ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಶೋಭಾ ಕರಂದ್ಲಾಜೆ

Spread the love

ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಶೋಭಾ ಕರಂದ್ಲಾಜೆ

ಬೆಂಗಳೂರು : ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂಬ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಂದೊಮ್ಮೆ ಹೆಸರಿಟ್ಟರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಸರಕಾರ ಮಳೆ, ನೆರೆಯಿಂದ ಬಾಧಿತರಾದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಹಿಂದಿನ ಸರಕಾರದಂತೆ ಅನಗತ್ಯ ವಿವಾದಗಳನ್ನು ಸೃಷ್ಠಿಸುತ್ತಿದೆ. ಈ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಷಡ್ಯಂತ್ರ ನಡೆಸುತ್ತಿದೆ. ಇದಕ್ಕೆ ಹಜ್ ಭವನಕ್ಕೆ ಟಿಪ್ಪು ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಹಜ್ ಸಚಿವರ ನೀಡಿರುವ ಹೇಳಿಕೆಯೇ ಸಾಕ್ಷಿ.

ಟಿಪ್ಪು ಸುಲ್ತಾನ್ ವಿವಾದಾತ್ಮಕ ವ್ಯಕ್ತಿ ಎಂದು ಎಲ್ಲರಿಗೂ ತಿಳಿದಿದೆ. ಸಾವಿರಾರು ದೇವಸ್ಥಾನಗಳನ್ನು ನಾಶಗೊಳಿಸಿ, ಲಕ್ಷಾಂತರ ಹಿಂದೂಗಳನ್ನು ಮತಾಂತರಗೊಳಿಸಿ, ಮೈಸೂರು ರಾಜರನ್ನು ಜೈಲಿಗಟ್ಟಿದ್ದನ್ನು ಯಾರೂ ಮರೆತಿಲ್ಲ. ಈಗಾಗಲೇ ಟಿಪ್ಪು ಜಯಂತಿ ಅನೇಕ ಅನಾಹುತಗಳಿಗೆ ಕಾರಣವಾಗಿದೆ.

“ಹಜ್ ಯಾತ್ರಾರ್ಥಿಗಳಿಗೆ ಸುಸಜ್ಜಿತ ಹಜ್ ಭವನವನ್ನು ನಿರ್ಮಿಸಬೇಕೆನ್ನುವ ಸಂಕಲ್ಪದಿಂದ ಬಿಜೆಪಿ ಸರ್ಕಾರ, 40 ಕೋಟಿ ರೂ. ಅನುದಾನ ಒದಗಿಸಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 3 ಎಕರೆ ಜಮೀನು ಒದಗಿಸಿತು. 2011ರಲ್ಲಿ ಭವನದ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಶಿಲಾನ್ಯಾಸ ನೆರವೇರಿಸಿದರು. ಅಂದಿನ ಸಮಾರಂಭದಲ್ಲಿ ಇದೇ ಜಮೀರ್ ಅಹಮದ್ ಖಾನ್ ಹಜ್ ಭವನ ನಿರ್ಮಾಣದ ವಿರುದ್ಧ ದಾಂಧಲೆ ಮಾಡಿದ್ದರು. ಈಗ ಇದೇ ಜಮೀರ್ ಅಹಮದ್ ಈಗ ಅದೇ ಹಜ್ ಭವನಕ್ಕೆ ಟಿಪ್ಪು ಹೆಸರು ನಾಮಕರಣ ಮಾಡಲು ಹೊರಟಿದ್ದಾರೆ,” ಎಂದು ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಹಜ್‍ಭವನಗಳಿಗೆ ಯಾವುದೇ ವ್ಯಕ್ತಿಯ ಹೆಸರು ಇಟ್ಟಿರುವ ಉದಾಹರಣೆಗಳು ಇತರ ರಾಜ್ಯಗಳಿಲ್ಲ. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧವೂ ಆಗಿದೆ. ಸರ್ಕಾರ ಟಿಪ್ಪು ಸುಲ್ತಾನ್ ಹೆಸರನ್ನು ಹಜ್ ಭವನಕ್ಕೆ ನಾಮಕರಣ ಮಾಡಿದರೆ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಲಿದೆ. ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ನಡೆಸಿದರೆ ಪಕ್ಷ ಸಹಿಸುವುದಿಲ್ಲ ಎಂದು ಕರಂದ್ಲಾಜೆ ಎಚ್ಚರಿಸಿದ್ದಾರೆ.


Spread the love