ಹಕ್ಕಿ ಜ್ವರ: ಮುಂಜಾಗರೂಕತೆ ವಹಿಸಲು ಸೂಚನೆ

Spread the love

ಹಕ್ಕಿ ಜ್ವರ: ಮುಂಜಾಗರೂಕತೆ ವಹಿಸಲು ಸೂಚನೆ
ಮ0ಗಳೂರು ;- ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಕೇರಳ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ  ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರ ಅಧ್ಯಕ್ಷತೆಯಲ್ಲಿ  ಜಿಲ್ಲಾಮಟ್ಟದ ಪ್ರಾಣಿಜನ್ಯ ರೋಗಗಳ ತಡೆಗಟ್ಟುವ ಸಮಿತಿ ಸಭೆ ನಡೆಯಿತು.
ದ.ಕ.ಜಿಲ್ಲೆಯಲ್ಲಿ ಹಕ್ಕಿ ಜ್ವರ ಹರಡದಂತೆ ಸಾರ್ವಜನಿಕರು, ಕೋಳಿ ಮಾಂಸ ಮಾರಾಟ ಕೇಂದ್ರ ಮತ್ತು ಕೋಳಿ ಫಾರಂಗಳು  ಮುಂಜಾಗೃತ ಕ್ರಮ ವಹಿಸಲು  ಜಿಲ್ಲಾಧಿಕಾರಿಗಳು ಸೂಚಿಸಿದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಟಿ. ತಿಪ್ಪೇಸ್ವಾಮಿ ಅವರು ಮಾತನಾಡಿ, ಮುಂಜಾಗರೂಕತಾ ಕ್ರಮಗಳನ್ನು ವಿವರಿಸಿದರು.
ಮುಂಜಾಗರೂಕತಾ ಕ್ರಮಗಳು:  ಕೋಳಿ ಸಾಕಾಣಿಕಾ ಕೇಂದ್ರಗಳಲ್ಲಿ ಶುಚಿತ್ವ ಕಾಪಾಡಬೇಕು,  ಅನಗತ್ಯ ಜನರ ಓಡಾಟ ನಿರ್ಭಂದಗೊಳಿಸಬೇಕು.  ಕೋಳಿ ಫಾರಂಗಳಿಗೆ ಭೇಟಿ ನೀಡುವ ಕೋಳಿ ಆಹಾರ ಸಾಗಾಟ ವಾಹನಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನಂಜುನಾಶಕ ಸಿಂಪಡಿಸಬೇಕು.
ಕೇರಳ ರಾಜ್ಯಕ್ಕೆ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳನ್ನು ರವಾನಿಸಿ ರಾಜ್ಯಕ್ಕೆ ಹಿಂತಿರುಗಿ ಬರುವ ವಾಹನಗಳಿಗೆ ಮತ್ತು ಕೇರಳದಿಂದ ಕೋಳಿ ಖರೀದಿಸಲು ಬರುವ ವಾಹನಗಳಿಗೆ, ಕಟ್ಟುನಿಟ್ಟಾಗಿ ರಾಜ್ಯದ ಗಡಿಭಾಗದಲ್ಲಿಯೇ ನಂಜು ನಾಶಕ ಔಷಧ ಸಿಂಪಡಿಸಿ ಬರುವಂತೆ ಸೂಚಿಸಿದೆ. ಆಯಾ ಕೋಳಿ ಸಾಕಾಣಿಕ ಉದ್ಯಮ ಸಂಸ್ಥೆಯವರಿಗೆ ಶುಚಿತ್ವ ಕಾಪಾಡದ ಕೋಳಿ ಸಾಗಾಟ ವಾಹನಗಳನ್ನು ಗಡಿಯಲ್ಲಿಯೇ ತಡೆದು ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುವುದು.
ಪಶುಪಾಲನಾ ಇಲಾಖೆಯವರು ರೋಗ ಪರಿಶೀಲನೆ ಮತ್ತು ರೋಗ ಕಣ್ಗಾವಲು ನಿಗಾವಹಿಸಲು ಕೋಳಿ ಫಾರಂ ಹಾಗೂ ಕೋಳಿ ಮಾಂಸ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದಾಗ ಸಹಕರಿಸಿ ಪರಿಶೀಲನೆ ನೆರವೇರಿಸಲು ಅನುವು ಮಾಡಿಕೊಡುವುದು. ಕೋಳಿ ಮಾಂಸ ಮಾರಾಟ ಕೇಂದ್ರಗಳು ಶುಚಿತ್ವ ಕಾಪಾಡುವಂತೆ ಮತ್ತು ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಂಡು ರೋಗ ಹರಡದಂತೆ ಸಹಕರಿಸಬೇಕು.
ಸ್ಥಳೀಯ ಸಂಸ್ಥೆಗಳು, ನಗರಾಡಳಿತ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಹ ಶುಚಿತ್ವ ಕಾಪಾಡುವಲ್ಲಿ ನಿಗಾ ವಹಿಸಬೇಕು.  ದ.ಕ.ಜಿಲ್ಲೆಯಲ್ಲಿ ಇಲ್ಲಿಯವರೆಗೂ ಸದರಿ ರೋಗದ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಸಾರ್ವಜನಿಕರು ಅನಗತ್ಯವಾಗಿ ಆತಂಕಗೊಳಪಡುವ ಅಗತ್ಯವಿರುವುದಿಲ್ಲ. ಅದಾಗ್ಯೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ಮಾಂಸ ಮತ್ತು ಮೊಟ್ಟೆಗಳನ್ನು ಸೂಕ್ತ ರೀತಿಯಲ್ಲಿ ಬೇಯಿಸಿ ತಿನ್ನುವುದರಿಂದ ರೋಗ ಹರಡುವ ಸಾಧ್ಯತೆ ಇರುವುದಿಲ್ಲ. ಕೋಳಿಗಳಲ್ಲಿ ಯಾವುದೇ ರೀತಿಯ ಅಸಹಜ ಸಾವು ಮತ್ತು ಹಕ್ಕಿ ಜ್ವರದ ಲಕ್ಷಣ ಕಂಡು ಬಂದಲ್ಲಿ ಹತ್ತಿರದ ಪಶುವೈದ್ಯ ಸಂಸ್ಥೆಗಳಿಗೆ ಕೂಡಲೇ ವರದಿ ನೀಡಬೇಕು.  ಹಕ್ಕಿ ಜ್ವರ ಹರಡದಂತೆ ತಡೆಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಆದ್ದರಿಂದ ರೋಗ ಬರದಂತೆ ತಡೆಯುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಹಕಾರ ಕೋರಲಾಗಿದೆ.

Spread the love