ಸ್ವಪಕ್ಷಿಯರೇ ಶೋಭಾ ವಿರುದ್ದ ಸಿಡಿದೆದ್ದಿರುವುದು ಸಂಸದರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ – ಪ್ರಮೋದ್ ಮಧ್ವರಾಜ್

Spread the love

ಸ್ವಪಕ್ಷಿಯರೇ ಶೋಭಾ ವಿರುದ್ದ ಸಿಡಿದೆದ್ದಿರುವುದು ಸಂಸದರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ – ಪ್ರಮೋದ್ ಮಧ್ವರಾಜ್

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಅವಕಾಶ ದೊರಕಿದೆ. ಕ್ಷೇತ್ರದೆಲ್ಲೆಡೆ ವಾತಾವರಣವು ಮೈತ್ರಿಯ ಪರವಾಗಿರುವುದರಿಂದ ನಮ್ಮ ಅವಕಾಶವನ್ನು ಹೆಚ್ಚಿಸಿದೆ ಎಂದು ಉಡುಪಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಬಿಡುಗಡೆಗೊಳಿಸಿದ ವೀಕ್ಷಕರ ನೇಮಕಾತಿ ಆದೇಶವನ್ನು ಹಸ್ತಾಂತರಿಸಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ರವರು ಹೇಳಿದರು.

ನನ್ನ ಸಚಿವ ಸ್ಥಾನದ ಅವಧಿಯಲ್ಲಿ ಉಡುಪಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದಂತೆ ಜನತೆ ನನ್ನನ್ನು ಆಯ್ಕೆಗೊಳಿಸಿದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಎರಡೂ ಕ್ಷೇತ್ರಗಳನ್ನು ಪಕ್ಷಪಾತ ರಹಿತವಾಗಿ ಅಭಿವೃದ್ಧಿಗೊಳಿಸುವೆ. ಕ್ಷೇತ್ರದ ಜನರ ಹಿತಕಾಯುವುದರೊಂದಿಗೆ ಅಭಿವೃದ್ಧಿಗೂ ಹೆಚ್ಚನ ಒತ್ತು ನೀಡುವೆ ಎಂದರು. ಶೋಭಾರವರು ತಮ್ಮ ಐದು ವರ್ಷದ ಅವದಿಯಲ್ಲಿ ಕ್ಷೇತ್ರದಲ್ಲಿ ವಾಸ್ತವ್ಯ ಮಾಡದೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರೇ ಅವರ ವಿರುದ್ಧ ಸಿಡಿದೆದ್ದಿರುವುದು ಅವರ ವೈಫಲ್ಯವನ್ನು ತೋರಿಸುತ್ತದೆ ಎಂದು ಪ್ರಮೋದ್ ಮಧ್ವರಾಜ್ರವರು ಮಾತನಾಡುತ್ತಾ ಹೇಳಿದರು. ಕಾರ್ಯಕರ್ತರು ಸಿದ್ಧರಾಮಯ್ಯನವರ ಸಾಧನೆ ಹಾಗೂ ಕೇಂದ್ರದ ವೈಫಲ್ಯವನ್ನು ಮತಯಾಚಿಸುವ ಸಂದರ್ಭ ಜನತೆಗೆ ಮನವರಿಕೆ ಮಾಡಬೇಕು.

ಮೈತ್ರಿ ಪಕ್ಷಕ್ಕೆ ಪೂರಕ ವಾತಾವರಣ ಇರುವುದರಿಂದ ಸಂಘಟಿತರಾಗಿ ಕೆಲಸ ಮಾಡಿದರೆ ಫಲಿತಾಂಶ ನಮ್ಮ ಪರವಾಗಿ ಬರುವುದರಲ್ಲಿ ಸಂಶಯವಿಲ್ಲ. ಜಿಲ್ಲಾ ಪಂಚಾಯತ್ ವ್ಯಾಪ್ತಿ ಹಾಗೂ ನಗರಸಭಾ ವ್ಯಾಪ್ತಿಗೆ ವೀಕ್ಷಕರನ್ನು ನೇಮಿಸಲಾಗಿದೆ. ವೀಕ್ಷಕರು ತಮ್ಮ ಆದೇಶ ಪತ್ರ ಪಡೆದ ಕೂಡಲೇ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ ತೊಡಗಿಸಿಕೊಳ್ಳುವಂತೆ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ಅವರು ವೀಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಎಂ.ಎ. ಗಫೂರ್, ಮುರಳಿ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಭಾಸ್ಕರ್ ರಾವ್ ಕಿದಿಯೂರು, ನೀರೆ ಕೃಷ್ಣ ಶೆಟ್ಟಿ, ಸರಸು ಡಿ. ಬಂಗೇರಾ, ಸುಧಾಕರ ಕೋಟ್ಯಾನ್, ಡಾ. ಸುನೀತ ಶೆಟ್ಟಿ, ಜ್ಯೋತಿ ಹೆಬ್ಬಾರ್, ಹರೀಶ್ ಶೆಟ್ಟಿ ಪಾಂಗಳ, ಶಶಿಧರ ಶೆಟ್ಟಿ ಎಲ್ಲೂರು, ರೋಶನಿ ಒಲಿವರ್, ಇಸ್ಮಾಯಿಲ್ ಆತ್ರಾಡಿ, ದಿವಾಕರ್ ಕುಂದರ್, ರಾಜು ದೇವಾಡಿಗ, ಕುಶಲ್ ಶೆಟ್ಟಿ, ಶಬ್ಬೀರ್ ಅಹ್ಮದ್ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.


Spread the love