ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ಇಲ್ಲ -ರಘುಪತಿ ಭಟ್

Spread the love

ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ಇಲ್ಲ -ರಘುಪತಿ ಭಟ್

ಮಡಿಕೇರಿ: ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದವರಿಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪುತ್ತಿದೆ ಎಂಬ ಭಾವನೆ ಬಲವಾಗುತ್ತಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ ರಘುಪತಿ ಭಟ್ ಹೇಳಿದರು.

ಅವರು ಶುಕ್ರವಾರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನನಗೆ ಪಕ್ಷದಿಂದ ಯಾವುದೇ ನೋಟಿಸ್ ಬಂದಿಲ್ಲ, ಬಂದರೆ ವಿವರವಾದ ಉತ್ತರ ಕೊಡುವೆ. ಮಾತ್ರವಲ್ಲ ಪಕ್ಷದ ಶಿಸ್ತು ಸಮಿತಿ ವಿಚಾರಣೆಗೆ ಕರೆದರೆ ಹಾಜರಾಗಿ ವಿವರಣೆ ಕೊಡುವುದಾಗಿ ಹೇಳಿದರು.

‘ಪಕ್ಷದಲ್ಲಿ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಮೊದಲು ಟಿಕೆಟ್ ಕೊಡಲು ಬೂತ್ಮಟ್ಟದಿಂದ ಅಭಿಪ್ರಾಯ ಪಡೆಯುತ್ತಿದ್ದರು. ಆದರೆ ಇದೀಗ ಅದನ್ನು ಮಾಡುತ್ತಿಲ್ಲ. ಅಭಿಪ್ರಾಯ ಕೇಳದೆ ಟಿಕೆಟ್ ಹಂಚಿಕೆ ಮಾಡುತ್ತಿದ್ದಾರೆ. ಪರಿವಾರದ ಪ್ರಮುಖರ ಸಲಹೆಯನ್ನು ಸಹ ಪರಿಗಣಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಕ್ಷದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದ್ದೇನೆ. ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ನನ್ನ ಸಾಧನೆ ಆಧಾರದ ಮೇಲೆ ಮತದಾರರು ಈ ಬಾರಿ ನನಗೆ ಆಶೀರ್ವಾದ ಮಾಡಲಿದ್ದಾರೆ. ಕ್ಷೇತ್ರದಲ್ಲಿ ನನ್ನ ಪರವಾದ ವಾತಾವರಣ ಎಲ್ಲೆಡೆ ಬೀಸುತ್ತಿದೆ’ ಎಂದರು.

ನನಗೆ ಏಕೆ ಎರಡು ಬಾರಿ ಟಿಕೆಟ್ ಕೊಡಲಿಲ್ಲ ಎಂಬುದು ಗೊತ್ತಿಲ್ಲ ಯಾರು ಟಿಕೆಟ್ ತಪ್ಪಿಸಿದರು ಎಂಬುದೂ ಗೊತ್ತಿಲ್ಲ ಆದರೆ ಯಾರೋ ನಾಯಕರು ತಪ್ಪಿಸಿದಂತೂ ಹೌದು ಎಂದರು.

ಹಿಜಾಬ್ ವಿಷಯವನ್ನು ನಾನು ಸೃಷ್ಠಿ ಮಾಡಿದ್ದಲ್ಲ ಬದಲಾಗಿ ಕೆಲವು ಮಕ್ಕಳನ್ನು ಕೆಲವೊಂದು ಸಂಘಟನೆಗಳು ದಾರಿ ತಪ್ಪಿಸಿದರು. ನಾನು ಎಂದೂ ಕೂಡ ಮುಸ್ಲಿಂರು ಮತ್ತು ಕ್ರೈಸ್ತರ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು.

‘ನಾನು ಶಾಸಕ ಆಗಿದ್ದಾಗ ಸಾಧಕ ಶಿಕ್ಷಕ ಪ್ರಶಸ್ತಿ ಮತ್ತು ಉತ್ತಮ ಶಾಲೆಗಳಿಗೆ ಪ್ರಶಸ್ತಿ ನೀಡಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ. ಇದಲ್ಲದೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಪದವೀಧರರ ಬೆನ್ನಿಗೆ ಸದಾ ನಾನು ನಿಲ್ಲುತ್ತೇನೆ. ನಿರ್ಲಕ್ಷ್ಯ ಮಾಡುವುದಿಲ್ಲ’ ಎಂದು ಹೇಳಿದರು.

‘ಹಳೇ ಪಂಚಣಿ ಜಾರಿಗೊಳಿಸಲು ಹೋರಾಟ ಮಾಡುತ್ತೇನೆ. 7ನೇ ವೇತನ ಆಯೋಗ ಜಾರಿಗೆ ಪ್ರಯತ್ನಿಸುತ್ತೇನೆ. ಶಿಕ್ಷಕರ ನೇಮಕಾತಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಅನುದಾನಿತ ಶಾಲೆಗಳಲ್ಲಿ ಸಾಕಷ್ಟು ಸಮಸ್ಯೆ ಇದ್ದು ಅವುಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಹೀಗಾಗಿಯೇ ನನಗೆ ಈ ಬಾರಿ ಮತದಾರರು ಆರ್ಶೀವಾದ ಮಾಡಬೇಕು’ ಎಂದು ಹೇಳಿದರು.


Spread the love

Leave a Reply