ಸ್ವಾಮಿ ವಿವೇಕಾನಂದರ 154ನೇ ಜನ್ಮಾಚರಣೆಗೆ ಗೃಹ ಸಚಿವ ಪರಮೇಶ್ವರ್

Spread the love

ಸ್ವಾಮಿ ವಿವೇಕಾನಂದರ 154ನೇ ಜನ್ಮಾಚರಣೆಗೆ ಗೃಹ ಸಚಿವ ಪರಮೇಶ್ವರ್ 

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ದಿನಾಂಕ 12 ಹಾಗೂ 13 ಜನವರಿ 2017 ರಂದು ಸ್ವಾಮಿ ವಿವೇಕಾನಂದರ 154 ನೇ ಜನ್ಮೋತ್ಸವ – ಸೋದರಿ ನಿವೇದಿತಾರ 150 ನೇ ಜನ್ಮಜಯಂತಿ ಹಾಗೂ ದಕ ಜಿಲ್ಲೆಯ ಹಳ್ಳಿಯ ಬಡಜನತೆಗೆ ಸಿದ್ಧ ಉಡುಪುಗಳ ವಿತರಣೆ. 

ಯುವದಿನಾಚರಣೆ: ಜನವರಿ  12 ರಂದು ಬೆಳಿಗ್ಗೆ 9:30 ರಿಂದ ಮಧ್ಯಾನ್ಹ 3 ಗಂಟೆಯವರೆಗೆ ಸ್ವಾಮಿ ವಿವೇಕಾನಂದರ 154ನೇ ಜನ್ಮಾಚರಣೆ ಹಾಗೂ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ ಪರಮೇಶ್ವರ ರವರು ಕಾರ್ಯಕ್ರಮಕ್ಕೆ ಆಗಮಿಸಿ ವಿವೇಕಾನಂದರ ಜನ್ಮಾಚರಣೆಯಲ್ಲಿ ಪಾಲ್ಗೊಂಡು ಬೆಳಿಗ್ಗೆ ಸರಿಯಾಗಿ 9:30 ಕ್ಕೆ ಯುವದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಯವರು ಸಾನಿಧ್ಯ ವಹಿಸಿ ಆಶಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಜೆ ಆರ್ ಲೋಬೋ, ಕ್ಯಾ. ಗಣೇಶ್ ಕಾರ್ಣಿಕ್ ಯುವದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಮಂಜುನಾಥ ಭಂಡಾರಿ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.  ಬೆಳಿಗ್ಗೆ 11 ಗಂಟೆಯ ನಂತರ ಯುವಜನ ಮತ್ತು ಸ್ವಾಮಿ ವಿವೇಕಾನಂದರ ಕುರಿತು ವಿಚಾರಗೋಷ್ಟಿಗಳು ನಡೆಯಲಿವೆ.  ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಜಿ ಯವರು “ನನ್ನ ಭರವಸೆಯಿರುವುದು ಯುವಜನತೆಯಲ್ಲಿ -ಸ್ವಾಮಿ ವಿವೇಕಾನಂದ” ಎಂಬ ವಿಷಯದ ಕುರಿತು ಮಾತನಾಡುತ್ತಾರೆ. “ಯುವಕರು ಹಾಗೂ ರಾಷ್ಟ್ರ ನಿರ್ಮಾಣ” ಎಂಬ ವಿಷಯದ ಮೇಲೆ ಶ್ರೀ ಕೃಷ್ಣ ಉಪಾಧ್ಯಾಯ ಭಾಷಣ ಮಾಡಲಿದ್ದಾರೆ. ಪವರ್ ಆಫ್ ಪಾಸಿಟಿವ್ ಥಿಂಕಿಂಗ್ ಎಂಬ ವಿಷಯದ ಕುರಿತು ಬೆಂಗಳೂರಿನ ಪೆÇ್ರ. ರಘೋತ್ತಮ್ ರಾವ್ ಯುವಜನತೆಯೊಂದಿಗೆ ಸಂವಾದ ನಡೆಸಲಿದ್ದಾರೆ.

ಅರ್ಪಣಾ: 12 ಜನವರಿಯಿಂದ 30 ಜನವರಿ 2017 ರವರೆಗೆ ಸ್ವಾಮಿ ವಿವೇಕಾನಂದರ ಜನ್ಮೋತ್ಸವದ ಪ್ರಯುಕ್ತ ಹಿಂದುಳಿದ ಹಳ್ಳಿಯ ಬಡಜನರಿಗೆ ಹಾಗೂ ಹಳ್ಳಿಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಿದ್ಧ ಉಡುಪುಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸೌಲಭ್ಯ ವಂಚಿತ ಸುಳ್ಯ ಹಾಗೂ ಪುತ್ತೂರು ತಾಲೂಕಿನ ಆಯ್ದ 30 ಹಳ್ಳಿಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರತಿ ಊರಿನಿಂದ ಸರಿಸುಮಾರು 100 ಜನ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಸುಮಾರು 1 ಕೋಟಿ ಮೌಲ್ಯದ 6500 ಬ್ರಾಂಡೆಡ್ ಉಡುಪುಗಳು ಈಗಾಗಲೇ ವಿತರಣೆಗೆ ಸಿದ್ಧವಾಗಿವೆ, ಸುಮಾರು ಹದಿನೈದು ದಿನಗಳ ಕಾಲ ರಾಮಕೃಷ್ಣ ಮಠದ ಸನ್ಯಾಸಿಗಳು ಖುದ್ದು ಹಳ್ಳಿಗಳಿಗೆ ತೆರಳಿ ಈ ವಸ್ತ್ರಗಳನ್ನು ಬಡವರಿಗೆ ಅರ್ಪಿಸಲಿದ್ದಾರೆ. ಈ ಅರ್ಪಣಾ ಕಾರ್ಯಕ್ರಮಕ್ಕೆ ದಿನಾಂಕ 12 ಜನವರಿಯಂದು ಡಾ. ಜಿ ಪರಮೇಶ್ವರ, ಸನ್ಮಾನ್ಯ ಗೃಹ ಸಚಿವರು ಕರ್ನಾಟಕ ಸರ್ಕಾರ ಇವರು  ರಾಮಕೃಷ್ಣ ಮಠ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.

