ಸೆ. 22- ಅ.2 ರ ವರೆಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದಲ್ಲಿ ಅದ್ದೂರಿ ದಸರಾ ಸಂಭ್ರಮ

Spread the love

ಸೆ. 22- ಅ.2 ರ ವರೆಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದಲ್ಲಿ ಅದ್ದೂರಿ ದಸರಾ ಸಂಭ್ರಮ

ಉಡುಪಿ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ ಇದರ ವತಿಯಿಂದ 4ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ “ಉಡುಪಿ ಉಚ್ಚಿಲ ದಸರಾ-2025” ಇದೇ ಬರುವ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2 ರವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದೆ. ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಿಸಲಾಗುವುದು ಎಂದು ನಾಡೋಜ ಡಾ’ ಜಿ ಶಂಕರ್ ಹೇಳಿದರು.

ಕ್ಷೇತ್ರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೆಪ್ಟೆಂಬರ್ ಬೆಳಿಗ್ಗೆ ಗಂಟೆ 9.00ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಶ್ರೀ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು. 10 ಗಂಟೆಗೆ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆಯೂ ನಡೆಯಲಿದೆ. 10.30 ಕ್ಕೆ ಉಡುಪಿ ಉಚ್ಚಿಲ ದಸರಾ 2025 ರ ಉದ್ಘಾಟನೆ ಜರುಗಲಿದೆ. ಈ ಬಾರಿ ವಿಶೇಷವಾಗಿ ಸೀರೆ ಮೇಳವನ್ನು ಆಯೋಜನೆ ಮಾಡಲಾಗಿದೆ ಸೆ. 21ರಂದುಸಂಜೆ 6.30ಕ್ಕೆ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದವರೆಗೆ ಮಾಡಲಾಗಿರುವ ವಿದ್ಯುದ್ದೀಪಾಲಂಕಾರದ ಉಧ್ಘಾಟನಾ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆಎಂದರು.

ಶರನ್ನವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಪ್ರತೀದಿನ ಬೆಳಿಗ್ಗೆ ಗಂಟೆ 9.೦೦ರಿಂದ 12.೦೦ರವರೆಗೆ ಚಂಡಿಕಾಹೋಮ, ಮಧ್ಯಾಹ್ನ ಗಂಟೆ 12.00ರಿಂದ 3.00ಗಂಟೆಯವರೆಗೆ ಅನ್ನಸಂತರ್ಪಣೆ, ಸಂಜೆ ಗಂಟೆ 6.30ರಿಂದ ಭಕ್ತರಿಗೆ ಪ್ರಸಾದ ವಿತರಣೆ, ಸಂಜೆ ಗಂಟೆ 5.30ರಿಂದ 6.15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಪ್ರತೀದಿನ ಬೆಳಿಗ್ಗೆ ಗಂಟೆ 10.00ರಿಂದ ಭಜನಾ ಕಾರ್ಯಕ್ರಮ, ಪ್ರತೀದಿನ ಸಂಜೆ ಗಂಟೆ 5.00ರಿಂದ 5.45ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಪ್ರತೀದಿನ ರಾತ್ರಿ 8.30ರಿಂದ ಕಲ್ಪೋಕ್ತ ಪೂಜೆ ನಡೆಯಲಿದ್ದು ಅಕ್ಟೋಬರ್ 2 ರಂದು ಗುರುವಾರ ವಿಜಯದಶಮಿಯಂದು ಸಾಮೂಹಿಕ ಮಹಾಚಂಡಿಕಾ ಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ. ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.

ಅಕ್ಟೋಬರ್ 2 ರಂದು ಮಧ್ಯಾಹ್ನ ಘಂಟೆ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದ್ದು ಮಧ್ಯಾಹ್ನ 3.00 ಕ್ಕೆ ಶೋಭಾಯಾತ್ರೆ ನಡೆಯಲಿದೆ. ಶ್ರೀ ಕ್ಷೇತ್ರದಿಂದ ಸಂಜೆ 4.30 ಕ್ಕೆ ಶೋಭಾಯಾತ್ರೆಯು ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಿ ಅಲ್ಲಿಂದ ತಿರುಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಚ್ಚಿಲ- ಮೂಳೂರು, ಕೊಪ್ಪಲಂಗಡಿಯವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ವಿಸರ್ಜನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಕಾಪು ಬೀಚ್ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯಿಂದ ಆಗಮಿಸುವ ಅರ್ಚಕರಿಂದ ಕಾಶಿಯ ಗಂಗಾ ನದಿಯ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶ್ರೀ ಶಾರದಾಮಾತೆ ಹಾಗೂ ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದಸರಾ ಪ್ರಯುಕ್ತ ಕ್ಷೇತ್ರದಲ್ಲಿ ವಿವಿಧ ಸ್ಪರ್ಧೆಗಳು ಜರುಗಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಪ್ರಮುಖರಾದ ಜಯ ಸಿ ಕೋಟ್ಯಾನ್, ಮೋಹನ್ ಬಂಗೇರಾ, ಗಿರಿಧರ್ ಸುವರ್ಣ, ವಿನಯ್ ಕರ್ಕೆರಾ, ಶರಣ್ ಮಟ್ಟು, ರಾಘವೇಂದ್ರ ಉಪಾಧ್ಯ, ಸಂಧ್ಯಾ, ಉಷಾರಾಣಿ, ರತ್ನಾಕರ ಸಾಲಿಯಾನ್, ಸತೀಶ್ ಕುಂದರ್, ಸುಚಿತ್ ಸಾಲಿಯಾನ್, ಸತೀಶ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರಾ, ಮನೋಜ್ ಸಾಲಿಯಾನ್, ಸತೀಶ್ ಅಮೀನ್ ಪಡುಕೆರೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments