ಸೆ.14ರಂದು ಉಡುಪಿಯಲ್ಲಿ ಕೇರಳ ಸಮಾಜಂ ವತಿಯಿಂದ ಮೊದಲನೇ ಓಣಂ ಹಬ್ಬದ ಸಂಭ್ರಮ
ಉಡುಪಿ: ಇತ್ತೀಚೆಗೆ ಸ್ಥಾಪನೆಯಾದ ಕೇರಳ ಸಮಾಜಂ (ರಿ) ಉಡುಪಿ ಸಂಸ್ಥೆಯು ಉಡುಪಿಯಲ್ಲಿ ತನ್ನ ಮೊದಲನೇ ಓಣಂ ಹಬ್ಬದ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಸೆಪ್ಟೆಂಬರ್ 14, ಭಾನುವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದ ಮಾಹಿತಿ ಹಂಚಿಕೊಳ್ಳಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಅರುಣ್ ಕುಮಾರ್, ಮಾತನಾಡಿ ಉಡುಪಿಯಲ್ಲಿ ನೆಲೆಸಿರುವ ಕೇರಳ ರಾಜ್ಯದ ಮಾಲಯಾಳಿಗಳನ್ನು ಒಗ್ಗೂಡಿಸಿ ಒಂದೇ ವೇದಿಕೆಯಡಿ ತರಲು ಹಾಗೂ ಸಮುದಾಯದ ಧ್ವನಿಯಾಗಲು ಈ ಸಂಘಟನೆಯು ರೂಪುಗೊಂಡಿದೆ. ಇತ್ತೀಚೆಗೆ ಕುಂಜಿಬೆಟ್ಟುವಿನ ಐವೈಸಿ ಸಭಾಭವನದಲ್ಲಿ ಸಂಘಟನೆಯ ಉದ್ಘಾಟನೆ ನೆರವೇರಿತ್ತು.
ಭಾನುವಾರ ಬೆಳಿಗ್ಗೆ 10.30ಕ್ಕೆ ಗೋವಾ ರಾಜ್ಯಪಾಲರಾದ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ (ಐಎಎಸ್), ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ (ಐಪಿಎಸ್), ಮಾಹೆ ಪ್ರೊ. ಡಾ. ಸಾಬು ಕೆ.ಎಂ., ಸುವರ್ಣ ಕರ್ನಾಟಕ ಕೇರಳ ಸಮಾಜಂ ಅಧ್ಯಕ್ಷ ರಾಜನ್ ಜಾಕೋಬ್, ಖ್ಯಾತ ಚಲನಚಿತ್ರ ನಟರು ಹರೀಶ್ ಕನರನ್, ವಿವೇಕ್ ಗೋಪನ್ ಮತ್ತು ಸೀಮಾ ಜಿ ನಾಯರ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 8.30ಕ್ಕೆ “ಪೂಕಳಂ ಸ್ಪರ್ಧೆ” ಆರಂಭವಾಗಲಿದೆ. ಬಳಿಕ ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಓಣಂ ಸಧ್ಯ (ವಿಶೇಷ ಭೋಜನ) ವನ್ನು ಕೇರಳದ ಕ್ಯಾಲಿಕಟ್ನ ವಿನೋದ್ ಕುಮಾರ್ ತಂಡದವರು ಏರ್ಪಡಿಸಲಿದ್ದಾರೆ.
ಮಧ್ಯಾಹ್ನದ ಬಳಿಕ ಕೇರಳದ ಸಿನಿತಾರೆಯರ ತಂಡದಿಂದ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಜಯಕೇರಳ ಕಳರಿ ಸಂಘಮ್ ತಂಡದಿಂದ ಕಳರಿ ಪ್ರದರ್ಶನವಿದೆ.
ಅದೇ ದಿನ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವೂ ಬಂದಿರುವುದರಿಂದ ಹುಲಿ ವೇಷ ಕುಣಿತ, ಕೇರಳ ಶೈಲಿಯ ಚಂಡೆ ಮೇಳ ಹಾಗೂ ಮಾವೇಲಿ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಲಿವೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್. ವಸಂತ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಖಜಾಂಚಿ ರಮೇಶ್ ಇಪಿ, ಜೊತೆಗೆ ಕಾರ್ಯದರ್ಶಿ ಪ್ರದೀಪ್ ಜಿ, ಓಣಂ ಸಮಿತಿ ಅಧ್ಯಕ್ಷ ಹಾಗೂ ಪಿಆರ್ಒ ಡಾ. ಬಿನ್ಸಿ ಎಂ. ಜಾರ್ಜ್ ಉಪಸ್ಥಿತರಿದ್ದರು.