ಸೂಕ್ತ ಕಾಲದ ಹೂಡಿಕೆಯಿಂದ ನಿರಂತರ ಲಾಭ– ಡಾ. ಡೊನಾಲ್ಡ್ ಲೋಬೊ

Spread the love

ಸೂಕ್ತ ಕಾಲದ ಹೂಡಿಕೆಯಿಂದ ನಿರಂತರ ಲಾಭ– ಡಾ. ಡೊನಾಲ್ಡ್ ಲೋಬೊ 

ಮಂಗಳೂರು : ಡಾ. ಪಿ ದಯಾನಂದ ಪೈ ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು, ರಥಬೀದಿ, ಇಲ್ಲಿ ಜನವರಿ 17 ರಂದು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ವಾಣಿಜ್ಯ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘ (ಮುಕ್ತಾ)ದ ವತಿಯಿಂದ ಫ್ರಾಂಕ್ಲಿನ್ ಟೆಂಪಲ್‍ಟನ್ ಮ್ಯೂಚುವಲ್ ಫಂಡ್ ಇವರ ಜಂಟಿ ಆಶ್ರಯದಲ್ಲಿ ಸ್ನಾತಕೋತ್ತರ (ಎಂ.ಕಾಂ) ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಡೊನಾಲ್ಡ್ ಲೋಬೊ, “ವರ್ಷಂಪ್ರತಿ ಹಣದುಬ್ಬರ ಹೆಚ್ಚುವುದರಿಂದ ರೂಪಾಯಿ ಬೆಲೆ ಕುಸಿಯುತ್ತದೆ. ಆದ್ದರಿಂದ ಎಷ್ಟು ಎಳವೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತೇವೆಯೋ ಅಷ್ಟು ಬೇಗ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಹಣವನ್ನು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಎಲ್ಲಿ, ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಸರಿಯಾದ ಜ್ಞಾನವಿದ್ದರೆ ಮಾತ್ರ ನಾವು ಹೂಡಿದ ಹಣ ಸುರಕ್ಷಿತವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸರಿಯಾದ ಮಾಹಿತಿ ಪಡೆದು ಇಡೀ ಸಮಾಜದಲ್ಲಿ ಇಂತಹ ಹೂಡಿಕೆಯ ಬಗ್ಗೆ ಅರಿವು ಮೂಡಿಸಲು ಸಿದ್ಧರಾಗಬೇಕು. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಹೂಡಿಕೆಯ ಕೌಶಲ್ಯವನ್ನು ರೂಢಿಸಿಕೊಳ್ಳಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯ ಪೆÇ್ರ. ರಾಜಶೇಖರ್ ಹೆಬ್ಬಾರ್ ವಹಿಸಿದ್ದರು. ಮುಕ್ತಾದ ಕಾರ್ಯದರ್ಶಿ ಪೆÇ್ರ. ಮನೋಜ್ ಲುವಿಸ್, ಫ್ರಾಂಕ್ಲಿನ್ ಟೆಂಪಲ್‍ಟನ್ ಮ್ಯೂಚುವಲ್ ಫಂಡ್, ಮಂಗಳೂರು ಶಾಖೆಯ ಪ್ರಬಂಧಕ ಲಿಯೊ ಅಮಲ್ ಇವರು ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ ಪಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಜಯಕರ ಭಂಡಾರಿ ಹಾಗೂ ಐಕ್ಯೂಎಸಿ ಸಂಯೋಜಕ ಡಾ. ತೆರೆಜ್ ಪಿರೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಂಜುಶ್ರೀ ಎಲ್ಲರನ್ನು ಸ್ವಾಗತಿಸಿದರು ಮತ್ತು ಸಹಕಾರ್ಯದರ್ಶಿ ಮೊಹಮ್ಮದ್ ಹ್ಯಾರಿಸ್ ಕಾರ್ಯಕ್ರಮ ವಂದಿಸಿದರು, ಸುಕನ್ಯ, ದ್ವಿತೀಯ ಎಂ. ಕಾಂ. ವಿದ್ಯಾರ್ಥಿನಿ ಕಾರ್ಯಕ್ರಮ ನಿರೂಪಿಸಿದರು.

ಆರ್ಥಿಕ ಸಲಹೆಗಾರ ನವೀನ್ ರೇಗೊ, ಲಿಯೊ ಅಮಲ್, ಇವೊನಿಲ್ ಡಿ’ಸೋಜಾ ಹಾಗೂ ಎಲ್‍ಸ್ಟನ್ ನೀಲ್ ಮಿನೇಜಸ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. 105 ವಿದ್ಯಾರ್ಥಿಗಳು ಈ ಕಾರ್ಯಾಗಾರದ ಲಾಭವನ್ನು ಪಡೆದರು.


Spread the love