ಸ್ಮಶಾನ ರಸ್ತೆ ಬಂದ್: ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

Spread the love

ಸ್ಮಶಾನ ರಸ್ತೆ ಬಂದ್: ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ 

ಶಾಸಕರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ತಾತ್ಕಾಲಿಕ ಹಿಂದಕ್ಕೆ

 
ಕುಂದಾಪುರ: ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲ್ಲೆಯ ಸ್ಮಶಾನ ಸಂಪರ್ಕಿಸುವ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಬಂದ್ ಮಾಡಿರುವುದನ್ನು ಖಂಡಿಸಿ, ಶುಕ್ರವಾರ ರಾತ್ರಿಯಿಂದ ಗ್ರಾಮಸ್ಥರು ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹವು ಶನಿವಾರ ಶಾಸಕರಿಂದ ಕ್ರಮಕೈಗೊಳ್ಳುವ ಭರವಸೆ ಸಿಕ್ಕ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಗಿದೆ.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು, ಕಳೆದ ಕೆಲ ದಿನಗಳಿಂದ ಸ್ಮಶಾನ ಕುರಿತಂತೆ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದಾರೆ. ಸಮುದ್ರ ದಡದಲ್ಲಿ ಹಿಂದೆ ಸ್ಮಶಾನ ಬಳಕೆಯಾಗುತ್ತಿತ್ತು. ಆ ಜಾಗವನ್ನು ಖಾಸಗಿಯವರಿಗೆ ಕೊಡಬಾರದು, ಖಾಸಗಿ ವ್ಯಕ್ತಿಗಳು ಆವರಣ ಗೋಡೆ ರಚನೆ ಮಾಡುತ್ತಿದ್ದು, ಅದು ಕಾನೂನು ಬಾಹಿರವಾಗಿದೆ. ಆ ಕೆಲಸ ಕೂಡಲೇ ನಿಲ್ಲಿಸಬೇಕು. ಕಾನೂನಾತ್ಮಕ ರೀತಿಯಲ್ಲಿ ಆಗಲಿ. ಸ್ಮಶಾನಕ್ಕೆ ದಾರಿ ವ್ಯವಸ್ಥೆ ಆಗಬೇಕು. ಖಾಸಗಿ ವ್ಯಕ್ತಿಗಳು ಮಾಡಲು ಹೊರಟಿರುವ ಉದ್ಯಮಕ್ಕೆ ತಕರಾರಿಲ್ಲ. ಆದರೆ ಊರಿನವರಿಗೆ ವಿರೋಧ ಕಟ್ಟಿಕೊಳ್ಳಬೇಡಿ. ಇಲ್ಲಿನ ಕಾನೂನು, ಊರವರ ಮಾತಿಗೆ ಮನ್ನಣೆ ಕೊಡಿ. ದಿಕ್ಕರಿಸಿದರೆ, ಕ್ಷೇತ್ರದೊಳಗೆ ಅಳತೆ ಮೀರಿ, ಅಹಂಕಾರ ತೋರಿದರೆ ಇಡೀ ಬೈಂದೂರು ಕ್ಷೇತ್ರದ ಜನರನ್ನು ಒಗ್ಗೂಡಿಸಿ, ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಪ್ರಭಾರ ಉಪವಿಭಾಗಾಧಿಕಾರಿ ರವೀಂದ್ರ ಅವರು, ಖಾಸಗಿ ವ್ಯಕ್ತಿಯಿಂದ ನಿರ್ಮಾಣವಾಗುತ್ತಿರುವ ಕಂಪೌಂಡ್ ರಚನೆ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ. ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಕೊಡುವುದಿಲ್ಲ ಎಂದು ಭರವಸೆ ನೀಡಿದರು.

ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗುಜ್ಜಾಡಿ ಪಿಡಿಒ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ, ಉಪಾಧ್ಯಕ್ಷ ಮಿಥುನ್ ದೇವಾಡಿಗ ಇದ್ದರು.

 ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಅಹವಾಲು ಸ್ವೀಕರಿಸಿ, ಬಳಿಕ ದೂರವಾಣಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಮಾತನಾಡಿ ಗ್ರಾಮಸ್ಥರ ಬೇಡಿಕೆಯನ್ನು ಪರಿಗಣಿಸಿ ಕಾನೂನು ರೀತಿಯಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಮಹಿಳೆಯರು ಸೇರಿದಂತೆ ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments