರುದ್ದ ನಾವು ಹೋರಾಟ ಮಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.