ಹತಾಶ ಮನಸ್ಥಿತಿಯ ಪ್ರಸಾದ್ ಕಾಂಚನ್ ಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ: ಪ್ರಭಾಕರ ಪೂಜಾರಿ
ಉಡುಪಿ: ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡುತ್ತಾ ಶಾಸಕರ ಮನೆಗೆ, ಕಛೇರಿಗೆ ಮುತ್ತಿಗೆ ಹಾಕುತ್ತೇನೆ ಎಂಬ ಬಾಲಿಶ ಹೇಳಿಕೆ ನೀಡುತ್ತಿರುವ, ತನ್ನದೇ ಕಾಂಗ್ರೆಸ್ ಪಕ್ಷದಲ್ಲಿ ಮೊಲೆಗುಂಪಾಗಿರುವ ಪ್ರಸಾದ್ ಕಾಂಚನ್ ಗೆ ಸದಾ ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಹೊತ್ತು ಸಾರ್ಥಕ ಸೇವೆಗೈಯುತ್ತಿರುವ ಉಡುಪಿ ಶಾಸಕರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಸಾದ್ ಕಾಂಚನ್ ರನ್ನು ಉಡುಪಿಯ ಜನತೆ ಹೀನಾಯವಾಗಿ ಸೋಲಿಸಿ ಮನೆಗೆ ಕಳುಹಿಸಿದರೂ ಆ ಸೋಲಿನ ಹತಾಶೆಯಿಂದ ಇನ್ನೂ ಹೊರಬರಲಾಗದ ಪ್ರಸಾದ್ ಕಾಂಚನ್ ಕೇವಲ ತನ್ನ ನಾಯಕರನ್ನು ಖುಷಿಪಡಿಸುವ ಉದ್ದೇಶದಿಂದ ಶಾಸಕರನ್ನು ಟೀಕಿಸುವುದನ್ನೇ ದಿನಚರಿ ಮಾಡಿಕೊಂಡಿರುವುದು ವಿಷಾದನೀಯ.
ತಾಯಿ ಸರಳಾ ಕಾಂಚನ್ ಜಿಲ್ಲಾ ಪರಿಷತ್ ಸದಸ್ಯೆಯಾಗಿದ್ದರೂ ಅವರ ಪುತ್ರರಾಗಿ ಒಂದು ಬಾರಿಯೂ ಜನಪ್ರತಿನಿಧಿಯಾಗಿ ಸೇವೆ ಮಾಡಿದ ಅನುಭವವೇ ಇಲ್ಲದ ಪ್ರಸಾದ್ ಕಾಂಚನ್ ಗೆ ಜನಪ್ರತಿನಿಧಿಯಾಗಿರುವ ಶಾಸಕರನ್ನು ಏಕ ವಚನದಲ್ಲಿ ಟೀಕಿಸಬಾರದು ಎಂಬ ಕನಿಷ್ಠ ಜ್ಞಾನ ಇಲ್ಲದೇ ಇರುವುದು ದುರ್ದೈವದ ಸಂಗತಿಯಾಗಿದೆ. ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುತ್ತಿರುವ ಪ್ರಸಾದ್ ಕಾಂಚನ್ ಗೆ ಅವರ ತಾಯಿಯೇ ಸ್ವಲ್ಪ ಬುದ್ಧಿ ಹೇಳುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
ನಿಟ್ಟೂರು ಪ್ರದೇಶದಲ್ಲಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿ, ನಗರಸಭೆಯ ನಿಯಮಾವಳಿಯನ್ನು ಮೀರಿ ನಿರ್ಮಿಸಿರುವ ತಮ್ಮ ವ್ಯವಹಾರದ ಕಛೇರಿಯ ಅಕ್ರಮ ಕಟ್ಟಡವನ್ನು ತಾವೇ ತಕ್ಷಣ ತೆರವು ಮಾಡಿ ಪ್ರಸಾದ್ ಕಾಂಚನ್ ಇತರರಿಗೆ ಮಾದರಿಯಾಗಲಿ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಆಸ್ಕರ್ ಫೆರ್ನಾಂಡೀಸ್, ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಗೋಪಾಲ ಭಂಡಾರಿಯವರಂತಹ ಹಿರಿಯ ಕಾಂಗ್ರೆಸ್ ಮುಖಂಡರು ತಮ್ಮ ಸಿದ್ಧಾಂತ, ವಿಚಾರಗಳಲ್ಲಿ ರಾಜೀಯಾಗದೇ ತಮ್ಮ ರಾಜಕೀಯ ವಿರೋಧಿಗಳಿಗೆ ಪ್ರಬುದ್ಧವಾಗಿ ಟೀಕೆ ಟಿಪ್ಪಣಿ ಮಾಡುವ ಮೂಲಕ ತಮ್ಮ ಘನತೆ ಮೆರೆಯುತ್ತಿದ್ದರು. ಆದರೆ ಪ್ರಸಾದ್ ಕಾಂಚನ್ ಮಾತ್ರ ತಮ್ಮ ಹೇಳಿಕೆಗಳ ಮೂಲಕ ತಮ್ಮದೇ ಪಕ್ಷಕ್ಕೆ ಮುಜುಗರ ತರುತ್ತಿರುವುದು ಹಾಸ್ಯಾಸ್ಪದವಾಗಿದೆ.
ಪ್ರಸಾದ್ ಕಾಂಚನ್ ಅವರ ತಂದೆ, ತಾಯಿ ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಮೀನು ಮಾರಾಟ ಫೆಡರೇಶನ್ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿರುವುದನ್ನು ಇಂದಿಗೂ ಮರೆಯದೆ ಶಾಸಕರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರೂ ಅವರ ಪುತ್ರರಾಗಿ ಪ್ರಸಾದ್ ಕಾಂಚನ್ ಮಾತ್ರ ಬೇಜವಾಬ್ದಾರಿಯುತ ಮಾತುಗಳನ್ನಾಡುತ್ತಿರುವುದು ವಿಪರ್ಯಾಸವೇ ಸರಿ.
ಪ್ರಸಾದ್ ಕಾಂಚನ್ ಗೆ ಮನೆಗೆ ಮುತ್ತಿಗೆ ಹಾಕಲು ಉತ್ಸಾಹವಿದ್ದರೆ ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಅಪರೂಪದ ಅತಿಥಿಯಂತೆ ಆಗಮಿಸಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕಲಿ ಎಂದಿದ್ದಾರೆ.
ಉಡುಪಿಯ ಜನತೆಯ ಸಮಸ್ಯೆಗಳ ಬಗ್ಗೆ ಪ್ರಸಾದ್ ಕಾಂಚನ್ ಅವರಿಗೆ ನೈಜ ಕಾಳಜಿ ಇದ್ದಲ್ಲಿ ತಮ್ಮದೇ ರಾಜ್ಯ ಸರಕಾರದ ಸಚಿವರಿಗೆ ತಿಳಿಸಿ, ಪರಿಹಾರ ರೂಪಿಸಲು ಮುಂದಾಗುವುದು ಉತ್ತಮ. ಕೇವಲ ಪ್ರಚಾರದ ತೆವಲಿಗೆ ಇಂತಹ ಹತಾಶ ವೈಯುಕ್ತಿಕ ಟೀಕೆಗಳನ್ನು ಮಾಡುವುದರಿಂದ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ ಎಂದು ಪ್ರಭಾಕರ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.