ಶಕ್ತಿ: 13 ಜನವರಿ 2017 ರಂದು ಸೋದರಿ ನಿವೇದಿತಾರ 150 ಜನ್ಮೋತ್ಸವದ ಪ್ರಯುಕ್ತ ರಾಮಕೃಷ್ಣ ಮಠದಲ್ಲಿ ಕಾಲೇಜು ಯುವತಿಯರಿಗಾಗಿ  “ಶಕ್ತಿ: ಮಹಿಳಾ ಸಬಲೀಕರಣ” ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 9:30 ರಿಂದ ಮಧ್ಯಾನ್ಹ 3 ಗಂಟೆಯವರೆಗೆ “ಪ್ರಸ್ತುತ ಮಹಿಳೆಯ ಮುಂದಿರುವ ಸವಾಲುಗಳು ಹಾಗೂ ಪರಿಹಾರಗಳು” ಎಂಬ ವಿಷಯದ  ಕುರಿತು ಸಂವಾದಗಳು ನಡೆಯಲಿವೆ. ಅಂದು ಬೆಳಿಗ್ಗೆ ಸರಿಯಾಗಿ 9:30 ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ತೇಜಸ್ವಿನಿ ಅನಂತಕುಮಾರ್ ಮುಖ್ಯಸ್ಥರು, ಅದಮ್ಯ ಚೇತನ, ಬೆಂಗಳೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಸಮಾಜಸೇವಾ ಕ್ಷೇತ್ರದಲ್ಲಿ ಪ್ರಸ್ತುತ ಮಹಿಳೆ ಎದುರಿಸುವ ಸವಾಲು ಹಾಗೂ ಪರಿಹಾರ” ಕುರಿತು ಮಾತನಾಡಲಿದ್ದಾರೆ. ಸಂಸದರಾದ ಕು. ಶೋಭಾ ಕರಂದ್ಲಾಜೆಯವರು “ರಾಜಕೀಯದಲ್ಲಿ ಮಹಿಳೆ – ಸವಾಲು ಹಾಗೂ ಪರಿಹಾರ” ಕುರಿತು ಸಂವಾದ ನಡೆಸಲಿದ್ದಾರೆ. ಶ್ರೀಮತಿ ವಿಜಯಲಕ್ಷ್ಮೀ ಶಿಬರೂರು ಇವರು “ಮಾಧ್ಯಮಗಳಲ್ಲಿ ಮಹಿಳೆ- ಸವಾಲು ಹಾಗೂ ಪರಿಹಾರ” ಎಂಬ ವಿಷಯವನ್ನು ಮಂಡಿಸಲಿದ್ದಾರೆ. ಶ್ರೀಮತಿ ಲಕ್ಷ್ಮೀ ಕುಮಾರನ್ ಇವರು “ಆಡಳಿತ ನಿರ್ವಹಣೆಯಲ್ಲಿ ಪ್ರಸ್ತುತ ಮಹಿಳೆಯ ಎದುರಿಸುವ ಸವಾಲು ಹಾಗೂ ಪರಿಹಾರ” ಎಂಬ ವಿಷಯದ ಕುರಿತು ಮಾತನಾಡುವರಿದ್ದಾರೆ. ಮಧ್ಯಾನ್ಹದ ಅವಧಿಯಲ್ಲಿ ಪೆÇ್ರ. ರಘೋತ್ತಮ್ ರಾವ್ ಅವರು “ಪ್ರಬುದ್ಧ ಮಹಿಳೆ” ಎಂಬ ವಿಚಾರದ ಕುರಿತು ಸಂವಹನ ನಡೆಸಲಿದ್ದಾರೆ. ಪ್ರಾಧ್ಯಾಪಕಿ ಶ್ರೀಮತಿ ಸ್ಮಿತಾ ಶೆಣೈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

ಎರಡೂ ದಿನ ಸೇರಿ ಸುಮಾರು 1500 ಜನ ಯುವಕ ಯುವತಿಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿನಿಧಿಗಳು ಹೆಸರನ್ನು ನೋಂದಾಯಿಸಿಕೊಳ್ಳಬೇಕು.  ಈ ಪ್ರಕಟನೆಯನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಹಕರಿಸಬೇಕಾಗಿ ವಿನಂತಿ. ಅಲ್ಲದೇ ಕಾರ್ಯಕ್ರಮದ ದಿನದಂದು ಬೆಳಿಗ್ಗೆ ಸರಿಯಾಗಿ 9:30 ರ ಉದ್ಘಾಟನಾ ಕಾರ್ಯಕ್ರಮಕ್ಕೆ ನಿಮ್ಮ ಪತ್ರಿಕೆಯಿಂದ ವರದಿಗಾರರನ್ನು ಕಳುಹಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.


Spread the love